ಕೋಲ್ಕತ್ತಾದಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ದುಷ್ಕೃತ್ಯವು ದೇಶದ ಆಕ್ರೋಶಕ್ಕೆ ಕಾರಣವಾಗಿದೆ. ಆಕ್ರೋಶ ಮಡುಗಟ್ಟಿರುವ ಸಮಯದಲ್ಲಿಯೇ, ಉತ್ತರ ಪ್ರದೇಶದಲ್ಲಿ ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾಗಿದ್ದ 14 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಆರೋಪಿ ಶಿಕ್ಷಕ ವಿಶಾಂಬರ್ ಪರಾರಿಯಾಗಿದ್ದಾನೆ.
ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ದುದ್ದಿ ಗ್ರಾಮದ 8ನೇ ತರಗತಿ ವಿದ್ಯಾರ್ಥಿನಿ ತನ್ನ ಶಿಕ್ಷಕನಿಂದಲೇ ಅತ್ಯಾಚಾರಕ್ಕೆ ಬಲಿಯಾಗಿದ್ದಾಳೆ. ಅತ್ಯಾಚಾರ ಕೃತ್ಯದಿಂದ ಮಾನಸಿಕವಾಗಿ ಆತಂಕಗೊಂಡಿದ್ದ ಬಾಲಕಿಯ ಆರೋಗ್ಯ ಹದಗೆಟ್ಟಿತ್ತು. ಆಕೆಯನ್ನು ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. 20 ದಿನಗಳ ಕಾಲ ಆಕೆಗೆ ಚಿಕಿತ್ಸೆ ನೀಡಿದರೂ, ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.
ಆರೋಪಿಯು ಶಾಲೆಯಲ್ಲಿ ಕ್ರೀಡಾ ಬೋಧಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ವರ್ಷ ಡಿಸೆಂಬರ್ 30 ರಂದು ಕ್ರೀಡಾಕೂಟದಲ್ಲಿ ಭಾಗವಹಿಸಲು ತಮ್ಮ ಮಗಳಿಗೆ ತರಬೇತಿ ನೀಡುತ್ತಿದ್ದನು. ಈ ನಡುವೆ, ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಸಾರ್ವಜನಿಕ ಅವಮಾನಕ್ಕೆ ಹೆದರಿ ಸಂತ್ರಸ್ತೆ ಘಟನೆಯ ಬಗ್ಗೆ ಯಾರಿಗೂ ಹೇಳಿಕೊಂಡಿಲ್ಲ. ಕ್ರಮೇಣ ಆಕೆಯ ಆರೋಗ್ಯ ಹದೆಟ್ಟಿದೆ. ಬಳಿಕ, ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ, ಆಕೆಯ ಆರೋಗ್ಯದಲ್ಲಿ ಯಾವುದೇ ಚೇರಿತರಿಕೆ ಕಂಡುಬಂದಿರಲಿಲ್ಲ. ಆಸ್ಪತ್ರೆಯಲ್ಲಿದ್ದಾಗ ತನ್ನ ಚಿಕ್ಕಮ್ಮನ ಬಳಿ ತನ್ನ ಮೇಲೆ ಶಿಕ್ಷಕ ಎಸಗಿದ್ದ ಅತ್ಯಾಚಾರದ ಬಗ್ಗೆ ಬಾಲಕಿ ಹೇಳಿಕೊಂಡಿದ್ದಾಳೆ ಎಂದು ವರಿದಿಯಾಗಿದೆ.
ಘಟನೆ ಬಗ್ಗೆ ತಿಳಿದ ಸಂತ್ರಸ್ತೆಯ ತಂದೆ ಜುಲೈ 10ರಂದು ಪೊಲೀಸ್ ದೂರು ದಾಖಲಿಸಿದ್ದಾರೆ. ಆರೋಪಿ ವಿಶಾಂಬರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪೊಲೀರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತನನ್ನು ಬಂಧಿಸಲು ಎರಡು ತಂಡಗಳನ್ನು ರಚಿಸಿದ್ದಾರೆ.
ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.