ಮಲಯಾಳ ಸಿನಿಮಾದ ಆಧುನಿಕ ಯುಗದ ಪ್ರಮುಖ ಪ್ರತಿಭಾನ್ವಿತ ನಿರ್ದೇಶಕ ಮತ್ತು ಸಿನೆಮಟೋಗ್ರಾಫರ್ ಶಾಜಿ ಎನ್. ಕರುಣ್ (73) ನಿಧನರಾಗಿದ್ದಾರೆ.
ಕ್ಯಾನ್ಸರ್ ವ್ಯಾಧಿಯೊಂದಿಗೆ ದೀರ್ಘ ಹೋರಾಟದ ನಂತರ, ತಿರುವನಂತಪುರದ ಅವರ ನಿವಾಸ “ಪಿರವಿ”ಯಲ್ಲಿ ಕೊನೆಯುಸಿರೆಳೆದರು.
ಶಾಜಿ ಎನ್. ಕರುಣ್ “ಪಿರವಿ” (1978) ಅವರ ಚೊಚ್ಚಲ ಚಿತ್ರ. ಈ ಚಿತ್ರವು ಟಿ.ವಿ. ಈಚರ ವಾರಿಯರ್ ಅವರ ನಿಜ ಜೀವನವನ್ನು ಆಧರಿಸಿತ್ತು, ಅವರ ಮಗ ಪಿ. ರಾಜನ್ (ಕೊಲ್ಲಂ ರೀಜನಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ) ಕಾಣೆಯಾದ ನಂತರ ಕಾನೂನು ಹೋರಾಟವನ್ನು ಕಾಂಗ್ರೆಸ್ ನೇತೃತ್ವದ ಕೇರಳ ಸರ್ಕಾರದ ವಿರುದ್ಧ ನಡೆಸಿದ್ದರು. ತುರ್ತುಪರಿಸ್ಥಿತಿಯ ಸಮಯದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಹಿಂಸೆಯಿಂದಾಗಿ ರಾಜನ್ ಮರಣಹೊಂದಿದ್ದರೆಂದು ಆರೋಪಿಸಲಾಗಿತ್ತು. ಈ ಚಿತ್ರವು ಜಾಗತಿಕ ಮನ್ನಣೆ ಗಳಿಸಿತು ಮತ್ತು 31 ಪ್ರಶಸ್ತಿಗಳನ್ನು ಗೆದ್ದುಕೊಂಡಿತು, 1989ರ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ “ಕ್ಯಾಮೆರಾ ಡಿ’ಓರ್ — ಮೆನ್ಷನ್ ಸ್ಪೆಷಿಯಲ್”, ಲೊಕಾರ್ನೊ ಫಿಲ್ಮ್ ಫೆಸ್ಟಿವಲ್ನಲ್ಲಿ “ಸಿಲ್ವರ್ ಲೆಪರ್ಡ್” ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ “ಅತ್ಯುತ್ತಮ ಚಲನಚಿತ್ರ” ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿತು. ಶಾಜಿ ಅವರು “ಅತ್ಯುತ್ತಮ ನಿರ್ದೇಶಕ” ಮತ್ತು ಪ್ರೇಂಜಿ ಅವರು “ಅತ್ಯುತ್ತಮ ನಟ” ಪ್ರಶಸ್ತಿಗಳನ್ನು 1989ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಪಡೆದುಕೊಂಡರು.
ಅವರ ಎರಡನೇ ಚಿತ್ರ “ಸ್ವಾಹಂ” (1994) ಸಹ ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಮನ್ನಣೆ ಪಡೆದುಕೊಂಡಿತು. ಇದು ಮೀರಾ ನಾಯರ್ ಅವರ “ಸಲಾಂ ಬಾಂಬೆ!” (1988) ನಂತರ ಕಾನ್ ಫಿಲ್ಮ್ ಫೆಸ್ಟಿವಲ್ನ ಮುಖ್ಯ ವಿಭಾಗದಲ್ಲಿ ಸ್ಪರ್ಧಿಸಿದ ಎರಡನೇ ಭಾರತೀಯ ಚಿತ್ರವಾಗಿತ್ತು.
ಶಾಜಿ ಅವರ ಮೂರನೇ ನಿರ್ದೇಶನದ “ವಾನಪ್ರಸ್ಥಂ” (1999) ಅವರ ವೃತ್ತಿಜೀವನದಲ್ಲಷ್ಟೇ ಅಲ್ಲ, ಮಲಯಾಳಮ್ ಸೂಪರ್ ಸ್ಟಾರ್ ಮೋಹನ್ ಲಾಲ್ ವೃತ್ತಿಜೀವನದಲ್ಲೂ ಒಂದು ಮೈಲಿಗಲ್ಲು ಚಿತ್ರವಾಗಿ ಹೊರಹೊಮ್ಮಿತು. ದಕ್ಷಿಣ ಭಾರತದ ಮೊದಲ ಇಂಡೋ-ಫ್ರೆಂಚ್ ಸಹ-ನಿರ್ಮಾಣ ಚಿತ್ರವಾದ “ವಾನಪ್ರಸ್ಥಂ” 1999ರ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ “ಅನ್ ಸರ್ಟನ್ ರಿಗಾರ್ಡ್” ವಿಭಾಗದಲ್ಲಿ ಪ್ರದರ್ಶನಗೊಂಡಿತು. ಇಸ್ತಾಂಬುಲ್ ಮತ್ತು ಮುಂಬೈ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಪ್ರಮುಖ ಮನ್ನಣೆ ಪಡೆದ ಈ ಚಿತ್ರವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ “ಅತ್ಯುತ್ತಮ ಚಲನಚಿತ್ರ”, “ಅತ್ಯುತ್ತಮ ನಟ” ಮತ್ತು “ಅತ್ಯುತ್ತಮ ಸಂಕಲನ” ಪ್ರಶಸ್ತಿಗಳನ್ನು ಗೆದ್ದುಕೊಂಡಿತು.
ಅವರ ನಂತರದ ಚಿತ್ರಗಳಾದ “ನಿಷಾದ್” (2002), “ಕುಟ್ಟಿ ಸ್ರಂಕ್” (2009), “ಸ್ವಪಾನಂ” (2013) ಮತ್ತು “ಒಳು” (2018) ಸಹ ಗಮನಾರ್ಹ ಮನ್ನಣೆ ಗಳಿಸಿದವು ಮತ್ತು ಮಾನವ ಸ್ವಭಾವದ ಮಾರ್ಮಿಕ ಚಿತ್ರಣಕ್ಕಾಗಿ ಹೆಸರಾದವು.
1974ರಲ್ಲಿ ಪುಣೆಯ ಪ್ರತಿಷ್ಠಿತ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (FTII)ಯಿಂದ ಸಿನಿಮಾಟೋಗ್ರಫಿಯಲ್ಲಿ ಡಿಪ್ಲೊಮಾ ಪಡೆದರು. ತಮ್ಮ ಶಿಕ್ಷಣದ ನಂತರ, ಅವರು
ಸಿನಿಮಾಟೋಗ್ರಫರ್ ಆಗಿ ಕೆಲಸ ಪ್ರಾರಂಭಿಸಿದರು ಮತ್ತು ತಮ್ಮ ಕಲೆಯಿಂದ ಶೀಘ್ರವೇ ಮಲೆಯಾಳಂನ ದಿಗ್ಗಜ ನಿರ್ದೇಶಕರ ಗಮನ ಸೆಳೆದರು.
ಅಸಾಧಾರಣ ಚಲನಚಿತ್ರ ನಿರ್ಮಾಪಕ ಜಿ. ಅರವಿಂದನ್ ಅವರ ಎರಡನೇ ಚಿತ್ರ “ಕಾಂಚನ ಸೀತಾ”ದ (1977)ಸಿನೆಮಾಟೋಗ್ರಫಿ ಅವರದಾಯಿತು. ಅರವಿಂದನ್ ಅವರ ಚಿತ್ರಗಳಲ್ಲಿ ಕೆಲಸ ಮಾಡುವುದು ಶಾಜಿ ಅವರಿಗೆ ಶೀಘ್ರವೇ ಹೆಚ್ಚಿನ ಪ್ರಶಂಸೆಯನ್ನು ಗಳಿಸಿಕೊಟ್ಟಿತು.
“ಥಂಪು” (1978), “ಕುಮ್ಮಟ್ಟಿ” (1979), “ಎಸ್ತಪ್ಪನ್” (1980), “ಪೊಕ್ಕುವೆಯಿಲ್” (1982), “ಚಿದಂಬರಂ” (1986), “ಒರಿಡತ್ತು” (1980) ಮತ್ತು “ಉನ್ನಿ” (1988) ಹೀಗೆ ಅರವಿಂದನ್ ಅವರ ಬಹುತೇಕ ಎಲ್ಲಾ ಚಿತ್ರಗಳಲ್ಲಿ ಶಾಜಿ ಅವರು ಕ್ಯಾಮರಾ ನಿರ್ವಹಿಸಿದ್ದರು.
ಅದೇ ಯುಗದಲ್ಲಿ, ಅವರು ಕೆ.ಜಿ. ಜಾರ್ಜ್ ಅವರ “ಲೇಖಾಯುಡೆ ಮರಣಂ ಒರು ಫ್ಲ್ಯಾಶ್ಬ್ಯಾಕ್” (1983) ಮತ್ತು “ಪಂಚವಾಡಿ ಪಾಲಂ” (1984), ಪಿ. ಪದ್ಮರಾಜನ್ ಅವರ “ಕೂಡೇವಿಡೆ” (1983) ಮತ್ತು “ಅರಪ್ಪಟ್ಟ ಕೆಟ್ಟಿಯ ಗ್ರಾಮತಿಲ್” (1986), ಟಿ. ಹರಿಹರನ್ ಅವರ “ನಖಕ್ಷತಂಗಳ್” (1986), “ಪಂಚಾಗ್ನಿ” (1986) ಮತ್ತು “ಸರ್ಗಂ” (1992), ಹಾಗೂ ಎಂ.ಟಿ. ವಾಸುದೇವನ್ ನಾಯರ್ ಅವರ “ಮಂಜು” (1983) ಹೀಗೆ ಅನೇಕ ಪ್ರಸಿದ್ಧ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದರು