NEET ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿರುವ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್‌ಚುಕ್, ತಮ್ಮ ಅನಿರ್ದಿಷ್ಟಾವಧಿ ಉಪವಾಸವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಬರೆದ ಪತ್ರದಲ್ಲಿ, ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರೂ ಯುವಕರ ಮೇಲೆ ತೋರಲಾಗುತ್ತಿರುವ ಕ್ರೌರ್ಯವನ್ನು ಕಂಡು ತೀವ್ರವಾಗಿ ಮನನೊಂದಿದ್ದೇನೆ. ಯುವಜನರ ನಾಯಕರು ಸಂಸತ್ ಭವನದಲ್ಲಿ ಸಂಸದರನ್ನು ಭೇಟಿ ಮಾಡಲು ಅವಕಾಶ ನೀಡುವವರೆಗೆ ಅಥವಾ ನನ್ನನ್ನು ಇಲ್ಲಿ ಆಸ್ಪತ್ರೆಯಲ್ಲೇ ಅವರು ಭೇಟಿ ಮಾಡಲು ಅವಕಾಶ ನೀಡುವವರೆಗೆ ನನ್ನ ಉಪವಾಸವನ್ನು ಮುಂದುವರಿಸಲು ನಿರ್ಧರಿಸಿದ್ದೇನೆ” ಎಂದು ಸೋನಂ ತಿಳಿಸಿದ್ದಾರೆ.
ಪ್ರತಿಭಟನೆಗಳ ನಡುವೆ ಯುವಕರು ಶಾಂತಿ ಮತ್ತು ಸಹನೆಯನ್ನು ಕಾಪಾಡಿಕೊಂಡಿರುವುದು ತಮ್ಮನ್ನು ಭಾವುಕರನ್ನಾಗಿಸಿದೆ ಎಂದು ಹೇಳಿರುವ ಅವರು, “ಪ್ರಚೋದನೆಗಳ ನಡುವೆಯೂ ಯುವಕರು ಶಾಂತಿಯುತವಾಗಿ ನಡೆದುಕೊಂಡಿರುವುದು ನನ್ನ ಹೃದಯ ಸ್ಪರ್ಶಿಸಿದೆ. ವಿದ್ಯಾರ್ಥಿಗಳು ತಮ್ಮ ಅಹವಾಲುಗಳನ್ನು ಇಂದು ಅಥವಾ ನಾಳೆ ಸಂಸದರಿಗೆ ನೇರವಾಗಿ ಮಂಡಿಸಲು ಅವಕಾಶ ನೀಡುವ ಮೂಲಕ ಸರ್ಕಾರ ಹಾಗೂ ಪೊಲೀಸರು ಈ ಸಮಸ್ಯೆಯನ್ನು ಪರಿಹರಿಸಬೇಕು” ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಅಮೀರ್ ಖಾನ್, ಸೋನಂ ವಾಂಗ್ಚುಕ್ ಮತ್ತು ಟೂ ಈಡಿಯಟ್ಸ್!
“ಇಂದು ತೋರಿದ ಅದೇ ತಾಳ್ಮೆ ಮತ್ತು ಸಹನೆಯನ್ನು ಯುವ ಪ್ರತಿಭಟನಾಕಾರರು ನಾಳೆಯೂ ಮುಂದುವರಿಸುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದು ಪತ್ರದ ಕೊನೆಯಲ್ಲಿ ಸೋನಂ ವಾಂಗ್‌ಚುಕ್ ಬರೆದಿದ್ದಾರೆ.
ಸಫ್ದರ್‌ಜಂಗ್ ಆಸ್ಪತ್ರೆಯಿಂದ ಈ ಪತ್ರವನ್ನು ಬಿಡುಗಡೆ ಮಾಡಲಾಗಿದ್ದು, ವಾಂಗ್‌ಚುಕ್ ಅವರ ಉಪವಾಸವು ಸೋಮವಾರ 23ನೇ ದಿನಕ್ಕೆ ಕಾಲಿಟ್ಟಿದೆ.





