ದೇಶದ ಅತೀ ದೊಡ್ಡ ಸಿಮೆಂಟ್ ಕಂಪನಿಗಳಲ್ಲಿ ಒಂದಾದ ಶ್ರೀ ಸಿಮೆಂಟ್ಸ್ ₹ 23 ಸಾವಿರ ಕೋಟಿ ರೂಪಾಯಿಗೂ ಅಧಿಕ ತೆರಿಗೆ ವಂಚನೆ ಎಸಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಶನಿವಾರ ರಾಜಸ್ಥಾನದ ಹಲವು ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸುಮಾರು 23 ಸಾವಿರ ಕೋಟಿ ರೂಪಾಯಿಗಳಷ್ಟು ತೆರಿಗೆ ವಂಚನೆ ನಡೆದಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ವರದಿ ಪ್ರಕಟವಾದ ಬಳಿಕ ಶ್ರೀ ಸಿಮೆಂಟ್ಸ್ ಷೇರುಗಳು ಶೇಕಡ 10ರಷ್ಟು ಕುಸಿತ ಕಂಡಿವೆ.
ಮಾಧ್ಯಮಗಳ ವರದಿಯಂತೆ, ಶ್ರೀ ಸಿಮೆಂಟ್ಸ್ ಸಂಸ್ಥೆ ನಕಲಿ ಒಪ್ಪಂದಗಳ ಮೂಲಕ ಪ್ರತೀ ವರ್ಷವೂ 1,200 ರಿಂದ 1,400 ಕೋಟಿ ರೂನಷ್ಟು ತೆರಿಗೆ ಹಣ ವಂಚಿಸುತ್ತಿದೆ. ಇದರಿಂದ ಕೇಂದ್ರ ಮತ್ತು ರಾಜಸ್ಥಾನ ಸರ್ಕಾರದ ಆದಾಯಕ್ಕೆ ನಷ್ಟ ಉಂಟಾಗಿದೆ. ಆದರೆ ವಂಚನೆ ಬಗ್ಗೆ ತೆರಿಗೆ ಇಲಾಖೆ ಅಥವಾ ರಾಜಸ್ಥಾನ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಈ ಸುದ್ದಿ ಓದಿದ್ದೀರಾ? 16 ವರ್ಷದವರು ಲೈಂಗಿಕತೆಯ ಬಗ್ಗೆ ನಿರ್ಧರಿಸಬಲ್ಲರು ಎಂದ ಮೇಘಾಲಯ ಹೈಕೋರ್ಟ್; ಪೋಕ್ಸೋ ಎಫ್‌ಐಆರ್ ರದ್ದು
1979ರಲ್ಲಿ ರಾಜಸ್ಥಾನದಲ್ಲಿ ಆರಂಭಗೊಂಡ ಶ್ರೀ ಸಿಮೆಂಟ್ಸ್ ಕಂಪನಿ ಸದ್ಯ ಕೋಲ್ಕತಾದಲ್ಲಿ ಪ್ರಧಾನ ಕಚೇರಿ ಹೊಂದಿದೆ. ರಾಜಸ್ಥಾನ, ಉತ್ತರಾಖಂಡ್, ಹರ್ಯಾಣ, ಉತ್ತರಪ್ರದೇಶ, ಛತ್ತೀಸ್ಗಡ ಮತ್ತು ಬಿಹಾರ ರಾಜ್ಯಗಳಲ್ಲಿ ಒಟ್ಟು 10ಕ್ಕೂ ಹೆಚ್ಚು ಸಿಮೆಂಟ್ ಉತ್ಪಾದಕ ಘಟಕಗಳು ಹಾಗೂ ವಿದ್ಯುತ್ ಘಟಕಗಳನ್ನು ಹೊಂದಿದೆ.
ತೆರಿಗೆ ವಂಚನೆ ಆರೋಪಗಳನ್ನು ತಳ್ಳಿ ಹಾಕಿರುವ ಸಂಸ್ಥೆಯು, ತಮ್ಮ ಕಚೇರಿಗಳಲ್ಲಿ ನಡೆಯುತ್ತಿರುವ ತೆರಿಗೆ ಪರಿಶೀಲನೆ ಇನ್ನೂ ಪೂರ್ಣಗೊಂಡಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಯು ಸತ್ಯಕ್ಕೆ ದೂರವಾದುದು. ಕಂಪನಿಯ ಆಡಳಿತವು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಪೂರ್ಣ ಸಹಕಾರ ನೀಡುತ್ತಿದೆ ಎಂದು ತಿಳಿಸಿದೆ.
ತೆರಿಗೆ ದಾಳಿಯಿಂದಾಗಿ ಕಂಪನಿಯ ಷೇರುಗಳ ದರವು ಶೇಕಡ 10ರಷ್ಟು ಇಳಿಕೆ ಕಂಡುಬಂದು 22,630.75 ರೂಗೆ ತಲುಪಿದೆ. ಕಳೆದ ಮೂರು ವರ್ಷಗಳ ಬಳಿಕ ಕಂಪನಿಯ ಷೇರುಗಳ ದೊಡ್ಡ ಇಳಿಕೆ ಇದಾಗಿದೆ.