ಭಾನುವಾರ ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತದಂತಹ ಸ್ಥಿತಿ ನಿರ್ಮಾಣವಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದರೆ, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಬಲಂಗೀರ್ ಜಿಲ್ಲೆಯ ಸೈಂತಾಲಾ ಮೂಲದ ಲಲಿತ್ ಬಗರ್ತಿ ಎಂಬ ಭಕ್ತರೊಬ್ಬರು ರಥಯಾತ್ರೆಯಲ್ಲಿ ತಾಳಧ್ವಜ ರಥವನ್ನು ಎಳೆಯುವ ಸಂದರ್ಭದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅವರನ್ನು ಪುರಿ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಇನ್ನು ಗಾಯಗೊಂಡ ಮತ್ತೋರ್ವರ ಸ್ಥಿತಿ ಚಿಂತಾಜನಕವಾಗಿದೆ.
ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ 4 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಘೋಷಿಸಿದ್ದಾರೆ.
ಜಗನ್ನಾಥ ದೇವಾಲಯದ ಸಿಂಹದ್ವಾರದಿಂದ ಸುಮಾರು 200 ಮೀಟರ್ ದೂರದಲ್ಲಿರುವ ಶಾಲೆಯ ಬಳಿ ಈ ಘಟನೆ ನಡೆದಿದೆ. ಬಲಭದ್ರ ದೇವರ ತಾಳಧ್ವಜ ರಥವನ್ನು ಎಳೆಯಲು ನೂಕುನುಗ್ಗಲು ಉಂಟಾದ ಕಾರಣ ಹಲವಾರು ಮಂದಿಗೆ ಗಾಯವಾಗಿದೆ.
ಇದನ್ನು ಓದಿದ್ದೀರಾ? ಹತ್ರಾಸ್ ಕಾಲ್ತುಳಿತಕ್ಕೆ ಕಾರಣವೇನು? ಮಾಧ್ಯಮಗಳು ವರದಿ ಮಾಡಲು ತಡ ಮಾಡಿದ್ದೇಕೆ?
ಹಗ್ಗದ ಮೇಲೆ ಕೈ ಹಾಕಿ ರಥ ಎಳೆಯಲು ಭಕ್ತಾದಿಗಳ ನಡುವೆ ನಡೆದ ಜಟಾಪಟಿ ಈ ಪರಿಸ್ಥಿತಿಗೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತ ಭಕ್ತ ತಳ್ಳಾಟದಲ್ಲಿ ಬಿದ್ದಿದ್ದು ಇತರರು ತುಳಿದಿದ್ದಾರೆ ಎಂದೂ ಹೇಳಲಾಗಿದೆ. ಕನಿಷ್ಠ ಐವರು ಬಿದ್ದು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ಮೃತ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದು ಕಾಲ್ತುಳಿತದಿಂದ ಅಲ್ಲ ಎಂದು ಪೊಲೀಸರು ಹೇಳಿದ್ದಾರೆ.
#WATCH | Large number of devotees gather in Odisha’s Puri to take the darshan of Lord Jagannath as the two-day Lord Jagannath Rath Yatra to commence today. pic.twitter.com/C1qFOnLn6e
— ANI (@ANI) July 7, 2024
ಇನ್ನು ಸುಮಾರು 300ರಷ್ಟು ಭಕ್ತರು ನಿರ್ಜಲೀಕರಣ, ಉಸಿರುಗಟ್ಟುವಿಕೆ ಮತ್ತು ಗಾಯಗಳು ಸೇರಿದಂತೆ ಹಲವಾರು ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾನುವಾರ ಮಧ್ಯಾಹ್ನ 12ನೇ ಶತಮಾನದ ಪುರಿಯ ಜಗನ್ನಾಥ ದೇವಸ್ಥಾನದಿಂದ ಸುಮಾರು 2.5 ಕಿಮೀ ದೂರದಲ್ಲಿರುವ ಗುಂಡಿಚಾ ದೇವಸ್ಥಾನದ ಕಡೆಗೆ ಸಾವಿರಾರು ಜನರು ದೈತ್ಯ ರಥವನ್ನು ಎಳೆದು ಸಾಗಿದರು.