ಉತ್ತರ ಪ್ರದೇಶದ ಘಾಜಿಪುರದಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಸಮಾಜವಾದಿ ಪಾರ್ಟಿ (SP) ಕಾರ್ಯಕರ್ತನೊಬ್ಬ ಮೃತಪಟ್ಟ ಬೆನ್ನಲ್ಲೇ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಶವವನ್ನಿಟ್ಟು ರಸ್ತೆ ತಡೆ ನಡೆಸಿ, ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಮೃತ ಯುವಕನ ಕುಟುಂಬಸ್ಥರು ಹಾಗೂ ಮಹಿಳೆಯರು ಸೇರಿದಂತೆ 50ಕ್ಕೂ ಹೆಚ್ಚು ಜನರ ವಿರುದ್ಧ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.
ಜೂನ್ 3 ರಂದು ತಡರಾತ್ರಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ 28 ವರ್ಷದ ಕಮಲೇಶ್ ಚೌಧರಿ ಅಲಿಯಾಸ್ ಕಮಲೇಶ್ ಬಿಂದ್ ಎಂಬಾತ ಮೃತಪಟ್ಟಿದ್ದನು. ಆದರೆ, ಇದು ಪೊಲೀಸರು ಯೋಜಿತವಾಗಿ ನಡೆಸಿದ ‘ನಕಲಿ ಎನ್‌ಕೌಂಟರ್’ ಎಂದು ಆತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮತ್ತೊಂದೆಡೆ, ಆತ್ಮರಕ್ಷಣೆಗಾಗಿ ತಾವು ಪ್ರತಿದಾಳಿ ನಡೆಸಬೇಕಾಯಿತು ಎಂದು ಪೊಲೀಸರು ವಾದಿಸುತ್ತಿದ್ದಾರೆ.
ಕಮಲೇಶ್ ಬಿಂದ್, ಇತ್ತೀಚೆಗೆ ಘಾಜಿಪುರದ ಹೋಟೆಲ್ ಮಾಲೀಕರೊಬ್ಬರ ಮಗ ವಿನೀತ್ ರೈ ಎಂಬಾತನ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದನು. ಮೇ 28 ರಂದು ನಡೆದಿದ್ದ ವಿನೀತ್ ರೈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರ ಮೇಲೆ ಭಾರೀ ರಾಜಕೀಯ ಒತ್ತಡವಿತ್ತು.
ಈ ಘಟನೆಗಿಂತ ಕೆಲವು ದಿನಗಳ ಮುನ್ನ (ಮೇ 31), ಯುಪಿಯ ಗಾಜಿಯಾಬಾದ್‌ನಲ್ಲಿ ಅಪ್ರಾಪ್ತ ಹಿಂದೂ ಹುಡುಗನ ಕೊಲೆ ಆರೋಪ ಹೊತ್ತಿದ್ದ ಅಸಾದ್ ಎಂಬ ಮುಸ್ಲಿಂ ಯುವಕನನ್ನು ಕೂಡ ಪೊಲೀಸರು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದರು.
ಜೂನ್ 4 ರ ಗುರುವಾರ ಸಂಜೆ, ಮರಣೋತ್ತರ ಪರೀಕ್ಷೆಯ ಬಳಿಕ ಕಮಲೇಶ್ ಶವವನ್ನು ಆತನ ಗ್ರಾಮಕ್ಕೆ ಕೊಂಡೊಯ್ಯುವಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಎನ್‌ಕೌಂಟರ್‌ನಿಂದ ಆಕ್ರೋಶಗೊಂಡಿದ್ದ ನೂರಾರು ಪುರುಷರು ಮತ್ತು ಮಹಿಳೆಯರು ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ಸಂಘರ್ಷಕ್ಕಿಳಿದರು.
ಸಬ್ ಇನ್ಸ್ಪೆಕ್ಟರ್ ರಾಮ್ ಮಿಲನ್ ಯಾದವ್ ನೀಡಿರುವ ದೂರಿನ ಪ್ರಕಾರ, “ಕಮಲೇಶ್ ಕುಟುಂಬಸ್ಥರು ಶವವನ್ನು ಫುಲ್ಲನ್‌ಪುರ ರೈಲ್ವೆ ಕ್ರಾಸಿಂಗ್ ಬಳಿ ಇಟ್ಟು ರಸ್ತೆ ತಡೆ ನಡೆಸಿದರು. ರಸ್ತೆ ತೆರವುಗೊಳಿಸುವಂತೆ ಸೂಚಿಸಿದಾಗ, ಜನಸಮೂಹವು ಪೊಲೀಸರ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳಿಂದ ದಾಳಿ ನಡೆಸಿತು.” ಸುಮಾರು 40 ನಿಮಿಷಗಳ ಕಾಲ ನಡೆದ ಈ ಸಂಘರ್ಷದಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಮಲೇಶ್ ಸೋದರ ಸಂಜಯ್ ಬಿಂದ್, ಆತನ ಪತ್ನಿ ಹಾಗೂ ಗ್ರಾಮ ಮುಖ್ಯಸ್ಥೆ ಆಗಿರುವ ಅನಿತಾ ಬಿಂದ್ ಸೇರಿದಂತೆ ಆರು ಮಂದಿಯ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ 40 ರಿಂದ 50 ಅಪರಿಚಿತರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಕಾನೂನುಬಾಹಿರ ಕೂಟ, ಸರ್ಕಾರಿ ನೌಕರರ ಮೇಲೆ ಹಲ್ಲೆ ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿರುವ ಒಟ್ಟು 12ಕ್ಕೂ ಹೆಚ್ಚು ಕಠಿಣ ಸೆಕ್ಷನ್‌ಗಳಡಿ ಕೇಸ್ ಹಾಕಲಾಗಿದೆ.
ಎಫ್‌ಐಆರ್ ದಾಖಲಾಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕಮಲೇಶ್ ಸೋದರ ಸಂಜಯ್ ಬಿಂದ್, ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ:
ಇದನ್ನೂ ಓದಿ: ಉತ್ತರ ಪ್ರದೇಶ | ದಲಿತ ಯುವಕನ ಮೇಲೆ ಭೀಕರ ಹಲ್ಲೆ; ಕೋಳಿಯಂತೆ ಕೂರಲು ಒತ್ತಾಯಿಸಿ ದೌರ್ಜನ್ಯ
“ಇದು ಎನ್‌ಕೌಂಟರ್ ಅಲ್ಲ, ವ್ಯವಸ್ಥಿತ ಕೊಲೆ! ನನ್ನ ಸಹೋದರನನ್ನು ಒಂದು ದಿನ ಮುಂಚಿತವಾಗಿಯೇ ಅಕ್ರಮ ಕಸ್ಟಡಿಗೆ ಪಡೆದಿದ್ದ ಪೊಲೀಸರು, ನಂತರ ಆತನನ್ನು ಕೊಂದಿದ್ದಾರೆ. ವಿನೀತ್ ರೈ ಕೊಲೆಯಾದ ದಿನ ನನ್ನ ಸಹೋದರ ರಾಮಗಢದಲ್ಲಿದ್ದನು. ನಾವು ಹಿಂದುಳಿದ ‘ಬಿಂದ್’ (ಮೀನುಗಾರ ಸಮುದಾಯ) ಜಾತಿಗೆ ಸೇರಿದವರು ಮತ್ತು ವಿರೋಧ ಪಕ್ಷವಾದ ಸಮಾಜವಾದಿ ಪಕ್ಷದ ಕಾರ್ಯಕರ್ತರಾಗಿದ್ದೆವು ಎಂಬ ಒಂದೇ ಕಾರಣಕ್ಕೆ ನಮ್ಮನ್ನು ಹತ್ತಿಕ್ಕಲಾಗುತ್ತಿದೆ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು” ಎಂದು ಆಗ್ರಹಿಸಿದ್ದಾರೆ.
ಪೊಲೀಸರ ವರದಿಯ ಪ್ರಕಾರ, ಜೂನ್ 3 ರಂದು ಕಮಲೇಶ್ ಬೈಕ್‌ನಲ್ಲಿ ಶಸ್ತ್ರಸಜ್ಜಿತನಾಗಿ ಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಪೊಲೀಸರು ಆತನನ್ನು ತಡೆಯಲು ಯತ್ನಿಸಿದಾಗ, ಕಮಲೇಶ್ ನೇರವಾಗಿ ಸ್ವಾಟ್ (SWAT) ತಂಡದ ಪ್ರಭಾರಿ ರೋಹಿತ್ ಕುಮಾರ್ ಮಿಶ್ರಾ ಅವರ ಮೇಲೆ ಗುಂಡು ಹಾರಿಸಿದನು. ಮಿಶ್ರಾ ಅವರ ಎಡಗೈಗೆ ಬುಲೆಟ್ ತಗುಲಿತು.
ನಂತರ ಬೆನ್ನಟ್ಟಿದಾಗ ಕಮಲೇಶ್ ಬೈಕ್ ನಿಯಂತ್ರಣ ತಪ್ಪಿ ಬಿದ್ದಿತು. ಆದರೂ ಆತ ಶರಣಾಗದೆ ಮತ್ತೊಮ್ಮೆ ಪೊಲೀಸರ ಮೇಲೆ ಫೈರಿಂಗ್ ನಡೆಸಿದನು. ಇನ್ಸ್ಪೆಕ್ಟರ್ ಸಂತೋಷ್ ಪಾಠಕ್ ಅವರ ಬುಲೆಟ್‌ಪ್ರೂಫ್ ಜಾಕೆಟ್‌ಗೆ ಗುಂಡು ತಗುಲಿದ್ದರಿಂದ ಅವರು ಬದುಕುಳಿದರು. ಕೊನೆಗೆ ಆತ್ಮರಕ್ಷಣೆಗಾಗಿ ಪೊಲೀಸರು ಗ್ಲಾಕ್ ಪಿಸ್ತೂಲ್‌ನಿಂದ ನಡೆಸಿದ ‘ನಿಯಂತ್ರಿತ’ ದಾಳಿಯಲ್ಲಿ ಕಮಲೇಶ್ ಎದೆಗೆ ಗುಂಡು ತಗುಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳದಿಂದ ಎರಡು ಕಾನೂನುಬಾಹಿರ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾರೆ.





