ಹಾವೇರಿ ಜಿಲ್ಲಾದ್ಯಂತ ಮುಂಗಾರು ಪೂರ್ವ ಮಳೆ ಉತ್ತಮವಾಗಿದೆ. ರೈತರು ಹೊಲಗಳನ್ನು ಹದಮಾಡಿ ಬಿತ್ತನೆ ಬೀಜ ಸಂಗ್ರಹಣೆಗೆ ಮುಂದಾಗಿದ್ದು, ಬಿತ್ತನೆ ಬೀಜಕ್ಕೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ರೈತರು ತಮ್ಮ ಮನೆ ಬಿಟ್ಟು, ರೈತ ಸಂಪರ್ಕ ಕೇಂದ್ರಗಳ ಮುಂದೆ ಬಿತ್ತನೆ ಬೀಜಕ್ಕಾಗಿ ಹಗಲು, ರಾತ್ರಿ ಪಾಳೆಯಗಳಲ್ಲಿ ನಿಲ್ಲತೊಡಿಗಿದ್ದಾರೆ. ಆನ್‌ಲೈನ್ ಸಮಸ್ಯೆ, ಕೌಂಟರ್‌ಗಳ ಕಡಿಮೆ ಸಂಖ್ಯೆ…. ಸೇರಿದಂತೆ ಹಲವು ಪರಿಣಾಮಗಳಿಂದ ರೈತರಿಗೆ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ ಸಿಗದೆ ರೈತರು ಪರದಾಡುವಂತ ಪರಿಸ್ಥಿತಿ ಎದುರಾಗಿದೆ.
ಹಾವೇರಿ ಕೃಷಿ ಪ್ರದಾನ ಜಿಲ್ಲೆ. ಇಲ್ಲಿಯ ಸಾಕಷ್ಟು ರೈತರು ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲಾದ್ಯಂತ ಮುಂಗಾರು ಪೂರ್ವ ಉತ್ತಮ ಮಳೆ ಆಗಿದ್ದರಿಂದ ರೈತರ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಬಿತ್ತನೆ ಬೀಜಗಳಿಗೆ ಭಾರೀ ಬೇಡಿಕೆ ಉಂಟಾಗಿದೆಯಾದರೂ, ಸೋಯಾಬೀನ್ ಮತ್ತು ಶೇಂಗಾ ಬಿತ್ತನೆಬೀಜಗಳ ಕೊರತೆ ಹಾಗೂ ವಿಳಂಬ ವಿತರಣೆಯಿಂದ ರೈತರು ಪರದಾಡುತ್ತಿದ್ದು, ಕೃಷಿ ಸಂಪರ್ಕ ಕೇಂದ್ರಗಳ ಮುಂದೆ ರಾತ್ರಿಯಿಡೀ ಸರದಿ ಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿ ಎದುರಾಗಿದೆ. ಈ ಸರಿದಿ ಸಾಲಿನಲ್ಲಿ ರೈತ ಮಹಿಳೆಯರೂ ಕೂಡ ಕಾಣುವರು. ಕೃಷಿ ಕೆಂದ್ರಗಳ ಮುಂದೆ ರೈತರ ಸಂಖ್ಯೆ ಜಾಸ್ತಿ ಆಗಿರುವುದರಿಂದ ನೂಕುನುಗ್ಗಲು ಹೆಚ್ಚಾಗಿದೆ.
ಹಾವೇರಿ ಜಿಲ್ಲೆಯ ಮುಂಗಾರು ಹಂಗಾಮಿಗೆ ಒಟ್ಟು 3.14 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಮಳೆಯಾಶ್ರಿತ ಪ್ರದೇಶ 2.50 ಹೆಕ್ಕೇರ್ ಇದ್ದರೆ, ನೀರಾವರಿಯು 63,769 ಹೆಕ್ಟೇರ್ ಪ್ರದೇಶ ಇದೆ. ಬಹುತೇಕ ರೈತರು ಮಕ್ಕೆಜೋಳ, ಸೊಯಾಬೀನ್ ಹೆಚ್ಚು ಬಿತ್ತನೆಗೆ ಸಿದ್ದತೆ ನಡೆದಿದ್ದು, ಆ ಬೀಜಗಳಿಗೆ ಹೆಚ್ಚು ಬೇಡಿಕೆ ಹೊಂದಿದೆ. ಇವುಗಳ ಜತೆಗೆ ಶೇಂಗಾ ಬೀಜಕ್ಕೂ ಹೆಚ್ಚು ಬೇಡಿಕೆ ಇದೆ.
ಜಿಲ್ಲೆಯ ಹಾವೇರಿ, ಕರ್ಜಗಿ, ಗುತ್ತಲ, ನೆಗಳೂರು, ಹೊಸರಿತ್ತಿ, ಬಂಕಾಪುರ ಮತ್ತು ರಟ್ಟಿಹಳ್ಳಿ ಕೃಷಿ ಸಂಪರ್ಕ ಕೇಂದ್ರಗಳು ಸೇರಿದಂತೆ ಹಲವು ಕೃಷಿ ಕೇಂದ್ರಗಳ ಎದುರು ಕಾದು ರಾತ್ರಿಯಿಡೀ ನಿಂತರೂ ಬಿತ್ತನೆ ಬೀಜ ಸಿಗದೇ ರೈತರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ಇದರಿಂದ ರೈತರು ‘ಸರಿಯಾದ ಸಮಯಕ್ಕೆ ಬಿತ್ತನೆ ಬೀಜ ವಿತರಿಸುವಂತೆ’ ಕೃಷಿ ಸಂಪರ್ಕ ಕೇಂದ್ರಗಳ ಎದುರೇ ಪ್ರತಿಭಟನೆ ನಡೆಸಿದ್ದರು.
ಸೋಯಾಬೀನ್ ಮತ್ತು ಶೇಂಗಾ ಬೀಜಗಳಿಗೆ ಭಾರೀ ಬೇಡಿಕೆ: ಹಿಂದಿನ ವರ್ಷ ಮಕ್ಕೆಜೋಳಕ್ಕೆ ಸರಿಯಾದ ಬೆಲೆ ಸಿಗದೇ ಇರುವುದರಿಂದ ಈ ವರ್ಷ ಮಕ್ಕೆಜೋಳದ ಬದಲಿಗೆ ಸೋಯಾಬೀನ್ ಮತ್ತು ಶೇಂಗಾ ಬೀಜಗಳಿಗೆ ಭಾರೀ ಬೇಡಿಕೆಯಾಗಿದ್ದು, ನಾನಾ ಸಮಸ್ಯೆಗಳಿಂದ ಕೃಷಿ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳ ವಿತರಣೆಯಲ್ಲಿ ವಿಳಂಬವಾಗುತ್ತಿದೆ.
ಆನ್‌ಲೈನ್ ಪ್ರಕ್ರಿಯೆ ವಿಳಂಬ: ಕೃಷಿ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳನ್ನು ಪಡೆಯಲು ಪ್ರತಿಯೊಬ್ಬ ರೈತರು ತಂತ್ರಾಂಶದಲ್ಲಿ ಆರ್‌ಟಿಸಿ (RTC) ಪರಿಶೀಲನೆ ಕಡ್ಡಾಯವಾಗಿದೆ. ಈ ಪ್ರಕ್ರಿಯೇ ಆನ್ಕೈನ್ ಮೂಲಕ ಮಾಡುವುದರಿಂದ ಅತ್ಯಂತ ನಿಧಾನ ಗತಿಯಲ್ಲಿ ಸಾಗುತ್ತಿರುವುದರಿಂದ ವಿಳಂಬವಾಗುತ್ತಿದೆ.
ಹೆಚ್ಚವರಿ ಕೌಂಟರ್‌ಗಳ ಬೇಡಿಕೆ: ಜಿಲ್ಲೆಯ ಎಲ್ಲ ಕೃಷಿ ಸಂಪರ್ಕ ಕೇಂದ್ರಗಳಲ್ಲಿ ರೈತರು ಬಿತ್ತನೆ ಬೀಜ ಪಡೆಯಲು ಒಂದೊಂದು ಕೌಂಟರ್ ತೆರೆಯಲಾಗಿತ್ತು. ಇದರಿಂದ ರೈತರು ಕೃಷಿ ಸಂಪರ್ಕ ಕೇಂದ್ರಗಳ ಮುಂದೆ ರಾತ್ರಿಯಿಡೀ ಕಾಯುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಕೆಂದ್ರಗಳಲ್ಲಿ ಹೆಚ್ಚುವರಿ ಕೌಂಟರ್‌ಗಳನ್ನು ತರೆಯಬೇಕು ಎಂದು ರೈತರು ಆಗ್ರಹಿದ್ದರು.
ಬೇಡಿಕೆಗೆ ತಕ್ಕಂತೆ ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಬೇಕು ಮತ್ತು ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಾಗದಂತೆ ಸರಬರಾಜು ಮಾಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
ಹೆಚ್ಚುವರಿ ಕೇಂದ್ರಗಳು: ಕೃಷಿ ಸಂಪರ್ಕ ಕೇಂದ್ರಗಳಲ್ಲಿ ಬೀಜಕ್ಕೆ ರೈತರು ಸಾಕಷ್ಟು ದಟ್ಟಣೆ ನಿಯಂತ್ರಿಸಲು ಪ್ರಮುಖ ಕೇಂದ್ರಗಳ ಜತೆಗೆ ಹೆಚ್ಚುವರಿಯಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೂ ಬೀಜ ವಿತರಿಸಲಾಗುತ್ತಿದ್ದು, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಲಾಗಿದೆ.
ಪೊಲೀಸ್ ಭದ್ರತೆ: ಕೃಷಿ ರೈತ ಸಂಪರ್ಕ ಬಿತ್ತನೆ ಬೀಜ ವಿತರಣಾ ಕೇಂದ್ರಗಳಲ್ಲಿ ಬೀಜಕ್ಕಾಗಿ ರೈತರು ವಿಪರೀತ ನೂಕುನುಗ್ಗಲು ಮತ್ತು ಗದ್ದಲ ಉಂಟಾಗುತ್ತಿತ್ತು. ರಟ್ಟಿಹಳ್ಳಿ ಶಿಗ್ಗಾವಿ, ಇತರೆ ಕೃಷಿ ಸಂಪರ್ಕ ಕೆಂದ್ರಗಳಲ್ಲಿ ನೂಕುನುಗ್ಗಲು ಆಗಿರುವುದನ್ನು ಕಾಣುತ್ತೇವೆ. ಈ ನೂಕುಗುಗ್ಗಲು ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸ್ ಭದ್ರತೆಯೊಂದಿಗೆ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ.
ಕಾಳಸಂತೆಯಲ್ಲಿ ದುಬಾರಿ ಬೆಲೆ: “ಕೃಷಿ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳು ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಬೇಡಿಕೆಗೆ ತಕ್ಕಂತೆ ರೈತರಿಗೆ ಬೀಜಗಳು ಸರ್ಕಾರಿ ಕೇಂದ್ರಗಳಲ್ಲಿ ಸಿಗುತ್ತಿಲ್ಲ. ಜತೆಗೆ ವಿತರಣೆಯಲ್ಲಿ ನಾನಾ ಸಮಸ್ಯೆಗಳಿಂದ ಬೀಜ ರೈತರಿಗೆ ಸಿಗದಾಗುತ್ತವೆ. ಆಗ ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂಬ ಆರೋಪವಿದೆ. ಕೆಲವು ಕಡೆಗಳಲ್ಲಿ ಹೆಚ್ಚುವರಿ ಹಣ ಅಥವಾ ಲಂಚ ನೀಡಿದರೆ ಮಾತ್ರ ಬಿತ್ತನೆ ಬೀಜಗಳು ಸಿಗುತ್ತಿವೆ” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘದ ಒಕ್ಕೂಟಗಳು ಪ್ರತಿವರ್ಷ ಪರೀಕ್ಷಾರ್ಥವಾಗಿ ಉಚಿತವಾಗಿ ಸೋಯಾಬೀನ್ ಬಿತ್ತನೆ ಬೀಜ ವಿತರಣೆ ಮಾಡುತ್ತವೆ. ಈ ನಡುವೆಯು ಬಿತ್ತನೆ ಬೀಜಗಳು ಕೊರತೆಯಿಂದ ರೈತರು ಪರದಾಡುವಂತಾಗಿದೆ.
ಈ ಕುರಿತು ಈ ದಿನ.ಕಾಮ್ ಜತೆಗೆ ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಹನಮಂತಪ್ಪ ದೀವಿಗಿಹಳ್ಳಿ ಮಾತನಾಡಿ, “ಕೃಷಿ ಸಂಪರ್ಕ ಕೇಂದ್ರಗಳಲ್ಲಿರುವ ಬೀಜಗಳನ್ನೇ ಹೊರಗಡೆ ಕಾಳಸಂತೆಯಲ್ಲಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇವರ ವಿರುದ್ದ ಕ್ರಮ ಕೈಗೊಳ್ಳಬೇಕು. ಹಾಗೆ ಬೇಡಿಕೆಗೆ ತಕ್ಕಂತೆ ರೈತರಿಗೆ ಸರಿಯಾದ ಸಮಯಕ್ಕೆ ಬಿತ್ತನೆ ಬೀಜಗಳನ್ನು ವಿತರಿಸಬೇಕೆಂದು ಈಗಾಗಲೇ ರಟ್ಟಿಹಳ್ಳಿ ತಹಶೀಲ್ದಾರರಿಗೆ ಮನವಿ ಮಾಡಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ಮೇಘಾಲಯದ ಖಾಸಿ ರೈತರ ಮಣ್ಣು ಸಂರಕ್ಷಣೆ ಹೇಗಿದೆ ಗೊತ್ತೇ? ಇಲ್ಲಿದೆ ನೋಡಿ ಪ್ರೇರಣಾದಾಯಕ ಕಥೆ
ಜಿಲ್ಲಾ ಆಡಳಿತ ಮತ್ತು ಕೃಷಿ ಇಲಾಖೆಯು ತ್ವರಿತವಾಗಿ ಹೆಚ್ಚುವರಿ ಬೀಜ ಸರಬರಾಜು, ಕೌಂಟರ್‌ಗಳ ಸಂಖ್ಯೆ ಹೆಚ್ಚಳ, ಆನ್‌ಲೈನ್ ವ್ಯವಸ್ಥೆಯ ಸುಧಾರಣೆ ಮತ್ತು ಪಾರದರ್ಶಕ ವಿತರಣಾ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ರೈತರ ಶ್ರಮಕ್ಕೆ ನ್ಯಾಯ ಒದಗಿಸುವ ಮೂಲಕ ಈ ಬಾರಿಯ ಕೃಷಿ ಬೆಳೆಯನ್ನು ಯಶಸ್ವಿಯಾಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇಲ್ಲವಾದರೆ ಮಳೆ ಬಂದ ಕೂಡಲೇ ಬಿತ್ತನೆಯಾಗದಿದ್ದರೆ ರೈತರ ದುರವಸ್ಥೆಗೆ ಕಾರಣವಾಗುವ ಪರಿಸ್ಥಿತಿ ಉಂಟಾಗಬಹುದು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.




