ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ, ಅತ್ಯಾಚಾರದ ಬಗ್ಗೆ ಹಲವಾರು ನಟಿಯರು ದೂರು ನೀಡುತ್ತಿರುವ ಬೆನ್ನಲ್ಲೇ ತಮಿಳು ಚಿತ್ರರಂಗದಲ್ಲಿಯೂ ಲೈಂಗಿಕ ಕಿರುಕುಳ ನಡೆಯತ್ತಿರುವ ಬಗ್ಗೆ ಖ್ಯಾತ ನಟಿಯೊಬ್ಬರು ಪ್ರಸ್ತಾಪಿಸಿದ್ದಾರೆ.
ಎನ್‌ಡಿಟಿವಿ ಸಂದರ್ಶನದಲ್ಲಿ ಮಾತನಾಡಿದ ಜನಪ್ರಿಯ ತಮಿಳು ನಟಿ ಮತ್ತು ಧಾರಾವಾಹಿ ನಿರ್ಮಾಪಕಿ ಕುಟ್ಟಿ ಪದ್ಮಿನಿ, “ತಮಿಳು ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ವಿಪರೀತವಾಗಿದೆ” ಎಂದು ಹೇಳಿದ್ದಾರೆ.
ಕೇರಳದಲ್ಲಿ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯ ಬೆನ್ನಲ್ಲೇ ಮಲಯಾಳಂ ಚಿತ್ರರಂಗವೇ ತಲ್ಲಣಿಸಿದೆ. ಮಲಯಾಳಂ ಕಲಾವಿದರ ಚಲನಚಿತ್ರ ಸಂಸ್ಥೆಯನ್ನೇ (ಅಮ್ಮ) ಸಂಪೂರ್ಣವಾಗಿ ವಿಸರ್ಜಿಸಲಾಗಿದೆ.
ಈ ನಡುವೆ ತಮಿಳು ಚಿತ್ರರಂಗದ ಬಗ್ಗೆ ಕುಟ್ಟಿ ಪದ್ಮಿನಿ ಪ್ರಸ್ತಾಪಿಸಿದ್ದಾರೆ. “ತಮಿಳು ಟೆಲಿವಿಷನ್ ಶೋ ಉದ್ಯಮದಲ್ಲಿ ಅತಿರೇಕದ ಲೈಂಗಿಕ ಕಿರುಕುಳ ನಡೆಯುತ್ತಿದೆ. ಇದರಿಂದಾಗಿ ಅನೇಕ ಮಹಿಳೆಯರು ‘ಆತ್ಮಹತ್ಯೆ’ ಮಾಡಿಕೊಂಡಿದ್ದಾರೆ” ಎಂದು ಕುಟ್ಟಿ ಪದ್ಮಿನಿ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ | ಮಲಯಾಳಂ ನಟ, ಶಾಸಕ ಮುಖೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಹಾಗೆಯೇ ಸಂದರ್ಶನದಲ್ಲಿ ಈ ಹಿಂದೆ ಲೈಂಗಿಕ ಕಿರುಕುಳದ ಆರೋಪ ಮಾಡಿದ ಗಾಯಕಿ ಚಿನ್ಮಯಿ ಮತ್ತು ನಟಿ ಶ್ರೀರೆಡ್ಡಿ ಮೇಲೆ ತಮಿಳು ಚಲನಚಿತ್ರೋದ್ಯಮ ವಿಧಿಸಿದ ನಿಷೇಧದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಗೀತರಚನೆಕಾರ ವೈರಮುತ್ತು ವಿರುದ್ಧ ಗಾಯಕಿ ಚಿನ್ಮಯಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು.
“ನಿರ್ದೇಶಕರು ಮತ್ತು ತಂತ್ರಜ್ಞರು ಟಿವಿ ಧಾರಾವಾಹಿಗಳಲ್ಲಿನ ಮಹಿಳಾ ಕಲಾವಿದರಿಂದ ಲೈಂಗಿಕವಾಗಿ ಸಹಕರಿಸುವಂತೆ ಕೇಳುತ್ತಾರೆ. ಲೈಂಗಿಕ ಕಿರುಕುಳವನ್ನು ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಅನೇಕ ಮಹಿಳೆಯರು ದೂರು ನೀಡುವುದಿಲ್ಲ. ಕೆಲವು ಮಹಿಳೆಯರು ಹಣ ಹೆಚ್ಚಾಗಿ ಗಳಿಸಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಈ ಕಿರುಕುಳವನ್ನು ಸಹಿಸಿಕೊಳ್ಳುತ್ತಾರೆ” ಎಂದು ದೂರಿದ್ದಾರೆ.
“ಕೇರಳದ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ದೂರುಗಳು ದಾಖಲಾದಂತೆ ತಮಿಳುನಾಡಿನಲ್ಲಿ ಯಾವುದೇ ದೂರುಗಳು ದಾಖಲಾಗಿಲ್ಲ. ದೂರು ದಾಖಲಾದರೆ ನಾವು ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ” ಎಂದು ತಮಿಳುನಾಡು ಸಚಿವ ಸ್ವಾಮಿನಾಥನ್ ಹೇಳಿದ್ದಾರೆ.
