ಬಾಲಿವುಡ್ ನಟ ಸಲ್ಮಾನ್ ಖಾನ್ ಬಳಿಕ ಈಗ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರಿಗೆ ರಾಯ್‌ಪುರದಿಂದ ಜೀವ ಬೆದರಿಕೆ ಬಂದಿದೆ. ಮುಂಬೈನ ಬಾಂದ್ರಾದ ಪೊಲೀಸ್ ಠಾಣೆಗೆ ನೇರವಾಗಿ ಬೆದರಿಕೆ ಕರೆ ಬಂದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಛತ್ತೀಸ್‌ಗಢ ರಾಜಧಾನಿ ರಾಯ್‌ಪುರದಿಂದ ಜೀವ ಬೆದರಿಕೆ ಕರೆ ಬಂದಿದೆ. ಅಲ್ಲಿಂದ ಫೈಝಾನ್ ಎಂಬ ಯುವಕ ಶಾರುಖ್ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದು, 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಸಕ್ರಿಯ ಫೋನ್ ಸಂಖ್ಯೆಯ ಮೂಲಕ ಫೈಝಾನ್ ಇರುವ ಸ್ಥಳವನ್ನು ಕೂಡಾ ಪತ್ತೆಹಚ್ಚಲಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ; ಹಾವೇರಿಯಲ್ಲಿ ಆರೋಪಿ ಬಂಧನ
ಕಿಂಗ್ ಖಾನ್‌ನ ಪಠಾನ್ ಮತ್ತು ಜವಾನ್ ಸಿನಿಮಾ ಹಿಟ್ ಆದ ಬಳಿಕ ಅವರಿಗೆ ಕಳೆದ ಅಕ್ಟೋಬರ್‌ನಲ್ಲಿ ಕೊಲೆ ಬೆದರಿಕೆ ಬಂದಿದೆ. ಇದಾದ ಬೆನ್ನಲ್ಲೇ ಮುಂಬೈ ಪೊಲೀಸರು ಶಾರುಖ್ ಭದ್ರತೆಯನ್ನು ಹೆಚ್ಚಿಸಿದರು. ಖಾನ್‌ಗೆ ವೈ+ ಭದ್ರತೆಯನ್ನು ನೀಡಲಾಗಿದೆ. ಈ ಭದ್ರತೆಯಡಿ ದಿನದ 24 ಗಂಟೆಯೂ ಕೂಡಾ ಆರು ಶಸ್ತ್ರಸಜ್ಜಿತ ಸಿಬ್ಬಂದಿಗಳು ಸುತ್ತಲಿ ಇರುತ್ತಾರೆ. ಇದಕ್ಕೂ ಮೊದಲು ಶಾರುಖ್ ಖಾನ್ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಹೊಂದಿದ್ದರು.
ಬಾಲಿವುಡ್‌ನ ಜನಪ್ರಿಯ ನಟ ಸಲ್ಮಾನ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ತಂಡದಿಂದ ಜೀವ ಬೆದರಿಕೆ ಬಂದ ಬಳಿಕ ಇದೀಗ ಶಾರುಖ್ ಖಾನ್‌ಗೂ ಬೆದರಿಕೆ ಬಂದಿದೆ. ಈಗಾಗಲೇ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆಗೆ ಸಂಬಂಧಿಸಿದಂತೆ 32 ವರ್ಷದ ರಾಜಸ್ಥಾನ ಮೂಲದ ಭೀಕಾರಾಂ ಜಲರಾಮ್ ಬಿಷ್ಣೋಯ್ ಯಾನೆ ವಿಕ್ರಮ್ ಎಂಬಾತನನ್ನು ಹಾವೇರಿಯಲ್ಲಿ ಬಂಧಿಸಲಾಗಿದೆ.
