ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ನಡೆದ ದಿನ, ಝೊಮ್ಯಾಟೊ ಉತ್ತರ ಭಾರತದಲ್ಲಿ ಮಾಂಸಾಹಾರ ವಿತರಣೆಯನ್ನು ಸ್ಥಗಿತಗೊಳಿಸಿತ್ತು.
ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಕೆಲವು ರಾಜ್ಯಗಳಲ್ಲಿ ಮಾಂಸದ ಅಂಗಡಿ ಹಾಗೂ ಮದ್ಯ ಮಾರಾಟ ಬಂದ್ ಮಾಡಲಾಗಿತ್ತು. ಸರ್ಕಾರದ ಆದೇಶದ ಮೇರೆಗೆ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಮಾಂಸಾಹಾರ ವಿತರಣೆಯನ್ನು ಝೊಮ್ಯಾಟೊ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.
ಝೊಮ್ಯಾಟೊನಿಂದ ಏಕಾಏಕಿ ಮಾಂಸಾಹಾರ ವಸ್ತುಗಳ ಆಯ್ಕೆಗಳ ಪಟ್ಟಿ ಕಾಣೆಯಾಗಿದೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಝೊಮ್ಯಾಟೊದಲ್ಲಿ ಮಾಂಸಾಹಾರ ಆಯ್ಕೆ ಪಟ್ಟಿ ಇಲ್ಲದ ಬಗ್ಗೆ ನಾನಾ ರೀತಿಯಲ್ಲಿ ಚರ್ಚೆಗಳು ನಡೆದಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಝೊಮ್ಯಾಟೊ, “ಸರ್ಕಾರದ ಸೂಚನೆಯಂತೆ ಉತ್ತರ ಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮಾಂಸಾಹಾರ ಆಹಾರ ವಿತರಣೆಯನ್ನು ಸ್ಥಗಿತಗೊಳಿಸಿದ್ದೇವೆ. ಈ ಸ್ಪಷ್ಟೀಕರಣವು ಝೊಮ್ಯಾಟೊ ಬಳಕೆದಾರರಿಗೆ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ” ಎಂದು ಹೇಳಿದೆ.
ಉತ್ತರ ಪ್ರದೇಶದ ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾದ ಮುಖ್ಯಸ್ಥ ವರುಣ್ ಖೇರಾ ಅವರು, “ಜನವರಿ 22 ರಂದು ರಾಜ್ಯದಾದ್ಯಂತ ರೆಸ್ಟೋರೆಂಟ್‌ಗಳು ಒಟ್ಟಾಗಿ ಸಸ್ಯಾಹಾರ ಆಹಾರವನ್ನು ಮಾತ್ರ ನೀಡಲು ನಿರ್ಧರಿಸಿದ್ದವು. ಸರ್ಕಾರದ ಆದೇಶವನ್ನು ಗೌರವಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ಹೇಳಿದರು.
“ಭಾನುವಾರದಂದು ಅಂಗಡಿಗಳನ್ನು ಮುಚ್ಚಲು ಸರ್ಕಾರ ಹೇಳಿಲ್ಲ. ಸರ್ಕಾರದ ಆದೇಶವು ಸೋಮವಾರ ಮಾತ್ರ ಅಂಗಡಿ ಮುಚ್ಚಲು ತಿಳಿಸಿತ್ತು. ಅನೇಕ ಜನರು ಈಗಾಗಲೇ ಈ ಸಂದರ್ಭವನ್ನು ಆಚರಿಸುತ್ತಿರುವುದರಿಂದ, ಎಲ್ಲ ಸಂಭ್ರಮದ ನಡುವೆ ಮಾಂಸ ಮಾರಾಟ ಮಾಡುವುದು ಅನುಚಿತವೆಂದು ಭಾವಿಸಿ, ಸ್ವಯಂಪ್ರೇರಣೆಯಿಂದ ಅಂಗಡಿಗಳನ್ನು ಮುಚ್ಚಿದ್ದೆವು” ಎಂದು ಗಾಜಿಯಾಬಾದ್‌ನ ಮಾಂಸದ ಅಂಗಡಿಯ ಮಾಲೀಕ ಮೊಹಮ್ಮದ್ ಎಹ್ಸಾನುಲ್ಲಾ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದೀರ್ಘಕಾಲದ ಪ್ರಕರಣ: ರಾಜ್ಯದಲ್ಲಿ 200 ಮಂದಿ ಆರೋಪಿಗಳ ಬಂಧನ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೆ ಅನುಗುಣವಾಗಿ ಜನವರಿ 22 ರಂದು ಸಂಜೆ 4 ಗಂಟೆಯವರೆಗೆ ಮಾಂಸದ ಅಂಗಡಿಗಳು ಮತ್ತು ಕಸಾಯಿಖಾನೆಗಳನ್ನು ಮುಚ್ಚುವುದಾಗಿ ಘೋಷಿಸಿದ್ದರು.