ಬಿಹಾರದ ಪೂರ್ನಿಯಾದಲ್ಲಿ ಭಾನುವಾರ ನಡೆದ ‘ಮತದಾರರಿಗೆ ಅಧಿಕಾರ ಯಾತ್ರೆ’ಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಬೈಕ್ ಚಲಾಯಿಸಿ ಜನರ ಗಮನ ಸೆಳೆದರು.
ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ (ಎಸ್ಐಆರ್)ಯಲ್ಲಿನ ಅಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ಯಾತ್ರೆಯನ್ನು ಆಯೋಜಿಸಲಾಗಿತ್ತು. ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗವು ಎಸ್ಐಆರ್ ಮೂಲಕ “ಮತ ಕಳ್ಳತನ”ವನ್ನು ಸಾಂಸ್ಥಿಕವಾಗಿ ನಡೆಸುತ್ತಿದೆ ಎಂದು ಆರೋಪಿಸಿದರು.
ಚುನಾವಣಾ ಆಯೋಗವು ಆಡಳಿತಾರೂಢ ಬಿಜೆಪಿಯೊಂದಿಗೆ ಪಾಲುದಾರಿಕೆಯ ಒಡಂಬಡಿಕೆ ಮಾಡಿಕೊಂಡಿದೆ ಎಂದು ಆರೋಪಿಸಿ, ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ನಕಲಿ ಮತದಾರರು ಸೇರ್ಪಡೆಯಾದ ಬಗ್ಗೆ ಆಯೋಗವು ಯಾವುದೇ ಉತ್ತರ ನೀಡಿಲ್ಲ ಎಂದು ಟೀಕಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಲೆಮಾರಿ ಸಮುದಾಯಗಳಿಗೆ ಅನ್ಯಾಯ – ಜಾತಿಗಣತಿಯ ಮೇಲೂ ಕರಿನೆರಳು: ರಾಹುಲ್ ಗಾಂಧಿ ಗಮನಿಸುವರೇ?
ಅರರಿಯಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ಇಂಡಿಯಾ ಮೈತ್ರಿಕೂಟವು ಬಿಹಾರದ ಮುಂಬರುವ ಚುನಾವಣೆಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ. ಈ ಮೈತ್ರಿಕೂಟವು ಒಂದು ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸಲಿದೆ. ಮೋದಿ ಸರ್ಕಾರವು ಸಾರ್ವಜನಿಕ ವಲಯದ ಘಟಕಗಳ ಖಾಸಗೀಕರಣದ ನಂತರ ಈಗ ಎಸ್ಐಆರ್ ಮೂಲಕ ಚುನಾವಣಾ ಆಯೋಗದ ಸಹಾಯದಿಂದ ಬಡವರ ಮತಗಳನ್ನು ಕದಿಯಲು ಬಯಸುತ್ತಿದೆ. ಇಂಡಿಯಾ ಮೈತ್ರಿಕೂಟವು ಬಿಹಾರದಲ್ಲಿ ಇದನ್ನು ತಡೆಯಲಿದೆ ಎಂದು ಹೇಳಿದರು.
“ಚುನಾವಣಾ ಆಯೋಗವು ತಮ್ಮಿಂದ ಪ್ರಮಾಣಪತ್ರವನ್ನು ಕೇಳಿದ್ದನ್ನು ಉಲ್ಲೇಖಿಸಿದ ಬಿಜೆಪಿಯ ಅನುರಾಗ್ ಠಾಕೂರ್ ಅವರು ಇದೇ ರೀತಿಯ ಆರೋಪಗಳನ್ನು ಮಾಡಿದರೂ ಅವರಿಂದ ಯಾವುದೇ ಪ್ರಮಾಣಪತ್ರವನ್ನು ಕೇಳಲಾಗಿಲ್ಲ. ನಾನು ಮಹದೇವಪುರದ ಬಗ್ಗೆ ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದೆ. ಐದು ನಿಮಿಷಗಳಲ್ಲಿ ಚುನಾವಣಾ ಆಯೋಗವು ರಾಹುಲ್ ಗಾಂಧಿಯವರು ಪ್ರಮಾಣಪತ್ರ ನೀಡಬೇಕು ಎಂದಿತು. ಆದರೆ ಅನುರಾಗ್ ಠಾಕೂರ್ ಅವರಿಗೆ ಇದುವರೆಗೂ ಯಾವುದೇ ಪ್ರಮಾಣಪತ್ರ ಕೇಳಲಾಗಿಲ್ಲ. ಚುನಾವಣಾ ಆಯೋಗ ಎಸ್ಐಆರ್ ಮೂಲಕ ಮತಗಳನ್ನು ಕದಿಯಲು ಸಾಂಸ್ಥಿಕ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೇಜಸ್ವಿ ಯಾದವ್ ಚುನಾವಣಾ ಆಯೋಗವನ್ನು “ಗೋದಿ ಆಯೋಗ” ಎಂದು ಕರೆದರೆ, ಸಿಪಿಐ(ಎಂಎಲ್) ನಾಯಕ ದೀಪಾಂಕರ್ ಭಟ್ಟಾಚಾರ್ಯ “ಇದು ಚುನಾವಣಾ ಆಯೋಗವಲ್ಲ, ಚುನಾವಣಾ ಎಡವಟ್ಟು ಆಯೋಗ” ಎಂದು ಟೀಕಿಸಿದರು.
— Congress (@INCIndia) August 24, 2025