ಕಳವಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪತ್ನಿಯ ಲಕ್ಷಾಂತರ ರೂಪಾಯಿ ಮೌಲ್ಯದ ಕಾರು ಕೊನೆಗೂ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಭಾನುವಾರ ವಾರಣಾಸಿಯಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಉತ್ತರ ಪ್ರದೇಶದ ಫರೀದಾಬಾದ್ ಬಳಿಯ ಬದ್ಖಾಲ್ ನಿವಾಸಿಗಳಾದ ಶಾಹಿದ್ ಮತ್ತು ಶಿವಾಂಗ್ ತ್ರಿಪಾಠಿ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, “ಆರೋಪಿಗಳು ನಡ್ಡಾ ಅವರ ಕಾರನ್ನು ಕಳ್ಳತನ ಮಾಡಲೆಂದು ದೆಹಲಿಗೆ ಪ್ರಯಾಣಿಸಲು ಕ್ರೆಟಾ ಕಾರನ್ನು ಬಳಸಿದ್ದರು. ಕಾರನ್ನು ಮೊದಲು ಬದ್ಖಾಲ್‌ಗೆ ಕೊಂಡೊಯ್ಯಲಾಯಿತು. ಅಲ್ಲಿ ಅದರ ನಂಬರ್ ಪ್ಲೇಟ್ ಅನ್ನು ಬದಲಾಯಿಸಲಾಯಿಸಿದ್ದಾರೆ. ಆರೋಪಿಗಳು ಕಾರನ್ನು ನಾಗಾಲ್ಯಾಂಡ್‌ಗೆ ಕಳುಹಿಸಲು ಯೋಜಿಸಿದ್ದರು. ಹೀಗಾಗಿ ಅಲೀಘಢ್, ಲಖೀಂಪುರ ಖೇರಿ, ಬರೇಲಿ, ಸೀತಾಪುರ್, ಲಕ್ನೋ ಮಾರ್ಗವಾಗಿ ವಾರಣಾಸಿಗೆ ತಲುಪಿದ್ದರು. ಈ ವಿಚಾರವನ್ನು ಬಂಧಿತ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಗೋವಿಂದಪುರಿ ಪ್ರದೇಶದ ಅರೋರಾ ಪ್ರಾಪರ್ಟಿ ಎದುರು ಇರುವ ರವಿದಾಸ್ ಮಾರ್ಗದಿಂದ ಕಾರನ್ನು ಕಳವು ಮಾಡಲಾಗಿತ್ತು. ಚಾಲಕ ಜೋಗಿಂದರ್ ಸಿಂಗ್ ಕಾರನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದ. ಕಾರ್ನ ಮೇಲೆ ಎಂಪಿ ಎಂದು ಬರೆದಿರುವ ಸ್ಟಿಕ್ಕರ್ ಕೂಡ ಇತ್ತು. ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರಿಗೆ ಕಾರನ್ನು ಹುಡುಕಲು 15 ದಿನಗಳು ಬೇಕಾಯಿತು.
ಚಾಲಕ ಕಾರನ್ನು ಸರ್ವೀಸ್‌ಗಾಗಿ ತಂದು ತನ್ನ ಮನೆಯಲ್ಲಿ ರಾತ್ರಿ ಊಟಕ್ಕೆ ನಿಲ್ಲಿಸಿದ್ದಾಗ ಆರೋಪಿಗಳು ಕದ್ದೊಯ್ದಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪತ್ನಿ ಮಲ್ಲಿಕಾ ನಡ್ಡಾ ಹೆಸರಿನಲ್ಲಿ ಈ ಕಾರು ನೋಂದಣಿಯಾಗಿತ್ತು. ಜೆಪಿ ನಡ್ಡಾ ಅವರ ತವರು ರಾಜ್ಯ ಹಿಮಾಚಲ ಪ್ರದೇಶದವರಾದ್ದರಿಂದ ಅಲ್ಲಿಯೇ ನೋಂದಣಿ ಮಾಡಿಸಲಾಗಿತ್ತು. ಕಳವಾದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು, ಸಿಸಿಟಿವಿಯಲ್ಲಿ ಕಾರು ಗುರುಗ್ರಾಮ್ ಕಡೆಗೆ ಹೋಗುತ್ತಿರುವುದನ್ನು ಪೊಲೀಸರು ಗಮನಿಸಿದ್ದರು.
ಮಾರ್ಚ್ 18 ರ ತಡರಾತ್ರಿ ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿ ಮಲ್ಲಿಕಾ ನಡ್ಡಾ ಅವರ ಫಾರ್ಚುನರ್ ಕಾರನ್ನು ಕಳವು ಮಾಡಲಾಗಿತ್ತು. ಕಾರನ್ನು ಗೋವಿಂದಪುರಿಯಲ್ಲಿರುವ ಸರ್ವೀಸ್ ಸೆಂಟರ್‌ಗೆ ಕೊಂಡೊಯ್ದು, ಅದನ್ನು ಕಳವು ಮಾಡಲಾಗಿದೆ ಎಂದು ಹೇಳಲಾಗಿತ್ತು. ಈ ಸಂಬಂಧ ಕಾರು ಚಾಲಕ ಮಾರ್ಚ್ 19ರಂದು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರಿಗೆ ಹುಡುಕಾಟ ಆರಂಭಿಸಿದ್ದರು.
