ಸೋನಂ ವಾಂಗ್ಚುಕ್ ಅವರ ಬದುಕಿನ ವಿವರಗಳಿಗೂ ‘ತ್ರಿ ಈಡಿಯಟ್ಸ್’ ಸಿನಿಮಾದ ಚಿತ್ರಕಥೆಗೂ ಯಾವ ಸಂಬಂಧವೂ ಇಲ್ಲ ಅಂತ ಅಮೀರ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ನೀಟ್ ವಿದ್ಯಾರ್ಥಿಗಳ ಪರವಾಗಿ, ಅವರಿಗಾದ ಅನ್ಯಾಯವನ್ನು ಪ್ರತಿಭಟಿಸಿ ಸೋನಂ ವಾಂಗ್ಚುಕ್ ಅಮರಣಾಂತ ಉಪವಾಸ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಅಮೀರ್ ಖಾನ್ ಅವರ ಈ ಹೇಳಿಕೆ ಹೊರಬಿದ್ದಿದೆ.
ಲಡಾಖ್ನ ಸೋನಂ ವಾಂಗ್ಚುಕ್ ಮೂಲತಃ ಎಂಜಿನಿಯರ್. ಸುಸ್ಥಿರ ಅಭಿವೃದ್ಧಿಯ ಹರಿಕಾರ. ಜೊತೆಗೆ ಸಾಮಾಜಿಕ ಕಾರ್ಯಕರ್ತ. ಸಂಶೋಧಕ ಮತ್ತು ಶಿಕ್ಷಣ ಸುಧಾರಕರಾಗಿ ಅವರ ಸಾಧನೆ ಅನನ್ಯವಾದದ್ದು.
‘ತ್ರಿ ಈಡಿಯಟ್ಸ್’ ಸಿನಿಮಾ ಬಿಡುಗಡೆ ಆದದ್ದು 2009ರಲ್ಲಿ. ಅದರಲ್ಲಿ ಹೀರೊ ಹೆಸರು ಫುನ್ ಸುಖ್ ವಾಂಗ್ಡು ಎಂದಿದೆ. ಇದರ ಚಿತ್ರಕಥೆ ವಾಂಗ್ಚುಕ್ ಅವರ ಜೀವನವನ್ನು ಹೋಲುತ್ತದೆ ಎನ್ನುವ ಸುದ್ದಿ ಆಗಿನಿಂದಲೂ ಹಬ್ಬಿತ್ತು. ಚಿತ್ರದ ಬಾಕ್ಸಾಫೀಸ್ ಯಶಸ್ಸಿಗೂ ಈ ಸುದ್ದಿ ನೆರವಾಯಿತು.
ಬಹುತೇಕ ಎಲ್ಲ ಮಾಧ್ಯಮಗಳಲ್ಲೂ “ತ್ರಿ ಈಡಿಯಟ್ಸ್ ನ ಫುನ್ ಸುಖ್ ವಾಂಗ್ಡು (ರಾಂಚೊ) ಪಾತ್ರ ಸೋನಂ ವಾಂಗ್ಚುಕ್ ಜೀವನದ ಕತೆಯನ್ನು ಹೋಲುತ್ತದೆ. ಅದರಿಂದಲೇ ಅಮೀರ್ ಖಾನ್ ಸ್ಫೂರ್ತಿ ಪಡೆದಿದ್ದಾರೆ” ಎಂಬ ವರದಿ/ ವಿಶ್ಲೇಷಣೆಗಳು ಪ್ರಕಟವಾದವು.
ಆಗ ಬಾಯಿ ಬಿಡದೆ ಮೌನವಾಗಿದ್ದ ಅಮೀರ್ ಖಾನ್ ಈಗ ಸ್ಪಷ್ಟನೆ ನೀಡಿದ್ದಾರೆ. ಹಾಗೆ ನೋಡಿದರೆ, ವಾಂಗ್ಚುಕ್ ಅವರು ಆಗಲೇ ‘ಈ ಚಿತ್ರಕಥೆಗೂ ನನ್ನ ಜೀವನದ ವಿವರಗಳಿಗೂ ಸಂಬಂಧ ಇಲ್ಲ’ ಎಂದು ಹೇಳಿದ್ದರು.
ಆದರೆ, ಅಮೀರ್ ಖಾನ್ ಬುದ್ಧಿವಂತ. ಸಿನಿಮಾ ಪ್ರಚಾರಕ್ಕೆ ಲಾಭ ಆಗುವುದಾದರೆ ಯಾಕೆ ಬಾಯಿ ಬಿಡಬೇಕು.. ಅಂತ ಮೌನವಾಗಿದ್ದರು.
ಈ 16 ವರ್ಷಗಳಲ್ಲಿ ಅಮೀರ್ ಖಾನ್ ಮತ್ತು ನಿರ್ದೇಶಕ ರಾಜ್ ಕುಮಾರ್ ಹಿರಾನಿ ಈ ಬಗ್ಗೆ ಯಾವ ಸ್ಪಷ್ಟನೆಯನ್ನೂ ನೀಡಿಲ್ಲ.
ಈಗ ವಾಂಗ್ಚುಕ್ ಹೋರಾಟ ಮೋದಿ ಸರ್ಕಾರದ ವಿರುದ್ಧ ದೊಡ್ಡ ಸುದ್ದಿ ಮಾಡಿದೆ. ಅಮೀರ್ ಖಾನ್ ಎಚ್ಚರವಾಗಿದ್ದಾರೆ. ಸ್ಪಷ್ಟೀಕರಣ ನೀಡಿದ್ದಾರೆ.
ಇದೇ ಅಮೀರ್ ಖಾನ್ ‘ಸತ್ಯಮೇವ ಜಯತೆ’ ಎನ್ನುವ ರಿಯಾಲಿಟಿ ಆಧಾರಿತ ಟಿವಿ ಟಾಕ್ ಷೋ ನಡೆಸಿಕೊಡುತ್ತಿದ್ದರು. ಅದು 2012ರಲ್ಲಿ ಶುರುವಾಗಿ ಎರಡು ವರ್ಷ ಸ್ಟಾರ್ ಟಿವಿ ಮತ್ತು ದೂರದರ್ಶನದಲ್ಲಿ ಸರಣಿಯಾಗಿ ಬಂತು. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ, ಶಿಕ್ಷಣ ಕ್ಷೇತ್ರದ ಅಪದ್ಧಗಳ ವಿರುದ್ಧ, ಪರಿಸರ ಮಾಲಿನ್ಯದ ವಿರುದ್ಧ, ಆಹಾರ ಕಲಬೆರಕೆಯ ವಿರುದ್ಧ- ಹೀಗೆ ಹಲವು ವಿಷಯಗಳ ಬಗ್ಗೆ ನಿಜಜೀವನದ ಘಟನೆಗಳನ್ನು ಆಧರಿಸಿದ ಟಾಕ್ ಷೋ ಅದಾಗಿತ್ತು.
ಕೋಟ್ಯಾಂತರ ಜನರು ಆ ಟಾಕ್ ಷೋ ವೀಕ್ಷಿಸಿ ಪ್ರಭಾವಿತರಾಗಿದ್ದರು. “ಸಮಾಜದ ಬಗ್ಗೆ ಅಮೀರ್ ಖಾನ್ಗೆ ನಿಜವಾದ ಕಾಳಜಿ ಇದೆ. ಈತ ಕೇವಲ ಸಿನಿಮಾ ವ್ಯಕ್ತಿ ಅಲ್ಲ, ನಿಜ ಜೀವನದಲ್ಲೂ ಸಮಾಜದ ಬಗ್ಗೆ ಕಾಳಜಿ ಹೊಂದಿದ್ದಾರೆ” ಎಂದು ಜನರು ಮೆಚ್ಚಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಈಗ ಸೋನಂ ವಾಂಗ್ಚುಕ್ ಹೋರಾಟಕ್ಕೆ ಅಮೀರ್ ಖಾನ್ ಬಹಿರಂಗ ಬೆಂಬಲ ಘೋಷಿಸಬಹುದು ಎಂಬ ನಿರೀಕ್ಷೆ ಲಕ್ಷಾಂತರ ದೇಶವಾಸಿಗಳಲ್ಲಿ ಇದ್ದದ್ದು ಸಹಜವೇ ಆಗಿತ್ತು.
ಆದರೆ ‘ತ್ರಿ ಈಡಿಯಟ್ಸ್’ ಸಿನಿಮಾದಲ್ಲಿ ಮತ್ತು ‘ಸತ್ಯಮೇವ ಜಯತೇ’ ಟೀವಿ ಟಾಕ್ ಷೋನಲ್ಲಿ ಶಿಕ್ಷಣ ಸುಧಾರಣೆಯ ಬಗ್ಗೆ ಮಾತನಾಡಿದ ಅಮೀರ್ ಖಾನ್, ಈಗ ಸೋನಂ ವಾಂಗ್ಚುಕ್ ಅವರ ಹೋರಾಟದ ಬಗ್ಗೆ ಒಂದಕ್ಷರದ ಬೆಂಬಲವನ್ನೂ ನೀಡಿಲ್ಲ. ಅದರ ಬದಲಾಗಿ ‘ನನ್ನ ಸಿನಿಮಾ ತ್ರಿ ಈಡಿಯಟ್ಸ್ಗೂ ಅವರಿಗೂ ಯಾವ ಸಂಬಂಧವೂ ಇಲ್ಲ’ ಎಂದಿದ್ದಾರೆ.
ಈ ಹೇಳಿಕೆ ಅಷ್ಟು ಸಹಜ ಮತ್ತು ಸರಳವಾಗಿ ಕಾಣಿಸುತ್ತಿಲ್ಲ. ಒಬ್ಬ ಸಿನಿಮಾ ವ್ಯಾಪಾರಿಯ ಎಚ್ಚರಿಕೆಯ ನಡೆಯಂತೆ ಕಾಣಿಸುತ್ತಿದೆ. ತ್ರಿ ಈಡಿಯಟ್ಸ್ ಸಿನಿಮಾ ಮತ್ತು ಸತ್ಯಮೇವ ಜಯತೆ ಷೋ (ಸ್ವತಃ ಅಮೀರ್ ಖಾನ್ ಇದರ ನಿರ್ಮಾಪಕರು) ಮಾಡಿದಾಗ ಕೇಂದ್ರದಲ್ಲಿ ಇದ್ದದ್ದು ಮನಮೋಹನ ಸಿಂಗ್ ಅವರ ಯುಪಿಎ ಸರ್ಕಾರ. ಆಗ ED, CBI, IT department ಗಳ ಬಗ್ಗೆ ಯಾವ ಭಯವೂ ಇರಲಿಲ್ಲ. ಈಗ ಇರುವುದು ಮೋದಿ ಸರಕಾರ. ED, CBI, IT ಇಲಾಖೆಗಳ ಬಗ್ಗೆ ವಿಪರೀತ ಭಯವಿದೆ! ಆ ಭಯದ ಕಾರಣದಿಂದಾಗಿಯೇ ಅಮೀರ್ ಖಾನ್ ತಮ್ಮ ಸಾಮಾಜಿಕ ಕಾಳಜಿಯ ಪ್ರದರ್ಶನಕ್ಕೆ ಸದ್ಯಕ್ಕೆ ಪೂರ್ಣ ವಿರಾಮ ಹಾಕಿದಂತೆ ಕಾಣಿಸುತ್ತಿದೆ.
ಅಮೀರ್ ಖಾನ್ ನೀಡಿರುವ ಸ್ಪಷ್ಟನೆ ಸತ್ಯವೇ ಇರಬಹುದು. ಆದರೆ, 16 ವರ್ಷಗಳ ಬಳಿಕ ಆ ಸ್ಪಷ್ಟನೆ ಬಂದಿರುವುದು ಅದರ ಪ್ರಾಮಾಣಿಕತೆಯ ಬಗ್ಗೆ ಅನುಮಾನಗಳನ್ನು ಹುಟ್ಟಿಸಿದೆ.
ಈ ಲೇಖನ ಓದಿದ್ದೀರಾ?: ಸೆನೆಗಲ್ ಪ್ರಕರಣ | ಯಾವ ಪರಿಸ್ಥಿತಿ ತಾಯಿಯೊಬ್ಬಳನ್ನು ʼಅಂತಹʼ ನಿರ್ಧಾರಕ್ಕೆ ತಳ್ಳಿರಬಹುದು?
ಸೋನಂ ವಾಂಗ್ಚುಕ್ ಅವರ ಈಗಿನ ಹೋರಾಟಕ್ಕೆ ಅಮೀರ್ ಖಾನ್ ಬಹಿರಂಗ ಬೆಂಬಲ ನೀಡಿದ್ದರೆ ಅದು ಸಹಜ ಅನ್ನಿಸುತ್ತಿತ್ತು. ಏಕೆಂದರೆ, ಅಮೀರ್ ಖಾನ್ ‘ಸತ್ಯಮೇವ ಜಯತೆ’ ಟಾಕ್ ಷೋ ಮಾಡಿದ ಪ್ರಜ್ಞಾವಂತ ನಟ, ನಿರ್ಮಾಪಕ ಆಗಿದ್ದವರು. ನಮ್ಮ ಶಿಕ್ಷಣ ಪದ್ಧತಿಯ ಅಪದ್ಧಗಳ ಕುರಿತು ಎಚ್ಚರಿಕೆ ಮೂಡಿಸಿದ ‘ತ್ರಿ ಈಡಿಯಟ್ಸ್’ ಸಿನಿಮಾದ ಅವಿಭಾಜ್ಯ ಅಂಗ ಆಗಿದ್ದವರು. ಆದರೆ, ಅಮೀರ್ ಖಾನ್ ಕೂಡಾ ಈಗ ಭಯದಲ್ಲಿ ಬದುಕುತ್ತಿದ್ದಾರೆ ಅಂತ ನನಗೆ ಮತ್ತು ನನ್ನಂಥವರಿಗೆ ಅನ್ನಿಸುತ್ತಿರುವುದು ಸಹಜವೇ ಆಗಿದೆ.
ನಮ್ಮ ಸಮಾಜ ಮತ್ತು ಮಾಧ್ಯಮಗಳೂ ಹೇಗಿದೆ ನೋಡಿ! ಇಲ್ಲಿ ಯಾವ ವಿಷಯದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ ನೋಡಿ!
“ಅಮೀರ್ ಖಾನ್ ಮೂರನೇ ಮದುವೆ ಆಗಿದ್ದಾರೆ. ಈ ಹಿಂದೆ ಮದುವೆಯಾಗಿ ತ್ಯಜಿಸಿದ ಮಹಿಳೆಯರು ಬ್ರಾಹ್ಮಣರು. ಈಗ ಮೂರನೇ ಮದುವೆ ಆದದ್ದೂ ಬ್ರಾಹ್ಮಣ ಮಹಿಳೆಯನ್ನೇ. ಈತ ಹಿಂದು ವಿರೋಧಿ. ಈತನಿಗೆ ಮದುವೆಯಾಗಿ ತ್ಯಜಿಸಲು ಮುಸ್ಲಿಂ ಮಹಿಳೆಯರು ಯಾರೂ ಸಿಗಲಿಲ್ಲವೆ?” ಎಂಬ ವಿಷಯದ ಬಗ್ಗೆ ದೊಡ್ಡ ಗಂಟಲಲ್ಲಿ ಚರ್ಚೆ ನಡೆಸುತ್ತಿದೆ!
ಇದು ಇಬ್ಬರು ಈಡಿಯಟ್ಗಳ ಕಾಲ. ಪ್ರಜ್ಞಾವಂತರ ಕಣ್ಣಲ್ಲಿ ಅಮೀರ್ ಖಾನ್ ಈಡಿಯಟ್ ತರಹ ಕಾಣಿಸುತ್ತಿದ್ದಾರೆ. ಇನ್ನೊಂದೆಡೆ ಆಳುವವರು ಮತ್ತು ಅವರ ಭಕ್ತರ ಕಣ್ಣಲ್ಲಿ ಸೋನಂ ವಾಂಗ್ಚುಕ್ ಈಡಿಯಟ್ ತರಹ ಕಾಣಿಸುತ್ತಿದ್ದಾರೆ. ಈ ಇಬ್ಬರು ಈಡಿಯಟ್ಗಳ ಪೈಕಿ ನೀವು ಯಾರ ಪರವಾಗಿ ಇದ್ದೀರಿ ಎನ್ನುವುದನ್ನು ಗಟ್ಟಿಯಾಗಿ ಹೇಳಬೇಕಾದ ಕಾಲ ಈಗ ಬಂದಿದೆ.




