ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಹೊಟ್ಟೆ ನೋವಿನಿಂದ ಬಳಲಿದ ಸೋನಿಯಾ ಗಾಂಧಿಯನ್ನು ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
78 ವರ್ಷದ ಸೋನಿಯಾ ಗಾಂಧಿ ಈ ತಿಂಗಳ ಆರಂಭದಲ್ಲಿ ಆರೋಗ್ಯ ಕ್ಷೀಣಿಸಿದ ಕಾರಣ ಆಸ್ಪತ್ರೆ ದಾಖಲಾಗಿದ್ದರು. ಬಳಿಕ ಸುಧಾರಿಸಿಕೊಂಡು ಬಿಡುಗಡೆಯಾಗಿದ್ದ ಸೋನಿಯಾ ಗಾಂಧಿ ಇದೀಗ ಒಂದೇ ವಾರದಲ್ಲಿ ಮತ್ತೆ ಆಸ್ಪತ್ರೆ ದಾಖಲಾಗಿದ್ದಾರೆ.
‘ಸೋನಿಯಾ ಗಾಂಧಿ ಅವರು ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಗಾದರು. ಅವರನ್ನು ಗ್ಯಾಸ್ಟೋಎಂಟರಾಲಜಿ ವಿಭಾಗದಲ್ಲಿ ದಾಖಲು ಮಾಡಿಕೊಳ್ಳಲಾಯಿತು. ಅವರ ಆರೋಗ್ಯ ಸ್ಥಿರವಾಗಿದೆ. ವೈದ್ಯರ ತಂಡವೊಂದು ಅವರ ಆರೋಗ್ಯದ ಮೇಲೆ ನಿಗಾ ವಹಿಸುತ್ತಿದೆ’ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಜೂನ್ 9ರಂದು ಸೋನಿಯಾ ಗಾಂಧಿ ಅವರು ಸರ್ ಗಂಗಾ ರಾಮ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ದಾಖಲಾಗಿದ್ದರು. ಜೂನ್ 7ರಂದು ಶಿಮ್ಲಾದಲ್ಲಿದ್ದಾಗ ಅವರಿಗೆ ಅಧಿಕ ರಕ್ತದೊತ್ತಡ ಕಾಣಿಸಿಕೊಂಡು ಅಲ್ಲಿನ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.