ಸಿಂಧೂರವು ಬಂದೂಕಿನ ಸಿಡಿಮದ್ದಾಗಿ ಬದಲಾದಾಗ ಏನಾಗುತ್ತದೆ ಎಂಬುದನ್ನು ವಿಶ್ವದ ಹಾಗೂ ದೇಶದ ಶತ್ರುಗಳು ನೋಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಸ್ಥಾನದ ಬಿಕಾನೇರ್ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್ 22 ರ ದಾಳಿಗೆ ಪ್ರತಿಕ್ರಿಯೆಯಾಗಿ ನಾವು ಭಯೋತ್ಪಾದಕರ 9 ದೊಡ್ಡ ಅಡಗುತಾಣಗಳನ್ನು 22 ನಿಮಿಷಗಳಲ್ಲಿ ನಾಶಪಡಿಸಿದ್ದೇವೆ. ನನ್ನ ರಕ್ತನಾಳಗಳಲ್ಲಿ ರಕ್ತವಲ್ಲ, ಸಿಂಧೂರ ಹರಿಯುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಹೋರಾಡಲು ಭಾರತ ಒಗ್ಗಟ್ಟಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರ ಗುಂಡೇಟುಗಳು 140 ಕೋಟಿ ಭಾರತೀಯರ ಎದೆಗೆ ನಾಟಿದಂತಿತ್ತು. ನಾವು ಭಯೋತ್ಪಾದನೆಯ ಎದೆಗೆ ಗುಂಡೇಟು ನೀಡಿದ್ದೇವೆ. ನಮ್ಮ ಸಶಸ್ತ್ರ ಪಡೆಗಳು ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿದವು ಎಂದು ಮೋದಿ ಹೇಳಿದರು.
ಏಪ್ರಿಲ್ 22 ರಂದು ಭಯೋತ್ಪಾದಕರು ಧರ್ಮವನ್ನು ಕೇಳುವ ಮೂಲಕ ನಮ್ಮ ಸಹೋದರಿಯರ ಹಣೆಯ ಮೇಲಿನ ಸಿಂಧೂರ ಅಳಿಸಿದ್ದರು. ಆ ಗುಂಡುಗಳು 140 ಕೋಟಿ ದೇಶವಾಸಿಗಳ ಹೃದಯಗಳನ್ನು ಚುಚ್ಚಿದವು. ಇದರ ನಂತರ, ದೇಶದ ಪ್ರತಿಯೊಬ್ಬ ನಾಗರಿಕರು ಒಗ್ಗೂಡಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ನಿರ್ಧರಿಸಿದರು. ದೇಶದ ಜನತೆ ಊಹಿಸುವುದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ನಾವು ವಿಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ‘ಬಲಿಷ್ಠರು’ ಬೆತ್ತಲಾಗುವ ಕಾಲ
5 ವರ್ಷಗಳ ಹಿಂದೆ ಬಾಲಾಕೋಟ್ನಲ್ಲಿ ದೇಶವು ವಾಯುದಾಳಿ ನಡೆಸಿದ ನಂತರ, ನನ್ನ ಮೊದಲ ಸಾರ್ವಜನಿಕ ಸಭೆ ರಾಜಸ್ಥಾನದ ಗಡಿಯಲ್ಲಿಯೇ ನಡೆದಿರುವುದು ಕಾಕತಾಳೀಯ. ವೀರಭೂಮಿಯ ತಪಸ್ಸಿನಿಂದಾಗಿ ಇಂತಹ ಕಾಕತಾಳೀಯ ಸಂಭವಿಸಿದೆ. ಈಗ ಆಪರೇಷನ್ ಸಿಂಧೂರ ನಡೆದಾಗ, ನನ್ನ ಮೊದಲ ಸಾರ್ವಜನಿಕ ಸಭೆ ಮತ್ತೆ ರಾಜಸ್ಥಾನದ ವೀರಭೂಮಿಯ ಗಡಿಯಲ್ಲಿರುವ ಬಿಕಾನೇರ್ನಲ್ಲಿ ನಿಮ್ಮೆಲ್ಲರ ನಡುವೆ ನಡೆಯುತ್ತಿದೆ ಎಂದು ಮೋದಿ ಸ್ಮರಿಸಿದ್ದಾರೆ.
ನಮ್ಮ ಪಡೆಗಳು ದಾಳಿ ಮಾಡಿದ ವೇಗಕ್ಕೆ ಪಾಕಿಸ್ತಾನದ ರಹೀಮ್ ಖಾನ್ ವಾಯು ನಿಲ್ದಾಣ ಐಸಿಯುನಲ್ಲಿದೆ. ಪ್ರತಿ ಉಗ್ರದಾಳಿಗೆ ಪಾಕಿಸ್ತಾನ ಸೇನೆ ಹಾಗೂ ಆರ್ಥಿಕತೆ ದಂಡ ತೆರಬೇಕಾಗುತ್ತದೆ. ಪಾಕಿಸ್ತಾನವು ಬಿಕಾನೇರ್ನ ವಾಯು ನಿಲ್ದಾಣದ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು, ಆದರೆ ಇಲ್ಲಿ ಯಾವುದೇ ಹಾನಿಯಾಗಲಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತುಕತೆಗಳು ಬಿಟ್ಟು ಮತ್ಯಾವುದೇ ಮಾತುಕತೆಗಳು ಹಾಗೂ ವ್ಯಾಪಾರ ಒಪ್ಪಂದ ಕಾಕ್ ಜೊತೆ ನಡೆಯುವುದಿಲ್ಲ. ಭಾರತದ ನೀರು ಪಾಕಿಸ್ತಾನಕ್ಕೆ ಲಭ್ಯವಾಗುವುದಿಲ್ಲ. ನಾವು ಅಣುಬಾಂಬ್ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಮೋದಿ ಹೇಳಿದರು.