ಅರುಣಾಚಲ ಪ್ರದೇಶದ ಚಾಂಗ್‌ಲಾಂಗ್ ಜಿಲ್ಲೆಯ ಬೋರ್ಡುಮ್ಸಾ ಪ್ರದೇಶದಲ್ಲಿ ಶುಕ್ರವಾರ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಚಕ್ಮಾ ಹಾಗೂ ಹಾಜೊಂಗ್ ಸಮುದಾಯದವರನ್ನು ಮತದಾರರ ಪಟ್ಟಿಗೆ ಸೇರಿಸಲು ಆಡಳಿತ ಮಂಡಳಿ ನಡೆಸುತ್ತಿದ್ದ ವಿಚಾರಣೆಯನ್ನು ವಿರೋಧಿಸಿ ಸ್ಥಳೀಯ ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ.
ಬೋರ್ಡುಮ್ಸಾದ ಹೆಚ್ಚುವರಿ ಉಪಯುಕ್ತರ (ADC) ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ವಿಚಾರಣೆ ನಡೆಯುತ್ತಿದ್ದ ವೇಳೆ ‘ಆಲ್ ಅರುಣಾಚಲ ಪ್ರದೇಶ್ ಸ್ಟೂಡೆಂಟ್ಸ್ ಯೂನಿಯನ್’ (AAPSU), ಬೋರ್ಡುಮ್ಸಾ ವಿದ್ಯಾರ್ಥಿ ಸಂಘಟನೆ ಹಾಗೂ ಇತರ ಸ್ಥಳೀಯ ಸಂಸ್ಥೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದವು. 2006ರ ನಂತರ ಆಗಮಿಸಿದ ಚಕ್ಮಾ ಸಮುದಾಯದವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದನ್ನೂ ಓದಿ: SIR | 16 ರಾಜ್ಯಗಳಿಗೆ ಕಾಲಿಟ್ಟ ಎಸ್‌ಐಆರ್; ಕರ್ನಾಟಕದಲ್ಲಿ ಜೂನ್ 30ರಿಂದ ಆರಂಭ
ಪ್ರತಿಭಟನೆಯ ವೇಳೆ ಸನ್ನಿವೇಶ ಕೈಮೀರಿ ಕಲ್ಲು ತೂರಾಟ ಮತ್ತು ಸಂಘರ್ಷ ಏರ್ಪಟ್ಟಿದೆ. ಈ ಘಟನೆಯಲ್ಲಿ AAPSU ಮುಖಂಡರೊಬ್ಬರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಘಟನೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ AAPSU ಅಧ್ಯಕ್ಷ ಮೇಜೆ ಟಾಕು, ಚಕ್ಮಾ ಮತ್ತು ಹಾಜೊಂಗ್ ಸಮುದಾಯದವರು ವಾಸಿಸುವ ಪ್ರದೇಶಗಳಲ್ಲಿ ತಕ್ಷಣವೇ SIR ಪ್ರಕ್ರಿಯೆಯನ್ನು ಅಮಾನತುಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತಮ್ಮ ಸಂಘಟನೆಯ ಕಾರ್ಯಕರ್ತರ ಮೇಲಿನ ದಾಳಿಯನ್ನು ಖಂಡಿಸಿರುವ ಅವರು, ತಪ್ಪಿತಸ್ಥರನ್ನು ಬಂಧಿಸುವಂತೆ ಮತ್ತು AAPSU ಕಾರ್ಯಕರ್ತರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸದಂತೆ ಆಗ್ರಹಿಸಿದ್ದಾರೆ.
ಈ ನಡುವೆ ‘ಅರುಣಾಚಲ ಪ್ರದೇಶ್ ಚಕ್ಮಾ ಸ್ಟೂಡೆಂಟ್ಸ್ ಯೂನಿಯನ್’ (APCSU) ಈ ಹಿಂಸಾಚಾರ ಮತ್ತು ಕಲ್ಲು ತೂರಾಟದ ಘಟನೆಯನ್ನು ಖಂಡಿಸಿದ್ದು, ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿರುವ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದೆ. ಅಲ್ಲದೆ, ಪೋಲಿಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಕೋರಿದೆ.
ಯಾರಿವರು ಚಕ್ಮಾ ಸಮುದಾಯವರು?
ಚಕ್ಮಾ ಸಮುದಾಯ ಮುಖ್ಯವಾಗಿ ಈಶಾನ್ಯ ಭಾರತ ಮತ್ತು ಬಾಂಗ್ಲಾದೇಶದ ಚಿತ್ತಗಾಂಗ್ ಬೆಟ್ಟ ಪ್ರದೇಶಗಳಲ್ಲಿ ವಾಸಿಸುವ ಪ್ರಮುಖ ಬೌದ್ಧ ಧರ್ಮೀಯ ಬುಡಕಟ್ಟು ಜನಾಂಗ. ಚಕ್ಮಾ ಸಮುದಾಯದವರು ಮುಖ್ಯವಾಗಿ 1964ರಿಂದ 1969ರ ಅವಧಿಯಲ್ಲಿ ಭಾರತಕ್ಕೆ ಬಂದರು. ಅಂದಿನ ಪೂರ್ವ ಪಾಕಿಸ್ತಾನದಲ್ಲಿದ್ದ (ಇಂದಿನ ಬಾಂಗ್ಲಾದೇಶ) ಚಿತ್ತಗಾಂಗ್ ಬೆಟ್ಟ ಪ್ರದೇಶದಲ್ಲಿ ‘ಕಾಪ್ತಾಯ್ ಆಣೆಕಟ್ಟು’ ನಿರ್ಮಿಸಿದಾಗ ಸುಮಾರು 50,000 ಕ್ಕೂ ಹೆಚ್ಚು ಚಕ್ಮಾ ಮತ್ತು ಹಾಜೊಂಗ್ ಜನರು ತಮ್ಮ ಮನೆ ಮತ್ತು ಜಮೀನನ್ನು ಕಳೆದುಕೊಂಡರು. ಜೊತೆಗೆ ಅಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಮಾರ್ಚ್ 30, 1964 ರಂದು ಸಾವಿರಾರು ಕುಟುಂಬಗಳು ಭಾರತದ ಅಸ್ಸಾಂ (ಅಂದಿನ ಗಡಿ) ಮಾರ್ಗವಾಗಿ ಪ್ರವೇಶಿಸಿದವು.
ಅಸ್ಸಾಂನಲ್ಲಿ ಶರಣಾರ್ಥಿಗಳ ಸಂಖ್ಯೆ ಹೆಚ್ಚಾದಾಗ, ಕೇಂದ್ರ ಸರ್ಕಾರವು ಚಕ್ಮಾ ಕುಟುಂಬಗಳನ್ನು ಅಂದಿನ ನೆಫಾ (NEFA – ಪ್ರಸ್ತುತ ಅರುಣಾಚಲ ಪ್ರದೇಶ) ಪ್ರದೇಶಕ್ಕೆ ಕಳುಹಿಸಿಕೊಟ್ಟಿತು. 1964 ರಿಂದ 1969 ರ ನಡುವೆ ಸುಮಾರು 2,900ಕ್ಕೂ ಹೆಚ್ಚು ಚಕ್ಮಾ ಮತ್ತು ಹಾಜೊಂಗ್ ಕುಟುಂಬಗಳನ್ನು (ಸುಮಾರು 15,000 ಜನರು) ಅರುಣಾಚಲ ಪ್ರದೇಶದ ಚಾಂಗ್‌ಲಾಂಗ್, ಲೋಹಿತ್ ಮತ್ತು ಸುಬನ್‌ಸಿರಿ ಜಿಲ್ಲೆಗಳಲ್ಲಿ ಸರ್ಕಾರಿ ಯೋಜನೆಯಡಿ ಅಧಿಕೃತವಾಗಿ ಪುನರ್ವಸತಿಗೊಳಿಸಲಾಯಿತು. 1971ರಲ್ಲಿ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿಯೂ ಕೆಲವು ಚಕ್ಮಾ ಕುಟುಂಬಗಳು ಶರಣಾರ್ಥಿಗಳಾಗಿ ಭಾರತಕ್ಕೆ (ಮಿಜೋರಾಂ, ತ್ರಿಪುರಾ ಮತ್ತು ಅಸ್ಸಾಂಗೆ) ಬಂದವು. ಹೀಗಾಗಿ, 1964 ರಲ್ಲೇ ಚಕ್ಮಾ ಸಮುದಾಯದ ಬೃಹತ್ ಗುಂಪು ಭಾರತವನ್ನು ಪ್ರವೇಶಿಸಿ ಅರುಣಾಚಲ ಪ್ರದೇಶದಲ್ಲಿ ನೆಲೆಸಲು ಪ್ರಾರಂಭಿಸಿತು.





