ಆಪರೇಷನ್ ಸಿಂಧೂರದ ನಂತರ ಭಾರತ–ಪಾಕಿಸ್ತಾನ ಗಡಿಯಲ್ಲಿ ಉದ್ರಿಕ್ತತೆ ತೀವ್ರವಾಗುತ್ತಿದೆ. ಇತ್ತ ಟಿವಿ ಚಾನೆಲ್‌ಗಳು ಹಾಗೂ ಕೆಲ ಯೂಟ್ಯೂಬ್ ಮಾಧ್ಯಮಗಳು ಕಾರ್ಯಕ್ರಮಗಳಲ್ಲಿ ಸೈರನ್ ಶಬ್ದ ಬಳಕೆ ಮಾಡುತ್ತಿದ್ದು, ಸದ್ಯ ಇದಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಲು ಮುಂದಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ನಾಗರಿಕರ ಎಚ್ಚರಿಕೆಗಾಗಿ ಬಳಸಬೇಕಾದ ಈ ಸೈರನ್‌ಗಳನ್ನು ಇನ್ನು ಮುಂದೆ ಸಮುದಾಯ ಜಾಗೃತಿ ಅಭಿಯಾನ ಹೊರತುಪಡಿಸಿ ಇನ್ನಿತರ ಕಾರ್ಯಕ್ರಮಗಳಲ್ಲಿ ಬಳಕೆ ಮಾಡಕೂಡದು ಎಂದು ಕೇಂದ್ರ ಸರ್ಕಾರ ಎಲ್ಲಾ ಟಿವಿ, ಯೂಟ್ಯೂಬ್ ಚಾನೆಲ್‌ಗಳಿಗೆ ಇಂದು ತಾಕೀತು ಮಾಡಿದೆ.
ಕಾರ್ಯಕ್ರಮಗಳಲ್ಲಿ ಸೈರನ್‌ಗಳ ನಿಯಮಿತ ಬಳಕೆಯು ವಾಯುದಾಳಿ ಸೈರನ್‌ಗಳ ಬಗ್ಗೆ ನಾಗರಿಕರ ಸೂಕ್ಷ್ಮತೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ದಾಳಿ ನಡೆದಾಗ ಸೈರನ್ ಮೊಳಗಿಸಿದರೆ ಮಾಧ್ಯಮಗಳಲ್ಲಿ ಬರುವ ಶಬ್ದ ಎಂದು ನಾಗರಿಕರು ಅಂದುಕೊಳ್ಳುವ ಸಾಧ್ಯತೆ ಇದೆ ಎಂದು ಅಗ್ನಿ ಶಾಮಕ ಸೇವೆ, ನಾಗರಿಕ ರಕ್ಷಣೆ ಹಾಗೂ ಗೃಹ ರಕ್ಷಕ ದಳದ ಮಹಾನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, “ಭಾರತ ಹಾಗೂ ಪಾಕಿಸ್ತಾನ ನಡುವಣ ಸೇನಾ ಸಂಘರ್ಷದ ಇಂತಹ ಸಂದರ್ಭದಲ್ಲಿ ವಾಸ್ತವ ವರದಿಗಳನ್ನು ಮಾತ್ರ ಪ್ರಕಟಿಸುವಂತೆ ಹಾಗೂ ಜವಾಬ್ದಾರಿಯುವ ವರದಿಗಾರಿಕೆ ಮಾಡುವಂತೆ ಮಾಧ್ಯಮ ಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದರು.
ಇದನ್ನೂ ಓದಿ: ಯುದ್ಧದ ಭೀಕರತೆಯೂ… ಕುವೆಂಪು ನೀಡಿರುವ ಎಚ್ಚರಿಕೆಯೂ…
ಸಂಘರ್ಷಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಪ್ರಕಟಿಸುವುದಕ್ಕೂ ಮುನ್ನ ಮಾಹಿತಿಯನ್ನು ಒಮ್ಮೆ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದರು. ರಕ್ಷಣಾ ಕಾರ್ಯಾಚರಣೆ ಹಾಗೂ ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರ ಮಾಡುವುದನ್ನು ವಿದ್ಯುನ್ಮಾನ ಮಾಧ್ಯಮಗಳು ನಿಲ್ಲಿಸಬೇಕು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದ್ದರು.