ಹೃದಯಾಘಾತದಿಂದ ಬಳಲುತ್ತಿರುವ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಹೈಕೋರ್ಟಿನ ನ್ಯಾಯಾಧೀಶರ ಕಾರನ್ನು ಬಲವಂತವಾಗಿ ಕೊಂಡೊಯ್ದ ಆರೋಪದ ಮೇಲೆ ಗ್ವಾಲಿಯರ್ ಪೋಲೀಸರಿಂದ ಬಂಧಿಸಲ್ಪಟ್ಟ ಇಬ್ಬರು ವಿದ್ಯಾರ್ಥಿಗಳನ್ನು ಕ್ಷಮಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪತ್ರ ಬರೆದಿದ್ದಾರೆ.
ಶುಕ್ರವಾರ ಹೈಕೋರ್ಟ್ ನ್ಯಾಯಮೂರ್ತಿ ರವಿಕುಮಾರ್ ಮಳಿಮಠ್ ಅವರಿಗೆ ಈ ಕುರಿತು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪತ್ರವನ್ನು ಬರೆದಿದ್ದು, “ಪತ್ರಿಕೆಗಳಲ್ಲಿ ವರದಿಯಾದ ಘಟನೆಯನ್ನು ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. 68 ವರ್ಷ ವಯಸ್ಸಿನ ಉಪಕುಲಪತಿ ಪ್ರೊ. ರಂಜಿತ್ ಸಿಂಗ್ ಅವರು ದೆಹಲಿಯಿಂದ ಝಾನ್ಸಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾದರು. ಅವರ ಜೊತೆಗಿದ್ದ ಹಿಮಾಂಶು ಶ್ರೋತ್ರಿಯಾ (22) ಮತ್ತು ಸುಕೃತ್ ಶರ್ಮಾ (24) ಎಂಬ ವಿದ್ಯಾರ್ಥಿಗಳು ರಂಜಿತ್ ಅವರನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಗ್ವಾಲಿಯರ್ ನಿಲ್ದಾಣದಿಂದ ಕರೆದೊಯ್ಯಲು ರೈಲು ನಿಲ್ದಾಣದ ಹೊರಗೆ ನಿಂತಿದ್ದ ನ್ಯಾಯಾಧೀಶರ ಕಾರ್ ಕೀಯನ್ನು ಕಸಿದು ಕಾರಿನಲ್ಲಿ ತೆರಳಿದರು. ಕಾರಿನಲ್ಲಿ ಆಸ್ಪತ್ರೆಗೆ ತೆರಳಿದರೂ ರಂಜತ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಂಸತ್ ಭದ್ರತಾ ಲೋಪದ 6ನೇ ಆರೋಪಿ ಬಂಧನ
ಈ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಕಳ್ಳತನ ಮತ್ತು ದರೋಡೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಮಾನವೀಯತೆಯ ಹಿತದೃಷ್ಟಿಯಿಂದ ಮತ್ತು ಜೀವ ಉಳಿಸಲು ಕಾರು ಕಸಿದ ಕಾರಣ ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಕ್ಷಮಿಸಬೇಕು ಎಂದು” ಶಿವರಾಜ್ ಸಿಂಗ್ ಚೌಹಾಣ್ ಮನವಿ ಮಾಡಿದ್ದಾರೆ.
ದೆಹಲಿಯಿಂದ ಝಾನ್ಸಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಎಬಿವಿಪಿ ಕಾರ್ಯಕರ್ತರು ಪ್ರಯಾಣಿಕರಾದ ಉಪಕುಲಪತಿ ಪ್ರೊ. ರಂಜಿತ್ ಸಿಂಗ್ ಆರೋಗ್ಯ ಗಂಭೀರವಾಗಿದ್ದನ್ನು ಗಮನಿಸಿ ಗ್ವಾಲಿಯರ್ ವ್ಯಾಪ್ತಿಯ ಇತರ ಎಬಿವಿಪಿ ಕಾರ್ಯಕರ್ತರಿಗೆ ಮಾಹಿತಿಯನ್ನು ತಿಳಿಸಿದ್ದಾರೆ. ಕಾರ್ಯಕರ್ತರು ಅಸ್ವಸ್ಥ ವ್ಯಕ್ತಿಯನ್ನು ಗ್ವಾಲಿಯರ್ ನಿಲ್ದಾಣದಲ್ಲಿ ಇಳಿಸಿದ್ದಾರೆ. ಆದರೆ ಅಲ್ಲಿ ಆಂಬ್ಯುಲೆನ್ಸ್ ಬರಲಿಲ್ಲ ಎಂದು ನಿಲ್ದಾಣದ ಹೊರಗೆ ನಿಲ್ಲಿಸಿದ್ದ ಹೈಕೋರ್ಟ್ ನ್ಯಾಯಾಧೀಶರೊಬ್ಬರ ಕಾರ್ ಕೀಯನ್ನು ಬಲವಂತವಾಗಿ ಕಸಿದು ಅಸ್ವಸ್ಥಗೊಂಡ ಕುಲಪತಿಯವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು.
ಉತ್ತರ ಪ್ರದೇಶದ ಝಾನ್ಸಿಯಲ್ಲಿರುವ ಖಾಸಗಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ರಂಜಿತ್ ಸಿಂಗ್ ಅವರಿಗೆ ಹೃದಯಾಘಾತವಾಗಿತ್ತು. ರಂಜಿತ್ ಅವರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದರು.
ಮಧ್ಯ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದ ರವಿಕುಮಾರ್ ಮಳಿಮಠ್ ಅವರು ಮೂಲತಃ ಕರ್ನಾಟಕದವರಾಗಿದ್ದು, 2 ವರ್ಷಗಳ ಹಿಂದೆ ಮಧ್ಯ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ.