ಕೇವಲ ಒಂದು ಚಾಕೊಲೇಟ್ ಕದ್ದಿದ್ದಕ್ಕೆ ಐದು ಮಕ್ಕಳ ಬಟ್ಟೆ ಬಿಚ್ಚಿಸಿ, ಒಂದೇ ಹಗ್ಗದಿಂದ ಎಲ್ಲರನ್ನೂ ಬಿಗಿದು ಮಾರುಕಟ್ಟೆಯಲ್ಲಿ ತುಂಬಿದ ಜನಸಂದಣಿಯ ನಡುವೆ ಬೆತ್ತಲೆ ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ಬಿಹಾರದ ಸಮಷ್ಟಿಪುರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಅಂಗಡಿಯೊಂದರಿಂದ ಚಾಕೊಲೇಟ್ ಕದ್ದ ಆರೋಪದಲ್ಲಿ ಎಲ್ಲ ಮಕ್ಕಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ಸೀತಾಮರಿಯ ಮಲ್ಲಾಹಿ ಎಂಬ ಗ್ರಾಮದ ಅಂಗಡಿ ಮಾಲೀಕ ಕ್ಯಾಮೆರಾ ಮುಂದೆ ಮಕ್ಕಳು ತಮ್ಮ ಹಾಗೂ ತಮ್ಮ ತಂದೆಯಂದಿರ ಹೆಸರು ಹೇಳುವಂತೆ ಬಲವಂತಪಡಿಸಿದ್ದಾನೆ. ಬಾಲಕರ ಪೈಕಿ ಒಬ್ಬನಿಗೆ ಹಲ್ಲೆ ಮಾಡಿ ಕ್ಯಾಮೆರಾ ನೋಡು ಎಂದು ದೌರ್ಜನ್ಯ ಮೆರೆದಿರವುದು ದೃಢಪಟ್ಟಿದೆ.
ಮಕ್ಕಳತ್ತ ಗುರಿ ಮಾಡಿ ಕೈಯಲ್ಲಿ ಬಡಿಗೆ ಹಿಡಿದಿರುವ ಅಂಗಡಿ ಮಾಲೀಕ, “ಎಲ್ಲ ಮಕ್ಕಳನ್ನು ನನ್ನ ಅಂಗಡಿಯಿಂದ ಕಳವು ಮಾಡಿದಾಗ ಹಿಡಿಯಲಾಗಿದೆ” ಎಂದು ಹೇಳಿದ್ದಾನೆ. ಅವಮಾನದಿಂದ ಮಕ್ಕಳು ಮುಖಮುಚ್ಚಿಕೊಂಡಿದ್ದರೆ, ಅವರ ಸುತ್ತಲೂ ಗ್ರಾಮಸ್ಥರು ಅಣಕವಾಡುತ್ತಿದ್ದರು.
ಇದನ್ನು ಓದಿದ್ದೀರಾ? ಮಾರ್ಚ್ 1, 2027 ರಿಂದ ಕೇಂದ್ರದಿಂದ ಜಾತಿ, ಜನ ಗಣತಿ; ಕೆಲ ರಾಜ್ಯಗಳಲ್ಲಿ ಮುಂದಿನ ವರ್ಷದಿಂದ ಪ್ರಾರಂಭ
“ನಾನು ಒಂದೇ ಒಂದು ಸ್ನಿಕ್ಕರ್ ಚಾಕೊಲೇಟ್ ಎತ್ತಿಕೊಂಡಿದ್ದೆ” ಎಂದು ಒಬ್ಬ ಬಾಲಕ ಹೇಳಿದ್ದಾನೆ. ಜನನಿಬಿಡ ಮಾರುಕಟ್ಟೆಯಲ್ಲಿ ಮಕ್ಕಳನ್ನು ಬೆತ್ತಲು ಮೆರವಣಿಗೆ ಮಾಡಿದರೂ, ಈ ಹಿಂಸೆ ತಡೆಯಲು ಯಾರೂ ಮಧ್ಯಪ್ರವೇಶಿಸುವ ಬದಲು ಘಟನೆಯನ್ನು ಚಿತ್ರೀಕರಿಸಿಕೊಳ್ಳುವುದರಲ್ಲಿ ನಿರತರಾಗಿದ್ದರು. ವಿಡಿಯೊ ವೈರಲ್ ಆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂಗಡಿ ಮಾಲೀಕ ಹಾಗೂ ಇತರ ಇಬ್ಬರನ್ನು ಈ ಸಂಬಂಧ ಬಂಧಿಸಲಾಗಿದೆ. ಈ ಘಟನೆಯ ವಿಡಿಯೊ ಚಿತ್ರೀಕರಣ ಮಾಡಿ ಪ್ರಸಾರ ಮಾಡಿದ ಮಾಧ್ಯಮದವರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಸೀತಾಮರಿ ಪೊಲೀಸರು ಹೇಳಿದ್ದಾರೆ.