ಸ್ವಾತಂತ್ರ್ಯ ಎಂದರೆ ವ್ಯಕ್ತಿಯ ಆಯ್ಕೆಗಳಲ್ಲಿ ರಾಜ್ಯವು ಹಸ್ತಕ್ಷೇಪ ಮಾಡದಿರುವುದು ಎನ್ನುವ ಅರ್ಥವಿದೆ. ಆದರೆ, ಹಾಗೆ ಮಧ್ಯಪ್ರವೇಶಿಸದಿದ್ದರೆ, ಸಾಮಾಜಿಕ ಮತ್ತು ಆರ್ಥಿಕ ಬಂಡವಾಳ ಹೊಂದಿರುವ ಬಲಾಢ್ಯ ಸಮುದಾಯಗಳು ಅಂಚಿನಲ್ಲಿರುವವರ ಮೇಲೆ ಪ್ರಾಬಲ್ಯ ಸಾಧಿಸಲು ರಾಜ್ಯವು ಸ್ವಯಂಚಾಲಿತವಾಗಿ ಅವಕಾಶ ನೀಡಿದಂತಾಗುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅಭಿಪ್ರಾಯ ಪಟ್ಟಿದ್ದಾರೆ.
ಶನಿವಾರ ಖಾಸಗಿ ಹೋಟೆಲ್ನಲ್ಲಿ ಏಷಿಯಾ ಮತ್ತು ಪೆಸಿಫಿಕ್ ಕಾನೂನು ಸಂಘದ ವತಿಯಿಂದ ನಾಲ್ಕು ದಿನಗಳ ಕಾಲ ನಡೆಯುತ್ತಿರುವ 36ನೆ ಲಾ ಏಷಿಯಾ ಸಮಾವೇಶದಲ್ಲಿ ‘ಅಸ್ಮಿತೆ, ವ್ಯಕ್ತಿ ಮತ್ತು ಪ್ರಭುತ್ವ: ಸ್ವಾತಂತ್ರ್ಯದ ಹೊಸ ಮಾರ್ಗಗಳು’ ಕುರಿತು ವರ್ಚ್ಯುಯಲ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
‘ಸ್ವಾತಂತ್ರ್ಯ ಎಂದರೆ, ವೈಯಕ್ತಿಕ ಕ್ರಿಯೆಗಳು ಮತ್ತು ನಿರ್ಧಾರಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದೇ ಇರುವುದು ಎನ್ನುವ ಐತಿಹಾಸಿಕ ಅರ್ಥೈಸುವಿಕೆಗೆ ಇರುವ ಮಿತಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ’ ಎಂದು ಅವರು ಹೇಳಿದರು. ‘ಯಾವುದೇ ಜ್ಞಾನ ಎಂಬುದು ಸೈದ್ಧಾಂತಿಕವಾಗಿ ತಟಸ್ಥವಲ್ಲ ಮತ್ತು ಅಧಿಕಾರದ ಉದ್ದೇಶದ ಮೇಲೆ ಅನಿಶ್ಚಿತವಾಗಿ ಇರುವುದಿಲ್ಲ. ಸ್ವಾತಂತ್ರ್ಯ ನಮ್ಮ ಪರಿಕಲ್ಪನೆಯಲ್ಲಿನ ಪರಿವರ್ತನಶೀಲತೆಯನ್ನು ಗಮನಿಸಬಹುದು’ ಎಂದು ಅವರು ಹೇಳಿದರು.
‘ರಾಜ್ಯ ಮತ್ತು ಸ್ವಾತಂತ್ರ್ಯದ ನಡುವಿನ ಸಂಬಂಧವನ್ನು ವ್ಯಾಪಕವಾಗಿ ಅರ್ಥಮಾಡಿಕೊಂಡಿದ್ದರೂ, ಗುರುತು ಮತ್ತು ಸ್ವಾತಂತ್ರ್ಯದ ನಡುವಿನ ಸಂಬಂಧವನ್ನು ಸ್ಥಾಪಿಸುವ ಮತ್ತು ವಿವರಿಸುವ ಕಾರ್ಯವು ಅಪೂರ್ಣವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.