ನಾವು ನಮ್ಮ ಜಮೀನುಗಳ ಉಳಿವಿಗಾಗಿ, ನಮಗಾಗಿ ಮಾತ್ರ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಕೊನೆಯ ಉಸಿರು ಇರುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ. ಈ ಪ್ರಕ್ರಿಯೆಯಲ್ಲಿ ನಾವು ನಮ್ಮ ಪ್ರಾಣವನ್ನು ಕಳೆದುಕೊಂಡರೂ ಸರಿಯೇ, ನಮ್ಮ ಭೂಮಿಯನ್ನು ಕಳೆದುಕೊಳ್ಳಲು ಸಿದ್ದರಿಲ್ಲ...
”ನಾವು ಸಾಯಲು ಸಿದ್ದರಿದ್ದೇವೆ. ಆದರೆ, ಬದುಕಿರುವವರೆಗೂ ಸಿಯಾಂಗ್ ನದಿಗೆ ಅಣೆಕಟ್ಟು ಕಟ್ಟಲು ಬಿಡುವುದಿಲ್ಲ. ನಮ್ಮ ಉಸಿರಿರುವವರೆಗೂ ಅಣೆಕಟ್ಟು ನಿರ್ಮಾಣದ ವಿರುದ್ಧ ಹೋರಾಡುತ್ತೇವೆ” ಎಂದು ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಗೇಕು ಪ್ರದೇಶದ ಜನರು ಹೇಳುತ್ತಿದ್ದಾರೆ. ಅಪ್ಪರ್ ಸಿಯಾಂಗ್ ಅಣೆಕಟ್ಟು ಯೋಜನೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಚೀನಾದಿಂದ ಹರಿದುಬರುವ ಸಿಯಾಂಗ್ ನದಿಗೆ ಅರುಣಾಚಲ ಪ್ರದೇಶದ ಉತ್ತರ ಭಾಗದ ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ಅಣೆಕಟ್ಟು ಕಟ್ಟಲು ಸರ್ಕಾರ ಮುಂದಾಗಿದೆ. ಸುಮಾರು 12 ಗಿಗಾವ್ಯಾಟ್ ಜಲವಿದ್ಯುತ್ ಉತ್ಪಾದನೆಯೂ ಸೇರಿದಂತೆ ವಿವಿದೋದ್ದೇಶಗಳಿಗಾಗಿ ಈ ಯೋಜನೆಯನ್ನು ರೂಪಿಸಿದೆ. ಆದರೆ, ಯೋಜನೆಗೆ ಸಿಯಾಂಗ್ ಜಿಲ್ಲೆಯ ಗೇಕು ಪ್ರದೇಶದ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಅಣೆಕಟ್ಟು ಕಟ್ಟಲು ತಡೆಯೊಡ್ಡುತ್ತಿದ್ದಾರೆ.
ಸ್ಥಳೀಯ ಜನರ ದನಿ, ಹೋರಾಟ ಅಡಗಿಸಲು ಕೇಂದ್ರ ಮತ್ತು ರಾಜ್ಯ ಸಶಸ್ತ್ರ ಪಡೆಗಳನ್ನು ನಿಯೋಜಿಸಲು ಸರ್ಕಾರ ಮುಂದಾಗಿದೆ. ಸರ್ಕಾರದ ದಮನಕಾರಿ ಧೋರಣೆಯನ್ನು ಖಂಡಿಸಿ ಪ್ರತಿಭಟನೆಗಳು ಭುಗಿಲೆದ್ದಿವೆ. ಸಿಯಾಂಗ್, ಅಪ್ಪರ್ ಸಿಯಾಂಗ್ ಹಾಗೂ ಪೂರ್ವ ಸಿಯಾಂಗ್ ಜಿಲ್ಲೆಗಳ ಹಲವಾರು ಗ್ರಾಮಗಳ ಜನರು ಯೋಜನೆಯ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ತಮಗೆ ಸಂವಿಧಾನಬದ್ದವಾಗಿ ದೊರೆತಿರುವ ಅರಣ್ಯ ಹಕ್ಕು ಕಾಯಿದೆ-2006, ಪರಿಸರ ಸಂರಕ್ಷಣಾ ಕಾಯಿದೆ-1986 ಹಾಗೂ ಭೂಸ್ವಾಧೀನ ಮತ್ತು ಪುನರ್ವಸತಿ ಕಾಯಿದೆ-2013 ಸೇರಿದಂತೆ ಹಲವಾರು ಕಾನೂನುಗಳನ್ನು ಉಲ್ಲಂಘಿಸಿ ಸರ್ಕಾರಗಳು ತಮ್ಮನ್ನು ಒಕ್ಕಲೆಬ್ಬಿಸಲು ಮುಂದಾಗಿವೆ ಎಂದು ಆಕ್ರೋಶಗೊಂಡಿದ್ದಾರೆ. ಡಿಸೆಂಬರ್ 15ರಂದು, ಯೋಜನೆಯ ವಿರುದ್ಧ ರೇವ್, ಗೇಕು ಮತ್ತು ಪರೋಂಗ್ ಗ್ರಾಮದಲ್ಲಿ ಹಲವಾರು ಗ್ರಾಮಗಳ ಜನರು ಶಾಂತಿಯುತ ಮೆರವಣಿಗೆ ನಡೆಸಿದ್ದಾರೆ. ಪ್ರತಿಭಟನಾ ಧರಣಿಯನ್ನು ಮುಂದುವರೆಸಿದ್ದಾರೆ.
“ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಿಸಿದಂತೆ ನಮ್ಮ ಒಪ್ಪಿಗೆ ಪಡೆಯಲು ಒತ್ತಾಯಿಸುವ ಅಥವಾ ದಮನಿಸುವ ಯಾವುದೇ ಪ್ರಯತ್ನಗಳನ್ನು ನಾವು ಸಹಿಸುವುದಿಲ್ಲ” ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಆದಾಗ್ಯೂ, ಅರುಣಾಚಲ ಪ್ರದೇಶದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಓಜಿಂಗ್ ಟೇಸಿಂಗ್ ಅವರು, ”ಜಲವಿದ್ಯುತ್ ಉತ್ಪಾದನೆಯು ಯೋಜನೆ ಭಾಗವಷ್ಟೇ. ಯೋಜನೆಯ ಮುಖ್ಯಗುರಿ ರಾಷ್ಟ್ರೀಯ ಭದ್ರತೆಯಾಗಿದೆ. ಸಿಯಾಂಗ್ ನದಿಗೆ ಚೀನಾ ಅಣೆಕಟ್ಟು ಕಟ್ಟಿದ ಬಳಿಕ, ನದಿಯ ಹರಿವನ್ನು ನಿಯಂತ್ರಿಸಲು ಅರುಣಾಚಲದಲ್ಲಿ ಅಣೆಕಟ್ಟು ನಿರ್ಮಿಸುವ ಅಗತ್ಯವಿದೆ. ಇದು, ನದಿಯಲ್ಲಿ ವರ್ಷವಿಡಿ ನೀರು ಇರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ, ಪ್ರವಾಹ ಸಂಭವವನ್ನು ನಿಯಂತ್ರಿಸುತ್ತದೆ” ಎಂದು ಹೇಳಿದ್ದಾರೆ.
”ಯೋಜನೆಯಿಂದ ಪೀಡಿತರಾಗುವ ಎಲ್ಲ ಗ್ರಾಮಗಳ ಜನರೂ ಯೋಜನೆಯ ವಿರುದ್ಧವಿಲ್ಲ. ಯೋಜನೆಯಿಂದ ಭಾದಿತರಾಗುವ ಜನರ ಪೈಕಿ ಕನಿಷ್ಠ 60% ಜನರು ಯೋಜನೆಯ ಪರವಾಗಿದ್ದಾರೆ” ಎಂದು ವಾದಿಸಿದ್ದಾರೆ.
ಸಚಿವರ ವಾದವು ಮೂಗಿಗೆ ತುಪ್ಪ ಸವರುವಂತಿದೆ ಎನ್ನುವ ಗ್ರಾಮಸ್ಥರು ಯೋಜನೆಯ ವಿರುದ್ಧ ಗಟ್ಟಿಯಾಗಿ ನಿಂತಿದ್ದಾರೆ. ಅವರ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಸರ್ಕಾರವು ಡಿಸೆಂಬರ್ 9ರಿಂದ ಗೇಕು, ಪರೋಂಗ್ ಮತ್ತು ಪಾಸಿಘಾಟ್ ಸೇರಿದಂತೆ ಕೆಲ ಹಳ್ಳಿಗಳಲ್ಲಿ ರಾಜ್ಯ ಸಶಸ್ತ್ರ ಪಡೆಗಳನ್ನು ನಿಯೋಜಿಸಿದೆ.
“ಸಶಸ್ತ್ರ ಪಡೆಗಳನ್ನು ನಿಯೋಜಿಸಿರುವ ರಾಜ್ಯ ಸರ್ಕಾರದ ನಡೆಯು ಯೋಜನೆಯ ಪಾರದರ್ಶಕತೆ ಮತ್ತು ನೈತಿಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸ್ಥಳೀಯ ಜನರ ಹಕ್ಕುಗಳನ್ನು ರಕ್ಷಿಸುವ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಕಾನೂನುಗಳ ಸಂಪೂರ್ಣ ಉಲ್ಲಂಘನೆಯನ್ನು ಸೂಚಿಸುತ್ತದೆ” ಎಂದು ಈಶಾನ್ಯ ಮಾನವ ಹಕ್ಕುಗಳ ಸಂಘಟನೆ (NEHR) ಅರುಣಾಚಲದ ಮುಖ್ಯಮಂತ್ರಿ ಮತ್ತು ಅಧಿಕಾರಿಗಳಿಗೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದೆ.
ಗ್ರಾಮಗಳಲ್ಲಿ ಸಶಸ್ತ್ರ ಪಡೆಗಳ ನಿಯೋಜನೆಯು ವಿಶ್ವಸಂಸ್ಥೆ ಘೋಷಿಸಿರುವ ‘UNDRIP’ಯ 32(2) ವಿಧಿಯನ್ನು (ಸ್ಥಳೀಯ ಜನರು ತಮ್ಮ ಭೂಮಿ ಅಥವಾ ಪ್ರಾಂತ್ಯಗಳ ಮೇಲೆ ಪರಿಣಾಮ ಬೀರುವ ಯೋಜನೆಗಳನ್ನು ಅನುಮೋದಿಸುವ ಮೊದಲು ಆ ಬಗ್ಗೆ ಉಚಿತವಾಗಿ ಎಲ್ಲ ರೀತಿಯ ಮಾಹಿತಿಯನ್ನು ಪಡೆದುಕೊಳ್ಳುವ ಮತ್ತು ನಿರ್ಧರಿಸುವ ಹಕ್ಕು ಹೊಂದಿದ್ದಾರೆ) ಉಲ್ಲಂಘಿಸುತ್ತದೆ ಎಂದು ಪತ್ರವು ಪ್ರತಿಪಾದಿಸಿದೆ.
‘ರಾಷ್ಟ್ರೀಯ ಭದ್ರತೆ’ಯ ಸೋಗಿನಲ್ಲಿ (ನೆಪ) ಯೋಜನೆಯನ್ನು ಜಾರಿಗೆ ತರಲು ಸರ್ಕಾರವು ಮುಂದಾಗಿದೆ. ಸಿಯಾಂಗ್‌ನ ಡೆಪ್ಯುಟಿ ಕಮಿಷನರ್ ಅಣೆಕಟ್ಟು ಯೋಜನೆಗೆ ಒಪ್ಪಿಗೆ ಪಡೆಯಲು ಗ್ರಾಮ ಸಭೆಯ ಸಹಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಆ ಮೂಲಕ 2006 ರ ಅರಣ್ಯ ಹಕ್ಕುಗಳ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
“ಸಿಯಾಂಗ್ ಯೋಜನೆಯಿಂದ ಬಾಧಿತರಾದ ಬಹುಪಾಲು ಜನರು ಅಣೆಕಟ್ಟನ್ನು ಬೆಂಬಲಿಸುತ್ತಾರೆ ಎಂದು ಸುಳ್ಳು ಪುಕಾರು ಹಬ್ಬಿಸಲಾಗಿದೆ. ಸರ್ಕಾರವು ಯೋಜನೆಯ ಬಗ್ಗೆ ಪಾರದರ್ಶಕ, ಪ್ರಾಮಾಣಿಕ ಹಾಗೂ ನೈತಿಕ ಜವಾಬ್ದಾರಿಯೊಂದಿಗೆ ಜನಾಭಿಪ್ರಾಯ ಸಂಗ್ರಹಿಸಬೇಕು. ಸಶಸ್ತ್ರ ಪಡೆಗಳ ನಿಯೋಜನೆಯನ್ನು ವಾಪಸ್ ಪಡೆದುಕೊಳ್ಳಬೇಕು. ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಲವಂತವಾಗಿ ನಮ್ಮ ಒಪ್ಪಿಗೆಯನ್ನು ಪಡೆದುಕೊಳ್ಳುವ ಅಥವಾ ಮೋಸದ ಹಾದಿಯಲ್ಲಿ ಒಪ್ಪಿಗೆ ಪಡೆಯುವ ಪ್ರಯತ್ನಗಳನ್ನು ನಾವು ಸಹಿಸುವುದಿಲ್ಲ” ಎಂದು ಸರ್ಕಾರಕ್ಕೆ ಗ್ರಾಮಸ್ಥರು ಎಚ್ಚರಿಕೆ ಕೊಟ್ಟಿದ್ದಾರೆ.
— Ebo Mili (@Ebo_Mili_Linggi) December 15, 2024
“ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ. ಆದರೆ, ಸರ್ಕಾರವು ಜನರ ದನಿಗೆ ಕಿವಿಗೊಡದೆ, ಸಶಸ್ತ್ರ ಪಡೆಗಳನ್ನು ನಿಯೋಜಿಸಿದೆ. ಭೂ ಮಾಲೀಕರು ಮತ್ತು ಸ್ಥಳೀಯ ಜನರ ಇಚ್ಛೆಗೆ ವಿರುದ್ಧವಾಗಿ ಯೋಜನೆಗೆ ಪಿಎಫ್‌ಆರ್ [ಪೂರ್ವ ಕಾರ್ಯಸಾಧ್ಯತಾ ವರದಿ] ಸಿದ್ದಪಡಿಸುವುದು ಅಸಂವಿಧಾನಿಕ ಮತ್ತು ಅನೈತಿಕವಾದದ್ದು” ಎಂದು ಸಿಯಾಂಗ್‌ನ ಸ್ಥಳೀಯ ರೈತ ಮುಖಂಡರ ಭಾನು ತಾಟಕ್ ಹೇಳಿದ್ದಾರೆ.
ಅಂದಹಾಗೆ, ಭಾರತ ಸರ್ಕಾರವು ‘ರಾಷ್ಟ್ರೀಯ ಭದ್ರತೆ’ಗಾಗಿ ಅಣೆಕಟ್ಟನ್ನು ನಿರ್ಮಿಸಬೇಕೆಂದು ಹೇಳಿದ್ದರೂ, ಇದು ಚೀನಾಗೆ ಪೈಪೋಟಿ ನೀಡುವ ಉದ್ದೇಶವನ್ನು ಹೊಂದಿದೆ ಎಂಬುದು ತರ್ಕ.
ಕೇಂದ್ರ ಜಲ ಶಕ್ತಿ ಸಚಿವಾಲಯದ ಪ್ರಕಾರ, ಭಾರತವು 2002ರಲ್ಲಿ ಚೀನಾದೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿತ್ತು. ಅದರಂತೆ, ಸಿಯಾಂಗ್ ನದಿಯ ಪ್ರವಾಹದ ಸಂಭವವಿರುವ ಮಾನ್ಸೂನ್ ಕಾಲದಲ್ಲಿ (ಪ್ರತಿ ವರ್ಷ ಮೇ 15 ರಿಂದ ಅಕ್ಟೋಬರ್ 15 ರವರೆಗೆ) ಚೀನಾವು ಭಾರತೀಯ ಅಧಿಕಾರಿಗಳಿಗೆ ಚೀನಾದಲ್ಲಿರುವ ಸಿಯಾಂಗ್ ಅಣೆಕಟ್ಟಿನ ನೀರಿನ ಮಟ್ಟ, ಹೊರಹರಿವು ಹಾಗೂ ಮಳೆಯ ಪ್ರಮಾಣದ ಬಗ್ಗೆ ಮಾಹಿತಿ ನೀಡಬೇಕಿತ್ತು. ಈ ಒಪ್ಪಂದವನ್ನು ಪ್ರತಿ ಐದು ವರ್ಷಗಳಿಗೊಮ್ಮೆ 2008, 2013 ಮತ್ತು 2018ರಲ್ಲಿ ಪರಿಶೀಲಿಸಲಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಒಪ್ಪಂದವು ಮುಗಿದಿದೆ. ಈಗ, ಮತ್ತೆ ಒಪ್ಪಂದದ ಪರಿಶೀಲನೆ ನಡೆಸಲಾಗುತ್ತಿದೆ. ಇದು, ನೀರಿನ ಹಂಚಿಕೆಯಲ್ಲ, ಕೇವಲ ಮಾಹಿತಿ ಹಂಚಿಕೆಯ ಒಪ್ಪಂದ ಮಾತ್ರವೇ ಆಗಿದೆ.
ಹೀಗಾಗಿ, ಚೀನಾ ಇತ್ತೀಚೆಗೆ ಮತ್ತೊಂದು ಬೃಹತ್ ಅಣೆಕಟ್ಟನ್ನು ನಿರ್ಮಿಸಿದೆ. ಸಿಯಾಂಗ್ ನದಿಯ (ಚೀನಾದ ಯಾರ್ಲುಂಗ್ ತ್ಸಾಂಗ್ಪೋ) ಮೇಲ್ಭಾಗದಲ್ಲಿ ಹೊಸ ಅಣೆಕಟ್ಟು ಸೇರಿ ಮೂರು ಅಣೆಕಟ್ಟುಗಳನ್ನು ಚೀನಾ ನಿರ್ಮಿಸಿದೆ. ಹೊಸ ಅಣೆಕಟ್ಟಿನಲ್ಲಿ 60 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ.
ಹೀಗಾಗಿ, ಸಿಯಾಂಗ್ ನದಿಯಲ್ಲಿ ಭಾರತಕ್ಕೆ ನೀರಿನ ಹರಿವು 80%ನಷ್ಟು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಚೀನಾಗೆ ಪೈಪೋಟಿ ನೀಡಲು, ಸಿಯಾಂಗ್ ನದಿಯಲ್ಲಿ ಬರುವ ನೀರನ್ನು ಹಿಡಿದಿಡಲು ಅಣೆಕಟ್ಟೆ ಕಟ್ಟಲು ಭಾರತವು ಮುಂದಾಗಿದೆ. ಇದಕ್ಕೆ ನೀಡುತ್ತಿರುವ ಮತ್ತೊಂದು ಕಾರಣ, ಬೇಸಿಗೆಯ ಸಮಯದಲ್ಲಿ ಸಿಯಾಂಗ್ ನದಿಯ ನೀರು ಕಂದು ಬಣ್ಣಕ್ಕೆ ತಿರುಗುತ್ತದೆ. ಚಳಿಗಾಲದಲ್ಲಿ ಶುದ್ಧವಾಗುತ್ತದೆ. ಕಂದುಬಣ್ಣಕ್ಕೆ ತಿರುಗುವ ನೀರಿನಿಂದ ಸಿಯಾಂಗ್‌ನ ಕೆಳಭಾಗದಲ್ಲಿ ವಾಸಿಸುವ ಜನರನ್ನು ರಕ್ಷಿಸುವುದು ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ.
ಆದರೆ, ಚೀನಾದಿಂದ ಬರುವ ಸಿಯಾಂಗ್ ನದಿಯ ನೀರು ತೀರಾ ಕಡಿಮೆ ಇದೆ. ಈ ನದಿಯು ಮೂರು/ನಾಲ್ಕು ಉಪನದಿಗಳೊಂದಿಗೆ ಸೇರಿ ತಿಳಿಯಾಗುತ್ತದೆ. ಅಣೆಕಟ್ಟಿನ ಹಿಂದೆ ಯಾವುದೇ ರೀತಿಯ ರಾಷ್ಟ್ರೀಯ ಭದ್ರತೆಯ ವಿಷಯವಿಲ್ಲ ಎಂದು ಪ್ರತಿಭಟನಾಕಾರರು ವಾದಿಸುತ್ತಿದ್ದಾರೆ.

ಗಮನಾರ್ಹವೆಂದರೆ, ‘ಅಪ್ಪರ್ ಸಿಯಾಂಗ್ ವಿವಿದೋದ್ದೇಶ ಯೋಜನೆ’ಯನ್ನು ಮೊದಲು ನೀತಿ ಆಯೋಗವು 2014ರಲ್ಲಿ ಪ್ರಸ್ತಾಪಿಸಿತ್ತು. ಅರುಣಾಚಲ ಟೈಮ್ಸ್ 2017ರಲ್ಲಿ ವರದಿ ಮಾಡಿದಂತೆ, ನೀತಿ ಆಯೋಗದ ಅಂದಿನ ಸಿಇಒ ಅಮಿತಾಭ್ ಕಾಂತ್, ”ಯೋಜನೆಯಿಂದ ಉತ್ಪಾದಿಸುವ ವಿದ್ಯುತ್‌ನಿಂದ ರಾಜ್ಯವು ಆರ್ಥಿಕವಾಗಿಯೂ ಲಾಭ ಪಡೆಯುತ್ತದೆ” ಎಂದು ಹೇಳಿದ್ದರು.
ಬಳಿಕ 2022ರಲ್ಲಿ ಸರ್ಕಾರಿ ಸ್ವಾಮ್ಯದ ‘NHPC’ ಸಂಸ್ಥೆಗೆ ಯೋಜನೆ ಕುರಿತು ವಿವರವಾದ ಯೋಜನಾ ವರದಿ ಮತ್ತು ‘ಪೂರ್ವ ಕಾರ್ಯಸಾಧ್ಯತಾ ವರದಿ’ ಸಿದ್ದಪಡಿಸುವ ಜವಾಬ್ದಾರಿಯನ್ನು ಸರ್ಕಾರ ನೀಡಿತ್ತು.
ನೀತಿ ಆಯೋಗವು ಈ ಯೋಜನೆಯನ್ನು ಪ್ರಸ್ತಾಪಿಸಿದ ಸಮಯದಿಂದಲೂ ಸ್ಥಳೀಯ ಸಮುದಾಯಗಳು ಯೋಜನೆಯನ್ನು ವಿರೋಧಿಸುತ್ತಿವೆ. 2014ರಲ್ಲಿ, ಸಂಭಾವ್ಯ ಸಿಯಾಂಗ್ ಯೋಜನೆಯ ವಿರುದ್ಧ ಗುವಾಹಟಿ ಹೈಕೋರ್ಟ್‌ನ ಇಟಾನಗರ ಶಾಶ್ವತ ಪೀಠದಲ್ಲಿ ಪಿಐಎಲ್ ಕೂಡ ದಾಖಲಾಗಿತ್ತು. ಯೋಜನೆಯಿಂದ ತೊಂದರೆಗೊಳಗಾಗುವ ಸ್ಥಳೀಯ ಸಮುದಾಯಗಳೊಂದಿಗೆ ರಾಜ್ಯ ಸರ್ಕಾರ ಸಮಾಲೋಚನೆ ನಡೆಸಬೇಕು ಅರ್ಜಿಯಲ್ಲಿ ವಾದಿಸಿತ್ತು. ಆದರೆ, ಅರ್ಜಿಯನ್ನು ನ್ಯಾಯಾಲಯವು ವಜಾ ಮಾಡಿತು.
ಇದೆಲ್ಲದ ನಡುವೆ, 2022ರ ಡಿಸೆಂಬರ್‌ನಲ್ಲಿ ತಮ್ಮ ಪ್ರದೇಶದಲ್ಲಿ ಬೆಳಗಿನ ಜಾವದ ಸಮಯದಲ್ಲಿ ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂಬುದನ್ನು ಸ್ಥಳೀಯರು ಕಂಡುಹಿಡಿದರು. ಆ ನಂತರ, ಪರೋಂಗ್ ಸೇರಿದಂತೆ ಹಲವು ಗ್ರಾಮಗಳ ಹಿರಿಯ ಮಹಿಳೆಯರು ತಮ್ಮ ಪ್ರದೇಶದಲ್ಲಿ ಸದರಿಯಲ್ಲಿ ಕಾವಲು ಕಾಯಲಾರಂಭಿಸಿದರು. ಜೊತೆಗೆ, ಪ್ರತಿಭಟನೆಗಳನ್ನು ಆರಂಭಿಸಿದರು.
ಈ ವರದಿ ಓದಿದ್ದೀರಾ?: ‘ವಕ್ಫ್’ ಎಂಬ ದೇವರ ಆಸ್ತಿ ಸುತ್ತ ದುಷ್ಟ ರಾಜಕೀಯ ಹುತ್ತ!
ಪ್ರತಿಭಟನೆ, ವಿರೋಧಗಳ ನಡುವೆತಯೂ ಎನ್‌ಎಚ್‌ಪಿಸಿ ಯೋಜನಾ ವರದಿಯನ್ನು ಸಿದ್ದಪಡಿಸಿದ್ದು, ಜಲಶಕ್ತಿ ಸಚಿವಾಲಯಕ್ಕೆ ಸಲ್ಲಿಸಿದೆ. ಆ ವರದಿಯ ಪ್ರಕಾರ, ಜಲವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಸಿಯಾಂಗ್‌ನ ಮುರು ಜಾಗಗಳನ್ನು ಪ್ರಸ್ತಾಪಿಸಲಾಗಿದೆ. ಈ ಸಂಭಾವ್ಯ ಸ್ಥಳಗಳಲ್ಲಿ ಯೋಜನೆಯ ಕಾರ್ಯಸಾಧ್ಯತೆಯ ಬಗ್ಗೆ ನಿರ್ಧರಿಸಲು ಸ್ಥಳಕ್ಕೆ ಭೇಟಿ ನೀಡಿ ಭೌಗೋಳಿಕ ಸಮೀಕ್ಷೆ ನಡೆಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ‘ತಾಂತ್ರಿಕ ಸಮಿತಿ’ ಸೂಚಿಸಿದೆ. ಆದರೂ, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಸೂಚಿಸಿದಂತೆ ಎಲ್ಲ ಮೂರು ಸ್ಥಳಗಳಲ್ಲಿ ಕೊರೆಯುವ ಕೆಲಸವನ್ನು ಕೈಗೊಳ್ಳಲು ಶಿಫಾರಸು ಮಾಡಿದೆ. ಜಾಗದಲ್ಲಿ ಅಗೆಯುವ ಕಾಮಗಾರಿ ನಡೆಸಲು 2023ರ ಮೇನಲ್ಲಿಯೇ ಎನ್‌ಎಚ್‌ಪಿಸಿ ನಿರಪೇಕ್ಷಣಾ ಪತ್ರವನ್ನು ಪಡೆದುಕೊಂಡಿದೆ. ಆದರೆ, ಆ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಿಂದಾಗಿ ಕೆಲಸವನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ.
ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿರುವ ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರದ ಪ್ರಕಾರ, ಅರುಣಾಚಲ ಪ್ರದೇಶವೂ ಸೇರಿದಂತೆ ಈಶಾನ್ಯ ಭಾರತವು ಭೂಕಂಪನ ವಲಯ ‘V’ ಅಡಿಯಲ್ಲಿ ಬರುತ್ತದೆ. ಇಲ್ಲಿ ಅತಿ ಹೆಚ್ಚು ಭೂಕಂಪನಗಳು ಸಂಭವಿಸುತ್ತವೆ ಎಂದು ಹೇಳಲಾಗಿದೆ.
”ಅಪ್ಪರ್ ಸಿಯಾಂಗ್ ಯೋಜನೆಯ ವಿರೋಧಕ್ಕೆ ಭೂಕಂಪನವೂ ಒಂದು ಕಾರಣ. ಇಲ್ಲಿ ಅಣೆಕಟ್ಟು ಕಟ್ಟಿದರೆ, ಭೂಕಂಪನಿಂದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಸಾಮಾಜಿಕ ಕಾರ್ಯಕರ್ತ ಎಬೊ ಮಿಲಿ ಹೇಳಿದ್ದಾರೆ.
ಆದಾಗ್ಯೂ, ತಕ್ಷಣದ ದೊಡ್ಡ ಸವಾಲು ಜನರ ಸ್ಥಳಾಂತರ ಮಾತ್ರವಲ್ಲ, ಗ್ಲೇಶಿಯಲ್ ಸರೋವರಗಳಿಂದ ಉಂಟಾಗುವ ಪ್ರಕೋಪದ ಪ್ರವಾಹದ ಸವಾಲು ಕೂಡ ಇದೆ. ಸಿಯಾಂಗ್, ಅಪ್ಪರ್ ಸಿಯಾಂಗ್ ಮತ್ತು ಪೂರ್ವ ಸಿಯಾಂಗ್ ಜಿಲ್ಲೆಗಳಾದ್ಯಂತ ಭಾರೀ ಪ್ರವಾಹಕ್ಕೆ ಕಾರಣವಾಗುವ ನೂರಾರು ಗ್ಲೇಶಿಯಲ್ ಕೆರೆಗಳಿವೆ. ಅಪ್ಪರ್ ಸಿಯಾಂಗ್ ಜಿಲ್ಲೆಯೊಂದರಲ್ಲೇ ಒಟ್ಟು 4.1 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ 94 ಗ್ಲೇಶಿಯಲ್ ಸರೋವರಗಳಿವೆ ಎಂದು ಮಿಲಿ ವಿವರಿಸಿದ್ದಾರೆ.
”ಈ ಸರೋವರಗಳಿಂದ ಆಗುವ ಅಪಾಯಗಳ ಬಗ್ಗೆ ಸರ್ಕಾರಕ್ಕೆ ತಿಳಿದಿದೆ. ಆ ಬಗ್ಗೆ ಅಧ್ಯಯನಗಳನ್ನೂ ನಡೆಸಿದೆ. ಆದರೆ, ಸರ್ಕಾರವು ಅಣೆಕಟ್ಟು ನಿರ್ಮಾಣಕ್ಕೆ ಪ್ರಸ್ತಾಪ ಇಟ್ಟಿರುವವರಿಂದ (ಸಂಭಾವ್ಯ ಗುತ್ತಿಗೆದಾರ) ಹಣ ಪಡೆದಿದೆ. ಆದ್ದರಿಂದ, ನೈಜ ಸಂಗತಿಗಳನ್ನು ಮರೆಮಾಚಲಾಗುತ್ತಿದೆ” ಎಂದು ಮಿಲಿ ಆರೋಪಿಸಿದ್ದಾರೆ.
”ಅಣೆಕಟ್ಟು ನಿರ್ಮಾಣಕ್ಕೆ ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ಬಾಧಿತರಾಗುವ ಎಲ್ಲ ಜನರು ಒಪ್ಪಿಕೊಂಡಿದ್ದಾರೆ ಎಂದು ಸಚಿವರು ಸುಳ್ಳು ಹೇಳುತ್ತಿದ್ದಾರೆ” ಎಂದು ಬಿಜೆಪಿಯವರೇ ಆದ ಜಿಲ್ಲೆಯ ರಾಮ್ಕು ಗ್ರಾಮ ಪಂಚಾಯತಿ ಅಧ್ಯಕ್ಷ ಎಜಿಂಗ್ ಹೇಳಿದ್ದಾರೆ.
”ನಾನು ಬಿಜೆಪಿಯೊಂದಿಗೆ ಇರಬಹುದು. ಆದರೆ, ನಾನು ಅಣೆಕಟ್ಟು ನಿರ್ಮಾಣವನ್ನು ವಿರೋಧಿಸುತ್ತೇನೆ. ಅಣೆಕಟ್ಟು ನಿರ್ಮಾಣ ಮತ್ತು ಮುಳಗಡೆಯಿಂದ ಹಾನಿ ಮತ್ತು ನಷ್ಟ ಮಾತ್ರ ಇರುತ್ತದೆ. ನಮಗೆ ನೆಲೆಸಲು, ಜೀವನ ಸಾಗಿಸಲು ಬೇರಾವುದೇ ಸ್ಥಳಗಳಿಲ್ಲ. ಕೃಷಿ ಮಾಡಲು ಬೇರೆ ಭೂಮಿಯಿಲ್ಲ. ಈ ಸರ್ಕಾರಿ ಜನರು ಅಣೆಕಟ್ಟಿನ ಬಗ್ಗೆ ಸ್ಥಳೀಯರೊಂದಿಗೆ ಯಾವುದೇ ಸಭೆಯನ್ನು ನಡೆಸಿಲ್ಲ” ಎಂದು ಎಜಿಂಗ್ ಆರೋಪಿಸಿದ್ದಾರೆ.
“ಕೇಂದ್ರ ಪಡೆಗಳನ್ನು ನಮ್ಮ ಗ್ರಾಮಗಳಲ್ಲಿ ನಿಯೋಜಿಸುವಂತಹ ಯಾವುದೇ ತೊಂದರೆಯನ್ನ ನಾವು ಅವರಿಗೆ ಮಾಡಿಲ್ಲ. ನಾವು ನಮ್ಮ ಜಮೀನುಗಳ ಉಳಿವಿಗಾಗಿ, ನಮಗಾಗಿ ಮಾತ್ರ ಪ್ರತಿಭಟನೆ ನಡೆಸುತ್ತಿದ್ದೇವೆ. ನಾವು ನಮ್ಮ ಭೂಮಿಯನ್ನು ಕಳೆದುಕೊಳ್ಳುವುದಿಲ್ಲ. ನಮ್ಮ ಕೊನೆಯ ಉಸಿರು ಇರುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ. ಈ ಪ್ರಕ್ರಿಯೆಯಲ್ಲಿ ನಾವು ನಮ್ಮ ಪ್ರಾಣವನ್ನು ಕಳೆದುಕೊಂಡರೂ ಸರಿಯೇ, ನಮ್ಮ ಭೂಮಿಯನ್ನು ಕಳೆದುಕೊಳ್ಳಲು ಸಿದ್ದರಿಲ್ಲ” ಎಂದಿದ್ದಾರೆ.