ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ್ದ ವಿದ್ಯಾರ್ಥಿಯೊಬ್ಬ ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರಿಂದ ಪ್ರಶಸ್ತಿ ಪದಕ ಪಡೆಯಲು ನಿರಾಕರಿಸಿರುವ ಘಟನೆ ತಮಿಳುನಾಡಿನ ಪುದುಕೊಟ್ಟೈನಲ್ಲಿ ನಡೆದಿದೆ.
ಪುದುಕೊಟ್ಟೈನಲ್ಲಿ 51ನೇ ರಾಜ್ಯ ಶೂಟಿಂಗ್ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ತಮಿಳುನಾಡು ಕೈಗಾರಿಕಾ ಸಚಿವ ಟಿಆರ್ಬಿ ರಾಜಾ ಅವರ ಪುತ್ರ ಸೂರ್ಯ ರಾಜ ಬಾಲು ಮೊದಲ ಸ್ಥಾನ ಪಡೆದು, ಗೆದ್ದಿದ್ದರು. ಅವರಿಗೆ ಗೌರವಿಸಲು ಮುಖ್ಯ ಅತಿಥಿಯಾಗಿ ಬಂದಿದ್ದ ಅಣ್ಣಾಮಲೈ ಪದಕವನ್ನು ಕುತ್ತಿಗೆಗೆ ಹಾಕಲು ಮುಂದಾಗಿದ್ದರು.
ಆದರೆ, ಅಣ್ಣಾಮಲೈ ಅವರಿಂದ ಪದಕವನ್ನು ಕುತ್ತಿಗೆಗೆ ಹಾಕಿಸಿಕೊಳ್ಳಲು ನಿರಾಕರಿಸಿದ ವಿದ್ಯಾರ್ಥಿ ಸೂರ್ಯ, ಪದಕವನ್ನು ಕೈಯಲ್ಲಿ ಸ್ವೀಕರಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂತಹದ್ದೇ ಮತ್ತೊಂದು ಘಟನೆ ಎರಡು ವಾರಗಳ ಹಿಂದೆ, ತಿರುನಲ್ವೇಲಿಯ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದಲ್ಲಿ ನಡೆದಿತ್ತು. ವಿಶ್ವವಿದ್ಯಾನಿಲಯದ 32ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ವಿದ್ಯಾರ್ಥಿನಿ ಜೀನ್ ಜೋಸೆಫ್ ಅವರು ರಾಜ್ಯಪಾಲ ಆರ್ಎನ್ ರವಿ ಅವರಿಂದ ಪದಕ ಪಡೆಯಲು ನಿರಾಕರಿಸಿದ್ದರು. ಅಲ್ಲದೆ, ಉಪಕುಲಪತಿಗಳಿಂದ ಪದವಿ ಪಡೆದಿದ್ದರು.
ಈ ಲೇಖನ ಓದಿದ್ದೀರಾ?: ರಷ್ಯಾದಿಂದ ಕಚ್ಚಾ ತೈಲ ಆಮದು: ಕನಿಷ್ಠ ಬೆಲೆಗೆ ಸಿಕ್ಕರೂ ಪೆಟ್ರೋಲ್-ಡೀಸೆಲ್ ಬೆಲೆ ಏಕೆ ಕಡಿಮೆಯಾಗಿಲ್ಲ?
ಡಿಎಂಕೆ ಪಕ್ಷದ ನಾಗರಕೋಯಿಲ್ ಉಪ ಕಾರ್ಯದರ್ಶಿ ಎಂ ರಾಜನ್ ಅವರ ಪತ್ನಿ ಜೀನ್ ಜೋಸೆಫ್ ಅವರು ತಮ್ಮ ಈ ನಿರ್ಧಾರವು, ‘ರಾಜ್ಯಪಾಲರ ತಮಿಳು ಮತ್ತು ತಮಿಳುನಾಡು ವಿರೋಧಿ ಧೋರಣೆಯ ವಿರುದ್ಧದ ಪ್ರತಿಭಟನೆಯ ಭಾಗವಾಗಿದೆ’ ಎಂದು ಹೇಳಿಕೊಂಡಿದ್ದರು. “ನಾನು ದ್ರಾವಿಡ ಪರಂಪರೆಯಲ್ಲಿ ನಂಬಿಕೆ ಇಟ್ಟಿದ್ದೇನೆ. ಉಪಕುಲಪತಿಗಳು ತಮಿಳಿಗೆ ಬಹಳಷ್ಟು ಕೆಲಸ ಮಾಡಿದ್ದಾರೆ. ಹೀಗಾಗಿ, ಅವರಿಂದ ಪದಕ ಸ್ವೀಕರಿಸಲು ಬಯಸಿದ್ದೆ” ಎಂದು ಅವರು ಹೇಳಿಕೊಂಡಿದ್ದಾರೆ.
ಈ ಘಟನೆಯನ್ನು ಅಣ್ಣಾಮಲೈ ಖಂಡಿಸಿದ್ದರು. “ಖ್ಯಾತಿ ಗಳಿಸಲು ಡಿಎಂಕೆ ಸದಸ್ಯರು ಪ್ರದರ್ಶಿಸಿದ ಶೋಚನೀಯ ನಾಟಕವಿದು. ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೀಳು ಮಟ್ಟದ ರಾಜಕೀಯ ತರಬಾರದು” ಎಂದಿದ್ದರು.