ಕಿರಿಯ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿ 30 ಬಾರಿ ಕಪಾಳಕ್ಕೆ ಹೊಡೆದು, ಉಗುಳನ್ನು ನೆಕ್ಕುವಂತೆ ಒತ್ತಾಯಿಸಿ, ಕೊಲೆ ಬೆದರಿಕೆ ಹಾಕಿ, ಶೌಚಾಲಯದಲ್ಲಿ ಕೂಡಿ ಹಾಕಿ ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರದಲ್ಲಿ ನಡೆದಿದೆ.
2ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮೇಲೆ 6ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಹಲ್ಲೆ ನಡೆಸಿದ್ದಾನೆ. ಘಟನೆಯಿಂದ ಸಂತ್ರಸ್ತ ವಿದ್ಯಾರ್ಥಿ ಆಘಾತಕ್ಕೊಳಗಾಗಿದ್ದು, ಒಂದು ತಿಂಗಳಿನಿಂದ ಜ್ವರದಿಂದ ಬಳಲುತ್ತಿದ್ದಾನೆ. ಮಾತ್ರವಲ್ಲದೆ, ಶಾಲೆಗೆ ಹೋಗಲು ನಿರಾಕರಿಸಿದ್ದಾನೆ. ಆತನ ನಡವಳಿಕೆಯಿಂದ ಆತಂಕಗೊಂಡ ಪೋಷಕರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಬಳಿ ತಾವು ಅನುಭವಿಸಿದ ಭಯಾನಕ ಘಟನೆಯ ಬಗ್ಗೆ ವಿದ್ಯಾರ್ಥಿ ಬಾಲಕ ಹೇಳಿಕೊಂಡಿದ್ದಾನೆ.
“ನಮ್ಮ ಮಗ ಹಲವು ದಿನಗಳಿಂದ ಜ್ವರ, ಆತಂಕದಿಂದ ಬಳಲುತ್ತಿದ್ದನು. ಮಾರ್ಚ್ 4 ರಂದು ಶಾಲೆಗೆ ಹೋಗುವಂತೆ ಕೇಳಿದಾಗ, ಆತ ಶಾಲೆಗೆ ಹೋಗಲು ನಿರಾಕರಿಸಿದನು. ಆಗ್ರಾದಲ್ಲಿ 3-4 ವೈದ್ಯರ ಬಳಿ ಕರದೊಯ್ದರೂ, ಆತನ ಅನಾರೋಗ್ಯಕ್ಕೆ ಕಾರಣವೇನು ಎಂಬುದು ಗೊತ್ತಾಗಲಿಲ್ಲ. ಇತ್ತೀಚೆಗೆ, ಆತ ನಿದ್ರೆಯಲ್ಲಿದ್ದಾಗ, ‘ಅವನು ನನ್ನನ್ನು ಹೊಡೆಯುತ್ತಾನೆ’ ಎಂದು ಕನವರಿಸುತ್ತಿದ್ದ. ಬಳಿಕ, ಆತನನ್ನು ಕೌನ್ಸೆಲಿಂಗ್ಗೆ ಒಳಪಡಿಸಿದಾಗ, ತಾನು ಎದುರಿಸಿದ್ದ ಭೀಕರ ಘಟನೆಯ ಬಗ್ಗೆ ವೈದ್ಯರ ಬಳಿ ಹೇಳಿಕೊಂಡಿದ್ದಾನೆ” ಎಂದು ಬಾಲಕನ ತಾಯಿ ಹೇಳಿದ್ದಾರೆ.
“ಶಾಲಾ ಬಸ್ನಲ್ಲಿ ತೆರಳುವಾಗ ತನ್ನ ಹಿರಿಯ ವಿದ್ಯಾರ್ಥಿ ಶೂಗಳಿಗೆ ಉಗುಳಿ ಅದನ್ನು ನೆಕ್ಕಲು ಹೇಳಿದನು. ತನಗೆ 30 ಬಾಕಿ ಕಪಾಳಕ್ಕೆ ಹೊಡೆದನು. ಕತ್ತು ಹಿಸುಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದನು. ಮಾತ್ರವಲ್ಲದೆ, ಶೌಚಾಲಯದಲ್ಲಿ ಕೂಡಿ ಹಾಕಿದ್ದನು” ಎಂದು ವೈದ್ಯರ ಬಳಿ ಬಾಲಕಿ ಹೇಳಿಕೊಂಡಿದ್ದಾನೆ.
ಬಳಿಕ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. “ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ” ಎಂದು ಆಗ್ರಾದ ಸಹಾಯಕ ಪೊಲೀಸ್ ಆಯುಕ್ತ ತಿಳಿಸಿದ್ದಾರೆ.
ಈ ಪ್ರಕರಣವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ವೈಯಕ್ತಿಕವಾಗಿ ನಿಭಾಯಿಸುವುದಾಗಿ ಹೇಳಿದ್ದಾರೆ. “ಸಂತ್ರಸ್ತ ಬಾಲಕನ ಪೋಷಕರು ಮಾರ್ಚ್ 4ರಂದು ನಮಗೆ ದೂರು ನೀಡಿದ್ದಾರೆ. ನಾವು ಒಂದು ಸಮಿತಿ ರಚಿಸಿದ್ದೇವೆ. ವಿದ್ಯಾರ್ಥಿಗಳ ಪ್ರಯಾಣಿಸುವ ಶಾಲಾ ಬಸ್ನ ಅಟೆಂಡರ್ಅನ್ನು ಅಮಾನತುಗೊಳಿಸಿದ್ದೇವೆ. ನಾವು ಬಸ್ನ ವಾಹನದ ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದೇವೆ. ಆರೋಪಿ ವಿದ್ಯಾರ್ಥಿಯನ್ನು ಶಾಲೆಗೆ ಬಾರದಂತೆ ತಿಳಿಸಲಾಗಿದೆ” ಎಂದು ಹೇಳಿದ್ದಾರೆ.