ಮಹಿಳಾ ಹೋರಾಟಕ್ಕೆ ಹೊಸ ದಿಕ್ಕು ಕೊಟ್ಟ ಈ ಸ್ತ್ರೀವಾದಿಗೆ CIA ಸಂಪರ್ಕವಿತ್ತು!

Date:

ಅಮೆರಿಕದ ಸ್ತ್ರೀವಾದಿ ಚಳವಳಿಯ ಅತ್ಯಂತ ಪ್ರಭಾವಿ ಮುಖಗಳಲ್ಲಿ ಒಬ್ಬರಾಗಿದ್ದ ಗ್ಲೋರಿಯಾ ಸ್ಟೀನೆಮ್‌ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮಹಿಳಾ ನ್ಯಾಯಕ್ಕಾಗಿ ದಶಕಗಳ ಕಾಲ ಹೋರಾಡಿದ ಅವರ ಕೊಡುಗೆ ಅಮೆರಿಕದ ಸ್ತ್ರೀವಾದದ ಇತಿಹಾಸದಲ್ಲಿ ಮಹತ್ವದ್ದು. ಆದರೆ ʼಮಹಿಳಾ ಮುಕ್ತಿʼಯ ಈ ಹೋರಾಟಗಾರ್ತಿಯ ಬದುಕಿನಲ್ಲಿ ವಿವಾದದ ಅಧ್ಯಾಯವೂ ಇದೆ. ಶೀತಲ ಸಮರದ ಸಂದರ್ಭದಲ್ಲಿ CIAಯೊಂದಿಗೆ ಸ್ಟೀನೆಮ್‌ಗಿದ್ದ ಸಂಪರ್ಕವೇನು? ಸಮಾಜವಾದ ಮತ್ತು ಕಮ್ಯುನಿಸಂನ ಪ್ರಭಾವವನ್ನು ಎದುರಿಸುತ್ತಿದ್ದ ಅಮೆರಿಕದ ರಾಜಕೀಯ ವಾತಾವರಣದಲ್ಲಿ ಅವರ ಪಾತ್ರವೇನು? ಸ್ತ್ರೀವಾದಿ ಚಳವಳಿಯೊಳಗಿಂದಲೇ ಅವರ ಮೇಲೆ ಕೇಳಿಬಂದ ಟೀಕೆಗಳೇನು ಎಂಬ ಪ್ರಶ್ನೆಗಳೀಗ ಚರ್ಚಾರ್ಹ.

- Advertisement -

ಗ್ಲೋರಿಯಾ ಸ್ಟೀನಮ್‌ ಇನ್ನಿಲ್ಲ. ಐದು ದಶಕಗಳಿಗೂ ಹೆಚ್ಚು ಕಾಲ ಅಮೆರಿಕದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಅಮೆರಿಕದ ಲೇಖಕಿ, ಪತ್ರಕರ್ತೆ, ಉಪನ್ಯಾಸಕಿ, ಸಂಘಟಕಿ ಮತ್ತು ಸ್ತ್ರೀವಾದಿ ನಾಯಕಿ ಸ್ಟೀನಮ್‌, ಮಹಿಳೆಯರಿಗೆ ಸಮಾನ ಹಕ್ಕು, ಸಮಾನ ವೇತನ, ಸಂತಾನೋತ್ಪತ್ತಿಯ ಸ್ವಾತಂತ್ರ್ಯ ಮತ್ತು ಗೃಹ ಹಿಂಸೆಯಿಂದ ಮುಕ್ತಿ ಸೇರಿದಂತೆ ಹಲವು ಪ್ರಶ್ನೆಗಳನ್ನು ಅಮೆರಿಕದ ಮುಖ್ಯವಾಹಿನಿಯ ಚರ್ಚೆಯ ಭಾಗವಾಗಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ಸ್ಟೀನಮ್‌ ಎಂದರೆ ಅಮೆರಿಕದ ಸ್ತ್ರೀವಾದ ಎಂಬಷ್ಟರ ಮಟ್ಟಿಗೆ ಅವರ ಹೆಸರು ಆ ಚಳವಳಿಯೊಂದಿಗೆ ಬೆಸೆದುಕೊಂಡಿದೆ. ಮಹಿಳೆಯರು ಪುರುಷರಷ್ಟೇ ಸಮಾನರು, ಅವರ ದೇಹದ ಮೇಲೆ ಅವರಿಗೆ ಸ್ವಾಯತ್ತತೆ ಇರಬೇಕು, ಗರ್ಭಪಾತದ ಹಕ್ಕು ಇರಬೇಕು, ಉದ್ಯೋಗದಲ್ಲಿ ಸಮಾನ ಅವಕಾಶ ಮತ್ತು ಸಮಾನ ವೇತನ ಸಿಗಬೇಕು, ಗೃಹ ಹಿಂಸೆಯಿಂದ ಮುಕ್ತಿ ಸಿಗಬೇಕು ಎಂಬ ಪ್ರಶ್ನೆಗಳನ್ನು ಅಮೆರಿಕದ ಮುಖ್ಯವಾಹಿನಿಯ ರಾಜಕೀಯ ಮತ್ತು ಸಾರ್ವಜನಿಕ ಚರ್ಚೆಯ ಭಾಗವಾಗಿಸುವಲ್ಲಿ ಸ್ಟೀನಮ್‌ ಅವರ ಪಾತ್ರ ದೊಡ್ಡದು.

ಆದರೆ ಸ್ಟೀನಮ್‌ ತಮ್ಮ ಜೀವನವನ್ನ ಕೇವಲ ಮಹಿಳಾ ಹಕ್ಕುಗಳ ಹೋರಾಟಕ್ಕಾಗಿ ಸೀಮಿತಗೊಳಿಸಿರಲಿಲ್ಲ. ಅಲ್ಲಿ ಅಮೆರಿಕದ ಶೀತಲ ಸಮರದ, ಕಮ್ಯುನಿಸಂ ವಿರೋಧಿ ರಾಜಕೀಯ ಮತ್ತು ಅಮೆರಿಕದ ಗುಪ್ತಚರ ಸಂಸ್ಥೆ CIAಯೊಂದಿಗಿನ ಅವರ ಹಿಂದಿನ ಸಂಪರ್ಕದ ವಿವಾದಗಳೂ ಒಂದಕ್ಕೊಂದು ಮಿಳಿತಗೊಂಡಿವೆ.

ಸ್ತ್ರೀವಾದ ಎಂದರೇನು? ಸ್ತ್ರೀವಾದದ ಹೋರಾಟ ಶುರುವಾದದ್ದು ಹೇಗೆ?

ಸ್ತ್ರೀವಾದ ಎಂದರೆ ಕೇವಲ ಮಹಿಳೆಯರನ್ನು ಪುರುಷರರಿಗೆ ಸಮಾನವಾಗಿ ನೋಡುವುದು ಎಂದಷ್ಟೇ ಅರ್ಥೈಸಲಾಗುತ್ತದೆ. ಅಸಲಿಗೆ ಮಹಿಳೆ ಎಂಬ ಒಂದೇ ಕಾರಣಕ್ಕೆ ಎದುರಾಗುವ ಅಸಮಾನತೆಯನ್ನು ಪ್ರಶ್ನಿಸುವುದೇ ಸ್ತ್ರೀವಾದ.

ಸಮಾಜದ ಬಹುತೇಕ ಕ್ಷೇತ್ರಗಳಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಮುಂದುವರಿದಿತ್ತು. ಮಹಿಳೆಯರಿಗೆ ಉದ್ಯೋಗದ ಅವಕಾಶಗಳು ಸೀಮಿತವಾಗಿದ್ದವು. ಸಿಕ್ಕ ಉದ್ಯೋಗದಲ್ಲೂ ಕಡಿಮೆ ವೇತನ, ಕಡಿಮೆ ಸ್ಥಾನಮಾನ ಮತ್ತು ಲಿಂಗ ತಾರತಮ್ಯ ಸಾಮಾನ್ಯವಾಗಿತ್ತು. ಮದುವೆ ಮತ್ತು ಕುಟುಂಬದ ಜವಾಬ್ದಾರಿಯನ್ನು ಬಹುತೇಕ ಸಂಪೂರ್ಣವಾಗಿ ಮಹಿಳೆಯರ ಮೇಲೆಯೇ ಹಾಕಲಾಗುತ್ತಿತ್ತು. ಈ ವಿಷಯದಲ್ಲಿ ಅಮೆರಿಕವೂ ಹೊರತಾಗಿರಲಿಲ್ಲ. ಇದನ್ನು ಸ್ಟೀನಮ್‌ ತಮ್ಮದೇ ಬದುಕಿನಲ್ಲೂ ಅನುಭವಿಸಿದ್ದರು.

ಇದನ್ನು ಪ್ರಶ್ನಿಸಿ ಮಹಿಳೆಯರು ಧ್ವನಿ ಎತ್ತಲು ಆರಂಭಿಸಿದರು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ಬೇಕು, ಪುರುಷರಿಗೆ ಸಿಗುವ ರಾಜಕೀಯ ಹಕ್ಕುಗಳು ಮಹಿಳೆಯರಿಗೂ ಬೇಕು, ಒಂದೇ ಕೆಲಸಕ್ಕೆ ಒಂದೇ ವೇತನ ಬೇಕು, ಮದುವೆಯಾದ ಕಾರಣಕ್ಕೆ ಮಹಿಳೆಯ ಸ್ವಾತಂತ್ರ್ಯ ಕಳೆದುಹೋಗಬಾರದು, ತನ್ನ ದೇಹ ಮತ್ತು ಸಂತಾನೋತ್ಪತ್ತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಮಹಿಳೆಗೇ ಇರಬೇಕು ಎಂಬ ಬೇಡಿಕೆಗಳು ಬಲಗೊಂಡವು. ಸ್ಟೀನಮ್‌ ಸ್ತ್ರೀವಾದಿ ನಾಯಕಿಯಾಗಿ ಹೊರಹೊಮ್ಮಿದ ಸಮಯ ಇದೇ.

1934ರಲ್ಲಿ ಓಹಿಯೊದಲ್ಲಿ ಜನಿಸಿದ ಸ್ಟೀನಮ್‌ ಅವರ ಕುಟುಂಬ ಆಗಾಗ ಸ್ಥಳಾಂತರವಾಗುತ್ತಿತ್ತು. ತಂದೆ ಪ್ರವಾಸಿ ಪುರಾತನ ವಸ್ತುಗಳ ವ್ಯಾಪಾರಿ. ತಾಯಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ತಂದೆ-ತಾಯಿ ಬೇರ್ಪಟ್ಟ ನಂತರ ಬಾಲ್ಯದಲ್ಲೇ ತಾಯಿಯ ಆರೈಕೆಯ ಜವಾಬ್ದಾರಿ ಸ್ಟೀನಮ್‌ ಮೇಲೆ ಬಿತ್ತು. ಈ ಅನುಭವವೇ ಮದುವೆ, ಕುಟುಂಬ ಮತ್ತು ಮಹಿಳೆಯರ ಮೇಲಿನ ಸಾಮಾಜಿಕ ನಿರೀಕ್ಷೆಗಳ ಬಗ್ಗೆ ಅವರ ಚಿಂತನೆಗೆ ಪ್ರಭಾವ ಬೀರಿತು. ಮಹಿಳೆಯ ಜೀವನವನ್ನು ಮದುವೆ ಮತ್ತು ಇತರರ ಆರೈಕೆಗೆ ಮಾತ್ರ ಸೀಮಿತಗೊಳಿಸುವ ವ್ಯವಸ್ಥೆಯನ್ನು ಅವರು ಪ್ರಶ್ನಿಸಲು ಶುರುಮಾಡಿದರು.

ಪತ್ರಕರ್ತೆಯಾಗಿ ಕೆಲಸ ಆರಂಭಿಸಿದ ನಂತರ 1963ರಲ್ಲಿ ಅವರು ‘ಪ್ಲೇಬಾಯ್ ಬನ್ನಿ’ಯಾಗಿ 11 ದಿನ ಕೆಲಸ ಮಾಡಿ ಬರೆದ ‘A Bunny’s Tale’ ವರದಿ ಗಮನ ಸೆಳೆಯಿತು. ಪ್ಲೇಬಾಯ್ ಕ್ಲಬ್‌ನ ಮಹಿಳಾ ಸಿಬ್ಬಂದಿಗೆ ನೀಡಲಾಗುತ್ತಿದ್ದ ಕಡಿಮೆ ವೇತನ ಮತ್ತು ಲೈಂಗಿಕ ತಾರತಮ್ಯವನ್ನು ಆ ಲೇಖನ ಬಯಲಿಗೆಳೆದಿತ್ತು. ಅಂದರೆ ಸ್ಟೀನಮ್‌ ಅವರ ಸ್ತ್ರೀವಾದ ಕೇವಲ ಸಿದ್ಧಾಂತದ ಚರ್ಚೆಯಿಂದ ಹುಟ್ಟಿದ್ದಲ್ಲ. ಮಹಿಳೆಯರ ದೈನಂದಿನ ಬದುಕಿನಲ್ಲಿದ್ದ ಶೋಷಣೆ ಮತ್ತು ಅಸಮಾನತೆಯಿಂದ ಅದು ರೂಪುಗೊಂಡಿತ್ತು.

1969ರಲ್ಲಿ ಗರ್ಭಪಾತದ ಹಕ್ಕಿನ ಕುರಿತು ನಡೆದ ‘abortion speak-out’ನಲ್ಲಿ ಭಾಗವಹಿಸಿದ ಅನುಭವ ಅವರ ಬದುಕಿಗೆ ನಿರ್ಣಾಯಕ ತಿರುವು ನೀಡಿತು. 22ನೇ ವಯಸ್ಸಿನಲ್ಲಿ ಲಂಡನ್‌ನಲ್ಲಿ ಅಕ್ರಮ ಗರ್ಭಪಾತ ಮಾಡಿಸಿಕೊಂಡಿದ್ದ ಸ್ಟೀನಮ್‌, ಗರ್ಭಪಾತದ ಕಾರಣದಿಂದ ಮಹಿಳೆಯರು ಅನುಭವಿಸುತ್ತಿದ್ದ ನೋವು, ಅವಮಾನ ಮತ್ತು ಜೀವಭಯದ ಕಥೆಗಳನ್ನು ಅಲ್ಲಿ ಕೇಳಿದರು. ಈ ಅನುಭವದ ನಂತರ ಅವರು ಸಕ್ರಿಯ ಸ್ತ್ರೀವಾದಿ ಚಳವಳಿಯ ಪ್ರಮುಖ ಮುಖವಾದರು. ಆದರೆ ಆರಂಭದ ಸ್ಟೀನಮ್‌ ಇಂದಿನ ‘ಲಿಬರಲ್ ಫೆಮಿನಿಸಂ’ (ಈಗಿರುವ ವ್ಯವಸ್ಥೆಯಲ್ಲಿಯೇ ಮಹಿಳೆಯರಿಗೂ ಸಮಾನ ಸ್ಥಾನಮಾನ ಬೇಕೆನ್ನುವ ಸ್ತ್ರೀವಾದ) ಗಿಂತ ಹೆಚ್ಚು ರ್ಯಾಡಿಕಲ್‌ (ಈ ವ್ಯವಸ್ಥೆಯೇ ಸಮಸ್ಯೆಗೆ ಕಾರಣವಾಗಿದೆಯೇ? ಹಾಗಿದ್ದರೆ ಅದನ್ನೇ ಬದಲಿಸಬೇಕಲ್ಲವೇ? ಎನ್ನುವ ಚಿಂತನೆ) ಆಗಿದ್ದರು.

ಇಲ್ಲಿ ಸ್ಟೀನಮ್‌ ಅವರ 1969ರ ಬರಹ ಉಲ್ಲೇಖಾರ್ಹ. ಅವರು ಬರೆದ ‘After Black Power, Women’s Liberation’ ಲೇಖನದಲ್ಲಿ ಮಹಿಳಾ ಮುಕ್ತಿ ಚಳವಳಿಯ ಹುಟ್ಟನ್ನು ಅಮೆರಿಕದ Black Power, Civil Rights ಮತ್ತು ಎಡಪಂಥೀಯ ಚಳವಳಿಗಳ ಹಿನ್ನೆಲೆಯಲ್ಲೇ ವಿವರಿಸುತ್ತಾರೆ.

ಆ ಕಾಲದ ಮಹಿಳೆಯರು ಸಮಾಜ ಪರಿವರ್ತನೆಯ ಚಳವಳಿಗಳಲ್ಲಿ ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡುತ್ತಿದ್ದರು. ಜೈಲಿಗೆ ಹೋಗುತ್ತಿದ್ದರು. ಪೊಲೀಸರ ದೌರ್ಜನ್ಯ ಎದುರಿಸುತ್ತಿದ್ದರು. ಯುದ್ಧವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಚಳವಳಿಯೊಳಗೆ ಬಂದಾಗ ಅವರಿಗೆ ಟೈಪಿಂಗ್, ಕಾಫಿ ಮಾಡುವುದು ಮತ್ತು ಪುರುಷ ನಾಯಕರಿಗೆ ಸಹಾಯಕವಾಗಿರುವ ಕೆಲಸಗಳೇ ಸಿಗುತ್ತಿದ್ದವು. ಹೀಗಾಗಿ ಮಹಿಳೆಯರು ತಮ್ಮದೇ ಸಮಸ್ಯೆಗಳನ್ನು ಚರ್ಚಿಸಲು ಪ್ರತ್ಯೇಕ ಸಂಘಟನೆಗಳನ್ನು ಕಟ್ಟಿಕೊಂಡರು. ತಮ್ಮ ವರ್ಗದ ಪುರುಷರಿಗಿಂತ ಬೇರೆ ವರ್ಗದ ಮಹಿಳೆಯರೊಂದಿಗೆ ತಮಗೆ ಹೆಚ್ಚು ಸಾಮಾನ್ಯ ಸಮಸ್ಯೆಗಳಿವೆ ಎಂಬುದನ್ನು ಅಂದಿನ ಮಹಿಳೆಯರು ಕಂಡುಕೊಂಡರು. ಇದು ಸ್ತ್ರೀವಾದದೊಳಗಿನ ವರ್ಗ ರಾಜಕೀಯದ ಆರಂಭಿಕ ಚರ್ಚೆಗಳಲ್ಲಿ ಒಂದು.

ಆ ಕಾಲದ ರ್ಯಾಡಿಕಲ್‌ ಮಹಿಳಾ ಗುಂಪುಗಳು ಮಹಿಳೆಯರನ್ನು ಒಂದು ರೀತಿಯ ‘ಶೋಷಿತ ವರ್ಗ’ವಾಗಿ ನೋಡುತ್ತಿದ್ದವು. ಪಿತೃಪ್ರಭುತ್ವ ಮತ್ತು ಬಂಡವಾಳಶಾಹಿ ಸಮಾಜ ಪರಸ್ಪರ ಸಂಬಂಧ ಹೊಂದಿವೆ ಎಂದು ವಾದಿಸುತ್ತಿದ್ದವು. ಉಚಿತ ಮಕ್ಕಳ ಆರೈಕೆ ಕೇಂದ್ರಗಳು, ಸಮಾನ ವೇತನ, ಉದ್ಯೋಗದ ಹಕ್ಕು, ಗರ್ಭಪಾತದ ಹಕ್ಕು.. ಇವೆಲ್ಲವೂ ಮಹಿಳಾ ಮುಕ್ತಿಯ ಭಾಗವೆಂದು ನೋಡಲಾಗುತ್ತಿತ್ತು. Redstockings‌ನಂತಹ ಗುಂಪುಗಳು ಇನ್ನೂ ಮುಂದೆ ಹೋಗಿ, ಮಹಿಳಾ ಮುಕ್ತಿಗೆ ಕೇವಲ ಬಂಡವಾಳಶಾಹಿಯನ್ನು ಪ್ರಶ್ನಿಸುವುದಷ್ಟೇ ಸಾಲದು; ಪಿತೃಪ್ರಭುತ್ವವನ್ನೂ ನಾಶಪಡಿಸಬೇಕು ಎಂದು ಹೇಳುತ್ತಿದ್ದವು. ಅಂದರೆ ಆರಂಭಿಕ ಮಹಿಳಾ ಮುಕ್ತಿ ಚಳವಳಿ ಕೇವಲ ‘ಮಹಿಳೆಯರೂ CEO ಆಗಬೇಕು’ ಎನ್ನುವ ಬೇಡಿಕೆಯಾಗಿರಲಿಲ್ಲ. ಅದು ಸಮಾಜದ ಅಧಿಕಾರ ಸಂಬಂಧಗಳನ್ನೇ ಪ್ರಶ್ನಿಸುವ ಪ್ರಯತ್ನವಾಗಿತ್ತು.

ಹಾಗಾದರೆ CIAಗೂ ಸ್ತ್ರೀವಾದಿ ಸ್ಟೀನಮ್‌ಗೂ ನಂಟೇನು?

1940ರ ದಶಕದ ಕೊನೆಯಿಂದ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವೆ ಜಗತ್ತಿನ ಪ್ರಾಬಲ್ಯಕ್ಕಾಗಿ ನಡೆದ ಹೋರಾಟ ಸೇನಾ ಸ್ಪರ್ಧೆ ಮಾತ್ರ ಆಗಿರಲಿಲ್ಲ. ಅದು ಎರಡು ವಿಭಿನ್ನ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಳ ನಡುವಿನ ವಿಚಾರಧಾರೆಯ ಹೋರಾಟವೂ ಆಗಿತ್ತು. ಒಂದು ಕಡೆ ಅಮೆರಿಕದ ನೇತೃತ್ವದ ಬಂಡವಾಳಶಾಹಿ ವ್ಯವಸ್ಥೆ. ಮತ್ತೊಂದು ಕಡೆ ಸೋವಿಯತ್ ಒಕ್ಕೂಟದ ಸಮಾಜವಾದಿ ವ್ಯವಸ್ಥೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ CIA ಕೇವಲ ವಿದೇಶಿ ಸರ್ಕಾರಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಸಂಸ್ಥೆಯಾಗಿ ಉಳಿಯಲಿಲ್ಲ. ಶೀತಲ ಸಮರದ ಅವಧಿಯಲ್ಲಿ ಕಮ್ಯುನಿಸ್ಟ್ ಪ್ರಭಾವವನ್ನು ತಡೆಯಲು ಸಾಂಸ್ಕೃತಿಕ, ವಿದ್ಯಾರ್ಥಿ ಮತ್ತು ಬೌದ್ಧಿಕ ವಲಯಗಳಲ್ಲೂ ವಿವಿಧ ರೀತಿಯ ಗುಪ್ತ ಕಾರ್ಯಾಚರಣೆಗಳು ನಡೆದವು. 1967ರಲ್ಲಿ Ramparts ಸೇರಿದಂತೆ ಪತ್ರಿಕೆಗಳ ತನಿಖೆಗಳ ಮೂಲಕ CIA ಅಮೆರಿಕದ ವಿವಿಧ ಸಂಘಟನೆಗಳಿಗೆ ಗುಪ್ತವಾಗಿ ಹಣ ನೀಡುತ್ತಿದ್ದ ವಿಚಾರಗಳು ಬಹಿರಂಗವಾದವು. ಈ ಹಿನ್ನೆಲೆಯಲ್ಲಿ ಗ್ಲೋರಿಯಾ ಸ್ಟೀನಮ್‌ ಅವರ ಹಿಂದಿನ CIA ಸಂಪರ್ಕವೂ ಸಾರ್ವಜನಿಕ ಚರ್ಚೆಗೆ ಬಂತು.

1950ರ ದಶಕದಲ್ಲಿ ಭಾರತದಲ್ಲಿ ಎರಡು ವರ್ಷ ಕಳೆದ ನಂತರ ಸ್ಟೀನಮ್‌ ಅಮೆರಿಕಕ್ಕೆ ಮರಳಿದರು. ನಂತರ CIA ಅಧಿಕಾರಿಗಳಾದ C.D. Jackson ಮತ್ತು Cord Meyer ಅವರ ಸಂಪರ್ಕಕ್ಕೆ ಬಂದರು. ಅವರು Independent Research Service (IRS) ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ನಿರ್ದೇಶಕರಾಗಿ ಕೆಲಸ ಮಾಡಿದರು. ಈ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳನ್ನು ಸೋವಿಯತ್ ಪ್ರಭಾವವಿದ್ದ ಅಂತಾರಾಷ್ಟ್ರೀಯ ಯುವಜನೋತ್ಸವಗಳಿಗೆ ಕಳುಹಿಸಿ, ಅಮೆರಿಕದ ಪರವಾದ ವಿದ್ಯಾರ್ಥಿ ಧ್ವನಿಯನ್ನು ರೂಪಿಸುವ ಪ್ರಯತ್ನ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ CIA ಹಣಕಾಸಿನ ಬೆಂಬಲವಿತ್ತು.

ನಂತರ ಈ ಸಂಬಂಧ ಬಹಿರಂಗವಾದಾಗ ಸ್ಟೀನಮ್‌ ತಮ್ಮ ಪಾತ್ರವನ್ನು ಒಪ್ಪಿಕೊಂಡರು. ಆದರೆ CIAಯೊಂದಿಗೆ ಕೆಲಸ ಮಾಡಿದ್ದನ್ನು ಅವರು ಅಪರಾಧಬೋಧೆಯಿಂದ ವಿವರಿಸಲಿಲ್ಲ. ಬದಲಾಗಿ, ಆ ಕಾಲದಲ್ಲಿ ತಮಗೆ ಅದು ಉದಾರವಾದಿ, ಅಹಿಂಸಾತ್ಮಕ ಮತ್ತು ಗೌರವಾನ್ವಿತ ಸಂಸ್ಥೆಯಂತೆ ಕಂಡಿತ್ತು ಎಂದು ಸಮರ್ಥಿಸಿಕೊಂಡರು. ಸ್ಟೀನಮ್‌ CIAಗೆ ಸಂಬಂಧಿಸಿದ್ದರು ಎಂಬ ಇತಿಹಾಸದ ದಾಖಲೆ ಒಂದು ಸಂಗತಿ. ಆದರೆ CIAಯ ಉದ್ದೇಶಪೂರ್ವಕ ಯೋಜನೆಯಂತೆ ಸ್ಟೀನಮ್‌ರನ್ನು ಬಳಸಿಕೊಂಡು ಅಮೆರಿಕದ ಸ್ತ್ರೀವಾದವನ್ನು ಸಮಾಜವಾದಿ ʼವರ್ಗ ಹೋರಾಟʼದಿಂದ ದೂರ ಮಾಡಲಾಯಿತು ಎಂಬುದು ಅದಕ್ಕಿಂತ ದೊಡ್ಡ ರಾಜಕೀಯ ವ್ಯಾಖ್ಯಾನ. ಈ ಎರಡನ್ನೂ ಒಂದೇ ಎಂದು ಪರಿಗಣಿಸಬಾರದು. ಆದರೆ ಎರಡನ್ನೂ ಪಕ್ಕಪಕ್ಕದಲ್ಲಿ ಇಟ್ಟು ಪ್ರಶ್ನೆ ಕೇಳುವುದಕ್ಕೆ ಇತಿಹಾಸ ಅವಕಾಶ ಕೊಡುತ್ತದೆ.

‘ಮಹಿಳಾ ಮುಕ್ತಿ’ ಮತ್ತು ‘ವರ್ಗ ಮುಕ್ತಿ’ ಏಕೆ ಒಟ್ಟಿಗೆ ಬೇಕು?

ವರ್ಗ ಹೋರಾಟ/ ವರ್ಗ ಮುಕ್ತಿ ಎಂದರೆ ಸಮಾಜದಲ್ಲಿರುವ ಹಣ, ಆಸ್ತಿ, ಅಧಿಕಾರ ಮತ್ತು ಅವಕಾಶಗಳ ಅಸಮಾನತೆಯನ್ನು ಪ್ರಶ್ನಿಸುವ ಹೋರಾಟ. ಕಾರ್ಮಿಕರು ಹೆಚ್ಚು ವೇತನ, ಉತ್ತಮ ಕೆಲಸದ ಪರಿಸ್ಥಿತಿ ಮತ್ತು ಉದ್ಯೋಗ ಭದ್ರತೆ ಕೇಳುವುದು, ಬಡವರು ಸಂಪನ್ಮೂಲಗಳ ಮೇಲಿನ ತಮ್ಮ ಹಕ್ಕಿಗಾಗಿ ಹೋರಾಡುವುದು ಇದರ ಭಾಗ.

ಮಹಿಳೆಯರಿಗೆ ಸಮಾನ ಹಕ್ಕು ಬೇಕು ಎನ್ನುವುದು ಒಂದು ಹೋರಾಟವಾದರೆ, ಆ ಸಮಾನತೆ ಯಾವ ಮಹಿಳೆಯರ ಬದುಕಿಗೆ ತಲುಪುತ್ತಿದೆ? ಎನ್ನುವುದು ಇನ್ನೊಂದು ಪ್ರಶ್ನೆ. ದೊಡ್ಡ ಕಂಪನಿಯ ಮಹಿಳೆಯೊಬ್ಬರು CEO ಆಗುವುದು ಲಿಂಗ ಸಮಾನತೆಯ ಗೆಲುವಾಗಬಹುದು. ಆದರೆ ಅದೇ ಕಂಪನಿಯಲ್ಲಿ ಕೆಲಸ ಮಾಡುವ ಸಾವಿರಾರು ಮಹಿಳಾ ಕಾರ್ಮಿಕರಿಗೆ ಕಡಿಮೆ ವೇತನ, ಮಕ್ಕಳ ಆರೈಕೆಯ ಸಮಸ್ಯೆ ಮತ್ತು ಉದ್ಯೋಗದ ಅಭದ್ರತೆ ಮುಂದುವರಿದರೆ, ಮಹಿಳಾ ಮುಕ್ತಿಯ ಪ್ರಶ್ನೆ ಅಲ್ಲಿಗೇ ಮುಗಿಯುವುದಿಲ್ಲ. ಇದೇ ಕಾರಣಕ್ಕೆ ಆರಂಭಿಕ ಮಹಿಳಾ ಮುಕ್ತಿ ಚಳವಳಿಯ ಕೆಲವು ಧಾರೆಗಳು ಲಿಂಗ ಅಸಮಾನತೆಯ ಜೊತೆಗೆ ವರ್ಗ ಅಸಮಾನತೆಯನ್ನೂ ಪ್ರಶ್ನಿಸಿದ್ದವು. ಆದರೆ ಮುಂದೆ ಸ್ತ್ರೀವಾದದ ಒಂದು ಭಾಗ ಮುಖ್ಯವಾಹಿನಿಗೆ ಬಂದಂತೆ, ಮಹಿಳೆಯರಿಗೆ ಸಮಾನ ಅವಕಾಶ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಂಸ್ಥೆಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯದ ಪ್ರಶ್ನೆಗಳು ಹೆಚ್ಚು ಮುನ್ನೆಲೆಗೆ ಬಂದವು.

1969ರ ತಮ್ಮ ಬರಹದಲ್ಲಿ ಮಹಿಳೆಯರನ್ನು ಪ್ರತ್ಯೇಕವಾಗಿ ಶೋಷಣೆಗೆ ಒಳಗಾದ ಒಂದು ವರ್ಗವಾಗಿ ನೋಡಿದ್ದ ಸ್ಟೀನಮ್‌, ಮಹಿಳೆಯರ ಸಮಸ್ಯೆಗಳನ್ನು ಪಿತೃಪ್ರಭುತ್ವದಂತಹ ಪ್ರಶ್ನೆಗಳೊಂದಿಗೆ ಜೋಡಿಸಿದ್ದರು. ಅಂದರೆ ಅವರ ಆರಂಭಿಕ ಸ್ತ್ರೀವಾದದಲ್ಲಿ ಲಿಂಗ ಸಮಾನತೆಯ ಪ್ರಶ್ನೆಯ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ಪ್ರಶ್ನೆಯೂ ಇತ್ತು. ಆದರೆ ನಂತರ ಸ್ಟೀನಮ್‌ ಅಮೆರಿಕದ ಸ್ತ್ರೀವಾದದ ಅತ್ಯಂತ ಪರಿಚಿತ ಮುಖವಾದರು. Ms. ಮ್ಯಾಗಜಿನ್, ರಾಜಕೀಯ ಸಂಘಟನೆಗಳು ಮತ್ತು ಸಾರ್ವಜನಿಕ ಪ್ರಚಾರದ ಮೂಲಕ ಮಹಿಳಾ ಹಕ್ಕುಗಳ ಪ್ರಶ್ನೆಯನ್ನು ದೊಡ್ಡ ಮಟ್ಟದಲ್ಲಿ ಮುಖ್ಯವಾಹಿನಿಗೆ ತಂದರು.

ಇದನ್ನೂ ಓದಿ: 6 ದಶಕಗಳ ಸೌಹಾರ್ದಕ್ಕೆ ಬಿಜೆಪಿ ತಿಲಾಂಜಲಿ; ಮುಸ್ಲಿಮರು ಆರಂಭಿಸಿದ ಕೃಷ್ಣ ಜನ್ಮಾಷ್ಟಮಿ ಈಗ ಹಿಂದೂಗಳಿಗೆ ಮಾತ್ರ!

ಇದು ಸ್ತ್ರೀವಾದದ ಸೋಲು ಎಂದು ಹೇಳಲಾಗುವುದಿಲ್ಲ. ಆದರೆ ಮಹಿಳಾ ಸಮಾನತೆಯ ಈ ಹೋರಾಟ ಮುಖ್ಯವಾಹಿನಿಗೆ ಬಂದಾಗ, ಅದಕ್ಕೆ ಆರಂಭದಲ್ಲಿ ಬೆಸೆದುಕೊಂಡಿದ್ದ ವರ್ಗದ ಪ್ರಶ್ನೆ ಏನಾಯಿತು? ಇಲ್ಲೇ ಸ್ಟೀನಮ್‌ ಅವರ ಹಿಂದಿನ CIA ಸಂಪರ್ಕದ ಪ್ರಶ್ನೆ ಮತ್ತೆ ಎದುರಾಗುತ್ತದೆ. CIAಯೊಂದಿಗೆ ಸ್ಟೀನಮ್‌ ಕೆಲಸ ಮಾಡಿದ್ದದ್ದು ಸತ್ಯ. “CIA ಸ್ಟೀನಮ್‌ರನ್ನು ಬಳಸಿಕೊಂಡು ಸ್ತ್ರೀವಾದವನ್ನು ವರ್ಗ ಹೋರಾಟದಿಂದ ದೂರ ಮಾಡಿತು” ಎಂಬ ವ್ಯಾಖ್ಯಾನಗಳಿದ್ದರೂ ಅದಕ್ಕೆ ಪುರಾವೆಗಳಿಲ್ಲ. ಆದರೆ ಶೀತಲ ಸಮರದ ಸಂದರ್ಭದಲ್ಲಿ ಅಮೆರಿಕ ಸಮಾಜವಾದ ಮತ್ತು ಕಮ್ಯುನಿಸಂನ ಪ್ರಭಾವವನ್ನು ಎದುರಿಸುತ್ತಿದ್ದ ರಾಜಕೀಯ ವಾತಾವರಣದಲ್ಲಿ, ಯಾವ ರೀತಿಯ ಸಾಮಾಜಿಕ ಚಳವಳಿಗಳಿಗೆ ಹೆಚ್ಚು ಜಾಗ ಮತ್ತು ಮಾನ್ಯತೆ ದೊರೆಯಿತು ಎಂಬ ಪ್ರಶ್ನೆ ಕೇಳಬಹುದು.

ಶೀತಲ ಸಮರದ ಸಂದರ್ಭದಲ್ಲಿ ಅಮೆರಿಕ ಸಮಾಜವಾದ ಮತ್ತು ಕಮ್ಯುನಿಸಂನ ಪ್ರಭಾವವನ್ನು ಎದುರಿಸುತ್ತಿದ್ದ ರಾಜಕೀಯ ವಾತಾವರಣದಲ್ಲಿ, ಸಾಮಾಜಿಕ ಚಳವಳಿಗಳಿಗೆ ಹೆಚ್ಚು ಜಾಗ ಮತ್ತು ಮಾನ್ಯತೆ ದೊರೆಯುವಲ್ಲಿ ಗ್ಲೋರಿಯಾ ಪಾತ್ರ ಮುಖ್ಯವಾದ್ದು. ಮಹಿಳಾ ಹಕ್ಕುಗಳ ಹೋರಾಟ ಮುಖ್ಯವಾಹಿನಿಗೆ ಬಂದಂತೆ, ಅದರಲ್ಲಿದ್ದ ಪಿತೃಪ್ರಭುತ್ವ ವಿರೋಧಿ ಮತ್ತು ವರ್ಗ ಅಸಮಾನತೆ ವಿರೋಧಿ ಪ್ರಶ್ನೆಗಳು ಎಷ್ಟು ಮುಂದುವರಿದವು ಎಂಬುದರ ಜೊತೆಗೆ ಮಹಿಳೆಯರಿಗೆ ಸಮಾನ ಅವಕಾಶ, ನಾಯಕತ್ವ ಮತ್ತು ವೈಯಕ್ತಿಕ ಸ್ವಾತಂತ್ರ್ಯ ನೀಡುವ ಚೌಕಟ್ಟು ಬಂಡವಾಳಶಾಹಿ ವ್ಯವಸ್ಥೆಯೊಳಗೂ ಸುಲಭವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಯಿತೇ? ಎಂಬುದನ್ನೂ ಪರಿಶೀಲಿಸಬೇಕಾಗುತ್ತದೆ.

ಮಹಿಳಾ ಮುಕ್ತಿಯ ಹೋರಾಟ ಮತ್ತು ವರ್ಗ ಮುಕ್ತಿಯ ಹೋರಾಟ ಪರಸ್ಪರ ವಿರುದ್ಧವಾದವುಗಳಲ್ಲ. ಮಹಿಳೆ ಎಂಬ ಕಾರಣಕ್ಕೆ ಎದುರಾಗುವ ತಾರತಮ್ಯವನ್ನು ಪ್ರಶ್ನಿಸುವುದು ಎಷ್ಟು ಅಗತ್ಯವೋ, ಆ ಮಹಿಳೆ ಕಾರ್ಮಿಕಳಾಗಿದ್ದರೆ ಆಕೆಯ ವೇತನ, ಉದ್ಯೋಗ ಭದ್ರತೆ, ಮಕ್ಕಳ ಆರೈಕೆ, ಆರೋಗ್ಯ ಮತ್ತು ಆರ್ಥಿಕ ಸ್ವಾತಂತ್ರ್ಯದ ಪ್ರಶ್ನೆಗಳನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸುವುದು ಅಷ್ಟೇ ಅಗತ್ಯ. ಒಬ್ಬ ಮಹಿಳೆ ದೊಡ್ಡ ಕಂಪನಿಯ CEO ಆಗುವುದು ಲಿಂಗ ಸಮಾನತೆಯ ಒಂದು ಗೆಲುವು. ಆದರೆ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಸಾವಿರಾರು ಮಹಿಳಾ ಕಾರ್ಮಿಕರಿಗೆ ಸಮಾನ ವೇತನ, ಸುರಕ್ಷಿತ ಕೆಲಸ, ಸಾಮಾಜಿಕ ಭದ್ರತೆ ಮತ್ತು ಸಂಘಟನೆಯ ಹಕ್ಕು ಸಿಗದಿದ್ದರೆ ಅದು ನಿಜವಾದ ಗೆಲುವಲ್ಲ.

ಹೀಗಾಗಿ ಸ್ಟೀನಮ್‌ ಅವರ ಪರಂಪರೆಯನ್ನು ಕೇವಲ ‘ಮಹಿಳಾ ಹಕ್ಕುಗಳ ಹೋರಾಟ’ ಎಂದು ನೋಡುವುದೂ ಅಪೂರ್ಣ; ಅದನ್ನೇ ‘ವರ್ಗ ಹೋರಾಟದ ಪ್ರತಿನಿಧಿ’ ಎಂದು ನೋಡುವುದೂ ಸರಿಯಲ್ಲ. ಲಿಂಗ ಸಮಾನತೆಯ ಹೋರಾಟವನ್ನು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಪ್ರಶ್ನೆಗಳೊಂದಿಗೆ ಹೇಗೆ ಜೋಡಿಸಬಹುದು ಎಂಬ ಚರ್ಚೆಯಲ್ಲೇ ಸ್ಟೀನಮ್‌ ಅವರ ರಾಜಕೀಯ ಪಯಣವನ್ನು ನೋಡಬಹುದು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವಕಲ್ಯಾಣದಲ್ಲಿ ಅ.24ರಿಂದ ʼಕಲ್ಯಾಣ ಪರ್ವʼ ರಜತ ಮಹೋತ್ಸವ

ವಿಶ್ವಗುರು ಬಸವಣ್ಣನವರ ತತ್ವ-ಸಿದ್ಧಾಂತಗಳು, ವಚನ ಸಾಹಿತ್ಯದ ಸಂದೇಶ ಹಾಗೂ ಶರಣರ ಸಮಾನತೆಯ...

‘ನೆಹರೂ–ಗಾಂಧಿ, ಯಾದವ್ ಕುಟುಂಬಗಳ ನಾಯಕತ್ವ ಬೇಡ’: ಒವೈಸಿ ಹೇಳಿಕೆಗೆ ವಿಪಕ್ಷಗಳ ತೀವ್ರ ಆಕ್ರೋಶ

ಮುಸ್ಲಿಂ ಯುವಕರು ನೆಹರೂ–ಗಾಂಧಿ ಮತ್ತು ಯಾದವ್ ಕುಟುಂಬಗಳ ರಾಜಕೀಯ ನಾಯಕತ್ವವನ್ನು ಅನುಸರಿಸುವುದನ್ನು...

ಬೀದರ್‌ | ಗಾಯಕ ದೇವದಾಸಗೆ ಒಲಿದ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ

ಕರ್ನಾಟಕ ಜಾನಪದ ಅಕಾಡೆಮಿಯು 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು,...