ಶಿಕ್ಷಕ ತನ್ನ ಮೇಲೆ ಲೈಂಗಿಕದೌರ್ಜನ್ಯ ಎಸಗುತ್ತಾನೆಂಬ ಭಯದಲ್ಲಿ ವಿದ್ಯಾರ್ಥಿನಿಯೊಬ್ಬರು ಶಾಲೆಯ ಕಟ್ಟಡ ಮೇಲಿಂದ ಹಾರಿ, ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣದಲ್ಲಿ, ಆರೋಪಿ ಶಿಕ್ಷಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿನ ಪೋಕ್ಸೋ ನ್ಯಾಯಾಲಯವು ಈ ಮಹತ್ವದ ತೀರ್ಪು ನೀಡಿದೆ.
ಆಂಧ್ರಪ್ರದೇಶದ ಜೋಜಿನಗರದ ಭವಾನಿಪುರಂನ ಖಾಸಗಿ ಶಾಲೆಯಲ್ಲಿ 2018ರ ಜುಲೈ 23ರಂದು ಘಟನೆ ನಡೆದಿತ್ತು. ಶಾಲೆಯ ಶಿಕ್ಷಕ, ಆರೋಪಿ ಪುಲ್ಲೆಟಿಕುರ್ತಿ ಭುವನಚಂದ್ರ ಎಂಬಾತ 10ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಇದರಿಂದ, ಆಘಾತಕ್ಕೊಳಗಾಗಿದ್ದ ಬಾಲಕಿ, ಲೈಂಗಿಕ ದೌರ್ಜನ್ಯದ ಭಯದಲ್ಲಿ ಶಾಲೆಯ ಮೊದಲ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದರು.
ಘಟನೆ ಬಗ್ಗೆ ಸೂರ್ಯರಾವ್‌ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು 2018ರ ಜುಲೈ 25ರಂದು ಆರೋಪಿ ಶಿಕ್ಷಕನನ್ನು ಬಂಧಿಸಿದ್ದರು. ಆತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿರುವ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ವಿ.ಭವಾನಿ ಅವರು ಅರೋಪಿ ಶಿಕ್ಷಕನನ್ನು ಅಪರಾಧಿ ಎಂದು ಘೋಷಿಸಿದ್ದಾರೆ. ಆತನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ, 20,000 ರೂ. ದಂಡವನ್ನೂ ವಿಧಿಸಿದ್ದಾರೆ.
ಇನ್ನು, ಸಂತ್ರಸ್ತೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು 3 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದೂ ನಿರ್ದೇಶಿಸಿದ್ದಾರೆ.
ಗಮನಿಸಿ: ಅತ್ಯಾಚಾರವು ಒಂದು ಗಂಭೀರ ಸಾಮಾಜಿಕ ದುಷ್ಕೃತ್ಯ. ಈ ಕ್ರೂರ ಕೃತ್ಯವು ಸಮಾಜದ ನೈತಿಕತೆ ಮತ್ತು ಮಾನವೀಯತೆಯನ್ನು ಕುಂದಿಸುತ್ತದೆ. ಅತ್ಯಾಚಾರವನ್ನು ತಡೆಯುವುದು ಮತ್ತು ಅತ್ಯಾಚಾರ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಹಿಳೆಯರು ಭಯಮುಕ್ತವಾಗಿ ಬದುಕಲು ಹೆಣ್ಣುಮಕ್ಕಳ ಸುರಕ್ಷತೆ, ಗೌರವ ಮತ್ತು ನ್ಯಾಯವನ್ನು ಕಾಪಾಡಲು ನಾವು ಒಗ್ಗೂಡಿ ಹೋರಾಡಬೇಕು.ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಕುಟುಂಬಗಳಲ್ಲಿ, ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಜೊತೆ ಗೌರವ ಮತ್ತು ಸಂವೇದನೆಯಿಂದ ನಡೆದುಕೊಳ್ಳಬೇಕು. ಮಹಿಳೆಯರ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ.