ವಿಜ್ಞಾನ ಕಲ್ಪನೆಗಳಿಗಿಂತಲೂ ಮಿಗಿಲಾದ ಅಪರೂಪದ ಯೋಜನೆಯೊಂದು ಈಗ ಜಾಗತಿಕ ಇಂಧನ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದೆ. ಕ್ಯಾಲಿಫೋರ್ನಿಯಾ ಮೂಲದ ರಿಫ್ಲೆಕ್ಟ್ ಆರ್ಬಿಟಲ್ (Reflect Orbital) ಎಂಬ ಅಮೆರಿಕನ್ ಸ್ಟಾರ್ಟ್ಅಪ್ ಸಂಸ್ಥೆಯು ರಾತ್ರಿಯ ವೇಳೆಯಲ್ಲೂ ಭೂಮಿಯ ಮೇಲಿನ ಸೌರ ಪ್ಯಾನಲ್ಗಳಿಗೆ ಸೂರ್ಯನ ಬೆಳಕನ್ನು ಮರುನಿರ್ದೇಶಿಸಿ ಮಾರಾಟ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಈ ಉದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಬೆಂಬಲ, ವಿರೋಧ ಎರಡೂ ವ್ಯಕ್ತವಾಗುತ್ತಿದೆ. ರಾತ್ರಿಯನ್ನೂ ಹಗಲಾಗಿಸುವುದು ಖಂಡಿತವಾಗಿಯೂ ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗಲಿದೆ. ಇದು ಮಾನವ ಮಾತ್ರವಲ್ಲದೆ, ಪ್ರಾಣಿ-ಪಕ್ಷಿ, ಸಸ್ಯ ಸಂಕುಲಕ್ಕೆ ಅಪಾಯಕಾರಿ ಎಂಬ ವಾದಗಳಿವೆ. ಇವೆಲ್ಲವುದರ ನಡುವೆ ಉಡಾವಣೆ ಮತ್ತು ಬಾಹ್ಯಾಕಾಶ ಮೂಲಸೌಕರ್ಯಕ್ಕಾಗಿ ಭಾರತೀಯ ಸಂಸ್ಥೆಗಳ, ಇಸ್ರೋದ ಸಹಭಾಗಿತ್ವದ ಸಾಧ್ಯತೆಗಳ ಕುರಿತು ಮಾತುಕತೆಗಳು ನಡೆಯುತ್ತಿವೆ.
ಏನಿದು ‘ಸೂರ್ಯನ ಬೆಳಕು ಮಾರುವ’ ಯೋಜನೆ?
ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಸೌರ ಪ್ಯಾನಲ್ಗಳಿಂದ (Solar Panels) ವಿದ್ಯುತ್ ಉತ್ಪಾದನೆ ಸಂಪೂರ್ಣವಾಗಿ ನಿಂತುಹೋಗುತ್ತದೆ. ಇದನ್ನು ತಡೆಯಲು ರಿಫ್ಲೆಕ್ಟ್ ಆರ್ಬಿಟಲ್ ಸಂಸ್ಥೆಯು ಭೂಮಿಯಿಂದ ಸುಮಾರು 600 ಕಿಲೋಮೀಟರ್ ಎತ್ತರದ ಕಕ್ಷೆಯಲ್ಲಿ ಬೃಹತ್ ಅಳತೆಯ ಕನ್ನಡಿಗಳನ್ನು ಹೊಂದಿರುವ ಉಪಗ್ರಹಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಈ ಉಪಗ್ರಹಗಳಲ್ಲಿರುವ ಮೈಲಾರ್ ತಂತ್ರಜ್ಞಾನದ ದೈತ್ಯ ಕನ್ನಡಿಗಳು ಬಾಹ್ಯಾಕಾಶದಲ್ಲಿರುವ ಸೂರ್ಯನ ಬೆಳಕನ್ನು ನೇರವಾಗಿ ಭೂಮಿಯ ಮೇಲಿರುವ ನಿರ್ದಿಷ್ಟ ಸೌರ ವಿದ್ಯುತ್ ಸ್ಥಾವರಗಳು ಅಥವಾ ಅಗತ್ಯವಿರುವ ನಗರಗಳ ಮೇಲೆ ಪ್ರತಿಫಲಿಸುವಂತೆ ಮಾಡುತ್ತವೆ. ಗ್ರಾಹಕರು ಮೊಬೈಲ್ ಆಪ್ ಅಥವಾ ವೆಬ್ಸೈಟ್ ಮೂಲಕ ತಮಗೆ ಬೇಕಾದ ಸಮಯದಲ್ಲಿ ಮತ್ತು ಸ್ಥಳಕ್ಕೆ ಸೂರ್ಯನ ಬೆಳಕನ್ನು ಆರ್ಡರ್ ಮಾಡಬಹುದು. ಪ್ರತಿ ಗಂಟೆಗೆ ಸುಮಾರು $5,000 (ಅಂದಾಜು ₹4.15 ಲಕ್ಷ) ವೆಚ್ಚದಲ್ಲಿ ಈ ಸೇವೆ ನೀಡಲು ಸಂಸ್ಥೆ ಯೋಜನೆ ರೂಪಿಸಿದೆ.
ಇದನ್ನೂ ಓದಿ: ತುರ್ತುಪರಿಸ್ಥಿತಿ | ಕತ್ತಲೆಯ ಕಾಲದಲ್ಲಿ ವ್ಯಂಗ್ಯದ ಬೆಳಕು
ಈ ಯೋಜನೆಯ ಭಾಗವಾಗಿ ನೂರಾರು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ತಲುಪಿಸಲು ಅಮೆರಿಕದ ಸಂಸ್ಥೆಯು ಭಾರತೀಯ ಬಾಹ್ಯಾಕಾಶ ನಿಯೋಗ (ISRO) ಮತ್ತು ಭಾರತದ ಪ್ರಮುಖ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳಾದ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಮುಂತಾದವುಗಳ ಜತೆ ಜಾಗತಿಕ ನಿಯೋಗ ಒಪ್ಪಂದಗಳನ್ನು ಪರಿಶೀಲಿಸುತ್ತಿದೆ. ಭಾರತವು ಗುಜರಾತ್ನ ಧೋಲೇರಾ ಮತ್ತು ರಾಜಸ್ಥಾನದ ಭಾಡ್ಲಾದಲ್ಲಿ ವಿಶ್ವದ ಅತಿ ದೊಡ್ಡ ಸೌರ ವಿದ್ಯುತ್ ಪಾರ್ಕ್ಗಳನ್ನು ಹೊಂದಿದೆ. ರಾತ್ರಿಯ ವೇಳೆಯಲ್ಲೂ ಅಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾದರೆ ಭಾರತದ ಇಂಧನ ಕೊರತೆಗೆ ದೊಡ್ಡ ಪರಿಹಾರ ಸಿಗಲಿದೆ.
ಯೋಜನೆಯ ಯಾವ ರೀತಿ ಕಾರ್ಯನಿರ್ವಹಿಸಲಿದೆ?
ಹಂತ 1 (ಮಾದರಿ ಉಪಗ್ರಹ): ಮೊದಲ ಪರೀಕ್ಷಾರ್ಥ ಉಪಗ್ರಹ ‘Earendil-1’ ಬಾಹ್ಯಾಕಾಶಕ್ಕೆ ಉಡಾವಣೆಯಾಗಲಿದ್ದು, ಇದು ಸುಮಾರು 60 ಅಡಿ ಅಗಲದ ಕನ್ನಡಿಯ ಮೂಲಕ ಪರೀಕ್ಷೆ ನಡೆಸಲಿದೆ.
ಹಂತ 2 (ದೊಡ್ಡ ಪ್ರಮಾಣದ ನೆಟ್ವರ್ಕ್): 2030ರ ವೇಳೆಗೆ ಸಾವಿರಾರು ಉಪಗ್ರಹಗಳನ್ನು ಕಕ್ಷೆಗೆ ತಳ್ಳಿ, ರಾತ್ರಿ ವೇಳೆಯಲ್ಲೂ ಹಗಲಿನ ಬೆಳಕಿನ ಶೇ. 10- ಶೇ. 20ರಷ್ಟು ಶಕ್ತಿಯನ್ನು ಪ್ಯಾನಲ್ಗಳಿಗೆ ತಲುಪಿಸುವ ಗುರಿ ಹೊಂದಿದೆ.
ವಿಪತ್ತು ನಿರ್ವಹಣೆ: ಕೇವಲ ವಿದ್ಯುತ್ ಮಾತ್ರವಲ್ಲದೆ, ರಾತ್ರಿ ವೇಳೆ ಭೀಕರ ಭೂಕಂಪ ಅಥವಾ ಪ್ರವಾಹ ಉಂಟಾದಾಗ ಪರಿಹಾರ ಕಾರ್ಯಾಚರಣೆಗೆ ಬೆಳಗಿನ ವಾತಾವರಣ ಸೃಷ್ಟಿಸಲು ಈ ಬೆಳಕನ್ನು ಬಳಸಬಹುದು.
ಆದರೆ ಈ ಯೋಜನೆಗೆ ವಿರೋಧವೇಕೆ?
ರಿಫ್ಲೆಕ್ಟ್ ಆರ್ಬಿಟಲ್ನಂತಹ ಬಾಹ್ಯಾಕಾಶ ಕನ್ನಡಿ ಯೋಜನೆಗಳ ವಿರುದ್ಧ ಜಾಗತಿಕ ಮಟ್ಟದಲ್ಲಿ ಖಗೋಳ ವಿಜ್ಞಾನಿಗಳು, ಪರಿಸರವಾದಿಗಳು ಮತ್ತು ನಕ್ಷತ್ರ ವೀಕ್ಷಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಸ್ಟಾರ್ಲಿಂಕ್ (Starlink) ನಂತಹ ಉಪಗ್ರಹಗಳ ದಟ್ಟಣೆಯಿಂದ ರಾತ್ರಿ ಆಕಾಶದಲ್ಲಿ ನಕ್ಷತ್ರಗಳನ್ನು ವೀಕ್ಷಿಸುವುದು ಕಷ್ಟವಾಗುತ್ತಿದೆ. ಇದರೊಂದಿಗೆ ರಾತ್ರಿಯಲ್ಲೂ ಕನ್ನಡಿಗಳ ಮೂಲಕ ಕೃತಕ ಸೂರ್ಯನ ಬೆಳಕನ್ನು ಭೂಮಿಗೆ ಹಾಯಿಸಿದರೆ, ನೈಸರ್ಗಿಕ ಕತ್ತಲೆ ಸಂಪೂರ್ಣವಾಗಿ ನಾಶವಾಗಿ ಖಗೋಳ ಅಧ್ಯಯನಕ್ಕೆ ದೊಡ್ಡ ಅಡ್ಡಿಯಾಗುತ್ತದೆ ಎಂದು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದವರು ಹೇಳಿದ್ದಾರೆ.
ಇದನ್ನೂ ಓದಿ: ‘ಗೋಧ್ರಾ’ದಿಂದ ‘SIR’ ವರೆಗೆ: ಮೋದಿ ಆಡಳಿತದ 25 ವರ್ಷಗಳಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ಕಮರಿದ ಕನಸುಗಳು!
ಅಷ್ಟು ಮಾತ್ರವಲ್ಲದೆ ವಿಶ್ವಾದ್ಯಂತ ಇರುವ ಪ್ರಮುಖ ಖಗೋಳ ವೀಕ್ಷಣಾಲಯಗಳ ಟೆಲಿಸ್ಕೋಪ್ಗಳು ಮಸುಕಾದ ದೂರದ ನಕ್ಷತ್ರಗಳು ಮತ್ತು ಗೆಲಕ್ಸಿಗಳನ್ನು ಸೆರೆಹಿಡಿಯುತ್ತವೆ. ಬಾಹ್ಯಾಕಾಶದಲ್ಲಿ ಪ್ರತಿಫಲಿಸುವ ಈ ಕೃತಕ ಬೆಳಕು ಟೆಲಿಸ್ಕೋಪ್ಗಳ ಸಂವೇದನಾಶೀಲ ಲೆನ್ಸ್ಗಳನ್ನು ಕುರುಡಾಗಿಸಬಹುದು ಅಥವಾ ದತ್ತಾಂಶದಲ್ಲಿ ವ್ಯತ್ಯಯ ಉಂಟುಮಾಡಬಹುದು.
ಇನ್ನು ರಾತ್ರಿಯ ಕತ್ತಲೆಯು ಮನುಷ್ಯರು ಸೇರಿದಂತೆ ಪ್ರಾಣಿಗಳು, ಪಕ್ಷಿಗಳು ಮತ್ತು ಕೀಟಗಳ ನೈಸರ್ಗಿಕ ಜೀವನ ಚಕ್ರಕ್ಕೆ ಅತ್ಯಗತ್ಯ. ರಾತ್ರಿ ವೇಳೆಯೂ ಬೆಳಕು ಹೋದರೆ ಜೀವಿಗಳ ನಿದ್ರೆಯ ಮಾದರಿ, ವಲಸೆ ಹೋಗುವ ಹಕ್ಕಿಗಳ ದಿಕ್ಕು ತಪ್ಪುವಿಕೆ ಮತ್ತು ಹೂಬಿಡುವ ಸಸ್ಯಗಳ ಜೈವಿಕ ಪ್ರಕ್ರಿಯೆಗಳಲ್ಲಿ ಗಂಭೀರ ವ್ಯತ್ಯಯ ಉಂಟಾಗುವ ಆತಂಕವಿದೆ.
ನಗರಗಳಲ್ಲೇ ಅತಿಯಾದ ಬೆಳಕಿನಿಂದ ಜನರಿಗೆ ನಿದ್ರಾಹೀನತೆ ಸೇರಿದಂತೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಇನ್ನು ಬಾಹ್ಯಾಕಾಶದಿಂದ ದೊಡ್ಡ ಪ್ರಮಾಣದಲ್ಲಿ ಬೆಳಕು ಹರಿದುಬಂದರೆ ಅದು ಜಾಗತಿಕ ಮಟ್ಟದಲ್ಲಿ ಹೊಸ ರೀತಿಯ ಪರಿಸರ ಮಾಲಿನ್ಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.




