ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಬಿದ್ದು ಕಾನೂನು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಶನಿವಾರ ನಡೆದಿತ್ತು. ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿಯ ಸಾವಿಗೆ ಆತನ ಮಾಜಿ ಗೆಳತಿಯೇ ಕಾರಣವೆಂದು ಹೇಳಲಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮಾಜಿ ಗೆಳತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಗೆ ನ್ಯಾಯಾಲಯ ಜಾಮೀನು ನೀಡಿದೆ.
ಅಮಿಟಿ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ವಿದ್ಯಾರ್ಥಿಯಾಗಿದ್ದ 23 ವರ್ಷದ ತಪಸ್ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಆತನ ಸಾವಿನ ಪ್ರಕರಣದಲ್ಲಿ ಅದೇ ವಿಶ್ವವಿದ್ಯಾಲಯ ತಪಸ್‌ನ ಮಾಜಿ ಗೆಳತಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ.
“ವಿದ್ಯಾರ್ಥಿ ತನ್ನ ಮಾಜಿ ಗೆಳತಿಯೊಂದಿಗೆ ಪ್ರೀತಿಯನ್ನು ‘ಪ್ಯಾಚ್‌ಅಪ್’ ಮಾಡಿಕೊಳ್ಳಲು ಬಯಸಿದ್ದ. ಆಕೆಯ ಮನವೊಲಿಸಲು ಪ್ರಯತ್ನಿಸಿದ್ದ. ಆದರೆ, ಅದಕ್ಕೆ ಆಕೆ ನಿರಾಕರಸಿದ್ದಾಳೆ. ಕುಪಿತಗೊಂಡ ವಿದ್ಯಾರ್ಥಿ ಅಪಾರ್ಟ್‌ಮೆಂಟ್‌ನ 2ನೇ ಮಹಡಿಯಿಂದ ಬಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ಧಾನೆ” ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪೊಲೀಸರ ಹೇಳಿಕೆಯನ್ನು ಆಲಿಸಿದ ನ್ಯಾಯಾಲಯವು “ಇದು ಆತ್ಮಹತ್ಯೆಗೆ ಪ್ರಚೋದನೆಯಲ್ಲ” ಎಂದು ಹೇಳಿದ್ದು, ಯುವತಿಗೆ ಜಾಮೀನು ನೀಡಿದೆ.
ತಪಸ್ ಗಾಜಿಯಾಬಾದ್‌ನಲ್ಲಿ ವಾಸಿಸುತ್ತಿದ್ದು, ಶನಿವಾರ ನೋಯ್ಡಾದ ಸೆಕ್ಟರ್ 99ರಲ್ಲಿರುವ ಸುಪ್ರೀಂ ಟವರ್ಸ್ ಅಪಾರ್ಟ್‌ಮೆಂಟ್‌ನಲ್ಲಿದ್ದ ತನ್ನ ಸ್ನೇಹಿತನ ಮನೆಗೆ ಭೇಟಿ ನೀಡಿದ್ದರು. ಆತನ ಸ್ನೇಹಿತರು ತಪಸ್‌ನ ಮಾಜಿ ಗೆಳತಿಗೆ ಕರೆ ಮಾಡಿ ಅವನೊಂದಿಗೆ ‘ಪ್ಯಾಚ್‌ಅಪ್’ ಮಾಡಿಕೊಳ್ಳುವಂತೆ ಮನವೊಲಿಸಿದ್ದರು. ಆಕಯೂ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಆದರೆ, ತಮಗೆ ‘ಪ್ಯಾಚ್‌ಅಪ್’ ಮಾಡಿಕೊಳ್ಳಲು ಇಷ್ಟವಿಲ್ಲವೆಂದು ಹೇಳಿದ್ದರು. ಇದರಿಂದ ಅಸಮಾಧಾನಗೊಂಡ ತಪಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
