ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ವರ್ಗೀಕರಣ ಮತ್ತು ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳನ್ನು (ಒಳಮೀಸಲಾತಿ) ನೀಡಲು ಅನುಮತಿಸಿ ಸುಪ್ರೀಂ ಕೋರ್ಟ್ ಗುರುವಾರ ಆದೇಶ ಹೊರಡಿಸಿದೆ. ಮೀಸಲಾತಿ ಪಡೆಯುತ್ತಿರುವ ಯಾವುದೇ ವರ್ಗದಲ್ಲಿರುವ ಹೆಚ್ಚು ಹಿಂದುಳಿದ ಅಥವಾ ಅಂಚಿಗೆ ತಳ್ಳಲ್ಪಟ್ಟಿರುವ ಜಾತಿಗಳಿಗೆ ಆಯಾ ರಾಜ್ಯಗಳು ಒಳ ಮೀಸಲಾತಿ ನೀಡಬಹುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ 7 ನ್ಯಾಯಾಧೀಶರ ಸಂವಿಧಾನ ಪೀಠವು ಮೀಸಲಾತಿ ಸಂಬಂಧ 2004ರಲ್ಲಿ ಸಾಂವಿಧಾನಿಕ ಪೀಠವು ಹೊರಡಿಸಿದ್ದ ತೀರ್ಪನ್ನು ರದ್ದುಗೊಳಿಸಿದೆ. 2004ರ ತೀರ್ಪಿನಲ್ಲಿ ಎಸ್‌ಸಿ ಸಮುದಾಯದೊಳಗೆ ಕೆಲವು ಜಾತಿಗಳಿಗೆ ಆದ್ಯತೆ ನೀಡಲು ಅನುಮತಿ ನಿರಾಕರಿಸಿತ್ತು. ಇದೀಗ, ಗುರುವಾರ ಪ್ರಕಟವಾದ ತೀರ್ಪು, ಒಳಮೀಸಲಾತಿಯನ್ನು ಅನುಮತಿಸುತ್ತಿದೆ.
ಆದಾಗ್ಯೂ, ಪೀಠದಲ್ಲಿದ್ದ ಏಳು ಮಂದಿ ನ್ಯಾಯಾಧೀಶರ (ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ) ಪೈಕಿ ಬೇಲಾ ಎಂ ತ್ರಿವೇದಿ ಅವರು ಒಳ ಮೀಸಲಾತಿಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು, ಒಳ ಮೀಸಲಾತಿಯನ್ನು ಕಲ್ಪಿಸುವ ರಾಜ್ಯಗಳ ಅಧಿಕಾರವನ್ನು ಎತ್ತಿಹಿಡಿದಿದೆ. ಆದರೆ, ಒಳ ಮೀಸಲಾತಿ ನೀಡುವಾಗ ರಾಜ್ಯ ಸರ್ಕಾರಗವು ಯಾವ ಸಮುದಾಯಗಳಿಗೆ ಒಳ ಮೀಸಲಾತಿ ಅಗತ್ಯವಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಬೇಕು. ಅಧ್ಯಯನವನ್ನು ಆಧರಿಸಿ ಕೋಟಾಗಳನ್ನು ಒದಗಿಸಬೇಕು. ಮಾತ್ರವಲ್ಲದೆ, ಒಳಮೀಸಲಾತಿಯು ಆಯಾ ವರ್ಗಗಳ ಶೇ.100ಅನ್ನು ಒಳಗೊಳ್ಳಬಾರದು ಎಂದು ಹೇಳಿದೆ.
ಪರಿಶಿಷ್ಟ ಜಾತಿಗಳು ಏಕರೂಪದ ವರ್ಗವಲ್ಲ
ಸಿಜೆಐ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಮಿಶ್ರಾ ಅವರ ಜಂಟಿ ತೀರ್ಪಿನಲ್ಲಿ, ”ಪರಿಶಿಷ್ಟ ಜಾತಿಗಳು ಏಕರೂಪದ ವರ್ಗವಲ್ಲ. ಇದಕ್ಕೆ ಐತಿಹಾಸಿಕ ಪುರಾವೆಗಳಿವೆ. ಉಪ-ವರ್ಗೀಕರಣವು ಸಂವಿಧಾನದ 14ನೇ ವಿಧಿಯ ಅಡಿಯಲ್ಲಿ ಪ್ರತಿಪಾದಿಸಲಾದ ಸಮಾನತೆಯ ತತ್ವವನ್ನು ಉಲ್ಲಂಘಿಸುವುದಿಲ್ಲ. ಅಲ್ಲದೆ, ಉಪ-ವರ್ಗೀಕರಣವು ಸಂವಿಧಾನದ 341 (2)ನೇ ವಿಧಿಯ ಉಲ್ಲಂಘನೆಯೂ ಆಗುವುದಿಲ್ಲ. ಜೊತೆಗೆ, ಸಂವಿಧಾನದ 15 ಮತ್ತು 16ನೇ ವಿಧಿಯ ಅಡಿಯಲ್ಲಿ ರಾಜ್ಯಗಳು ಜಾತಿ ಉಪವರ್ಗೀಕರಣ ಮಾಡುವ ಸ್ವಾತಂತ್ರ್ಯವನ್ನು ಹೊಂದಿವೆ. ಅದನ್ನು ತಡೆಯಲಾಗದು” ಎಂದು ಹೇಳಿದ್ದಾರೆ.
”2004ರ ಇ.ವಿ ಚಿನ್ನಯ್ಯ v/s ಆಂಧ್ರಪ್ರದೇಶ ಸರ್ಕಾರ ಪ್ರಕರಣದಲ್ಲಿ ಸಂವಿಧಾನಿಕ ಪೀಠ ನೀಡಿದ್ದ ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣವನ್ನು ಅನುಮತಿಸಲಾಗುವುದಿಲ್ಲ ಎಂಬ ತೀರ್ಪನ್ನು ರದ್ದುಗೊಳಿಸಲಾಗಿದೆ. ಉಪ-ವರ್ಗೀಕರಣ ಸೇರಿದಂತೆ ಯಾವುದೇ ರೀತಿಯ ಸಮರ್ಥನೀಯ ಕ್ರಮದ ಉದ್ದೇಶವು ಹಿಂದುಳಿದ ವರ್ಗಗಳಿಗೆ ಸಮಾನವಾದ ಅವಕಾಶವನ್ನು ಒದಗಿಸುವುದಾಗಿದೆ. ಕೆಲವು ಜಾತಿಗಳಿಗೆ ಪ್ರಾತಿನಿಧ್ಯವು ಅಸಮರ್ಪಕವಾಗಿದೆ ಎಂಬುದರ ಆಧಾರದ ಮೇಲೆ ರಾಜ್ಯವು ಉಪ-ವರ್ಗೀಕರಣ ಮಾಡಬಹುದು” ಎಂದು ಚಂದ್ರಚೂಡ್ ಹೇಳಿದ್ದಾರೆ.
”ಉಪ ವರ್ಗೀಕರಣವು ಆ ಸಮುದಾಯಗಳ ಪ್ರಾತಿನಿಧ್ಯದ ಮೇಲೆ ಪ್ರಮಾಣೀಕರಿಸುವ ದತ್ತಾಂಶಗಳ ಆಧಾರದ ಮೇಲೆ ನಡೆಯಬೇಕು. ರಾಜ್ಯವು ತನ್ನ ಇಚ್ಛೆ ಅಥವಾ ರಾಜಕೀಯ ಉದ್ದೇಶಕ್ಕಾಗಿ ಉಪ ವರ್ಗೀಕರಣ ಮಾಡಲು ಸಾಧ್ಯವಿಲ್ಲ. ರಾಜ್ಯಗಳ ನಿರ್ಧಾರವು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲು ಅವಕಾಶವಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.
ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರು ತಮ್ಮ ತೀರ್ಪಿನಲ್ಲಿ, ಹೆಚ್ಚು ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡುವುದು ರಾಜ್ಯದ ಕರ್ತವ್ಯ ಎಂದು ಹೇಳಿದ್ದಾರೆ. ”ಎಸ್‌ಸಿ/ಎಸ್‌ಟಿ ವರ್ಗದ ಕೆಲವೇ ಜನರು ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಎಸ್‌ಸಿ/ಎಸ್‌ಟಿ ವರ್ಗದೊಳಗೂ ಶತಮಾನಗಳಿಂದ ಹೆಚ್ಚು ದಬ್ಬಾಳಿಕೆಯನ್ನು ಎದುರಿಸುತ್ತಿರುವ ವರ್ಗಗಳಿವೆ. ಆ ವರ್ಗಗಳಿಗೆ ಪ್ರಾತಿನಿಧ್ಯ ಮತ್ತು ಅವಕಾಶಗಳು ಹೆಚ್ಚಾಗಿ ದೊರೆಯುತ್ತಿಲ್ಲ” ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ನ್ಯಾಯಮೂರ್ತಿ ಗವಾಯಿ ಅವರು ಎಸ್‌ಸಿ/ಎಸ್‌ಟಿ ವರ್ಗದಲ್ಲಿ ಒಳಮೀಸಲಾತಿಗೆ Creamy Layer (ಕೆನೆಪದರ) ಮಾನದಂಡಗಳನ್ನು ಅನ್ವಯಿಸಬೇಕು. ಈ ಮಾನದಂಡಗಳು OBCಗಳಿಗೆ ಅನ್ವಯವಾಗುವ ಮಾನದಂಡಗಳಿಗಿಂತ ಭಿನ್ನವಾಗಿರಬಹುದು. ಇಂತಹ ಮಾನದಂಡಗಳನ್ನು ಅನ್ವಯಿಸುವುದರಿಂದ ಮೀಸಲಾತಿಯ ಉದ್ದೇಶ ಸಾರ್ಥಕವಾಗುತ್ತದೆ. ನಿಜವಾದ ಸಮಾನತೆ ಪಡೆಯಲು ಇದೊಂದೇ ದಾರಿ ಎಂದು ಹೇಳಿದ್ದಾರೆ. ಅಲ್ಲದೆ, ಒಳ ಮೀಸಲಾತಿಯು ಆಯಾ ವರ್ಗಗಳ 100% ಮೀಸಲಾತಿಯನ್ನು ಒಳಗೊಳ್ಳಬಾರದು ಎಂದೂ ಹೇಳಿದ್ದಾರೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಂಕಜ್ ಮಿಥಾಲ್ ಅವರು ಕೂಡ ಒಬಿಸಿಗಳಂತೆ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೂ Creamy Layer ಅನ್ವಯವಾಗಬೇಕು ಎಂಬುದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಆದರೆ, ವಿಭಿನ್ನ ವ್ಯಾಖ್ಯಾನ ನೀಡಿದ್ದಾರೆ. ಹೀಗಾಗಿ, Creamy Layer ವಿಚಾರದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಇಬ್ಬರೂ ನ್ಯಾಯಾಧೀಶರು ಗವಾಯಿ ಅವರು ಹೇಳಿರುವ 100% ಒಳ ಮೀಸಲಾತಿ ಇರಬಾರದು ಎಂಬುದಕ್ಕೆ ಅವರು ಸಮ್ಮತಿ ಸೂಚಿಸಿಲ್ಲ.
ಆದರೆ, 100% ಒಳ ಮೀಸಲಾತಿ ಇರಬಾರದು ಎಂಬುದಕ್ಕೆ ಅವರು ಸಮ್ಮತಿ ಸೂಚಿಸಿಲ್ಲ. ಆದರೂ, ಒಳಮೀಸಲಾತಿಯನ್ನು ಒಂದೇ ಪೀಳಿಗೆಗೆ ಸೀಮಿತಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ”ಮೀಸಲಾತಿಯ ಮೂಲಕ ಮೊದಲ ತಲೆಮಾರು ಉನ್ನತ ಸ್ಥಾನಮಾನವನ್ನು ಪಡೆದುಕೊಂಡರೆ ಅಥವಾ ತಲುಪಿದರೆ, ಎರಡನೇ ತಲೆಮಾರು ಆ ಮೀಸಲಾತಿಗೆ ಅರ್ಹರಾಗಬಾರದು” ಎಂದು ನ್ಯಾಯಮೂರ್ತಿ ಮಿಥಾಲ್ ಹೇಳಿದ್ದಾರೆ.
ನ್ಯಾಯಮೂರ್ತಿ ತ್ರಿವೇದಿ ಅಸಮ್ಮತಿ
341ನೇ ವಿಧಿಯ ಅಡಿಯಲ್ಲಿ ಸೂಚಿಸಲಾದ ಪರಿಶಿಷ್ಟ ಜಾತಿಗಳ ಅಧ್ಯಕ್ಷೀಯ ಪಟ್ಟಿಯನ್ನು ರಾಜ್ಯಗಳು ಬದಲಾಯಿಸಲು ಸಾಧ್ಯವಿಲ್ಲ. ಈ ವಿಧಿಯ ಉದ್ದೇಶವು ಎಸ್‌ಸಿ/ಎಸ್‌ಟಿ ಮೀಸಲಾತಿಯಲ್ಲಿ ರಾಜಕೀಯ ಹಸ್ತಕ್ಷೇಪವನ್ನು ತಡೆಯುವುದಾಗಿದೆ ಎಂದು ನ್ಯಾಯಮೂರ್ತಿ ತ್ರಿವೇದಿ ಅವರು ತಮ್ಮ ಭಿನ್ನಾಭಿಪ್ರಾಯದಲ್ಲಿ ಹೇಳಿದ್ದಾರೆ. ಸಂಸತ್ತು ಜಾರಿಗೊಳಿಸಿದ ಕಾನೂನಿನ ಮೂಲಕ ರಾಷ್ಟ್ರಪತಿಗಳ ಅಂಕಿತದೊಂದಿಗೆ ಮಾತ್ರ ಜಾತಿಗಳನ್ನು ಪಟ್ಟಿಗೆ ಸೇರಿಸಬಹುದು ಅಥವಾ ಹೊರಗಿಡಬಹುದು ಎಂದಿದ್ದಾರೆ.
ಕಾರ್ಯಾಂಗ ಅಥವಾ ಶಾಸಕಾಂಗ ಅಧಿಕಾರದ ಅನುಪಸ್ಥಿತಿಯಲ್ಲಿ, ಜಾತಿಗಳನ್ನು ಉಪ-ವರ್ಗೀಕರಿಸಲು ಮತ್ತು ಎಲ್ಲ ಎಸ್‌ಸಿಗಳಿಗೆ ಮೀಸಲಾಗಿರುವ ಪ್ರಯೋಜನಗಳನ್ನು ಉಪ-ವರ್ಗೀಕರಿಸಿ ವಿಭಜಿಸುವ ಯಾವುದೇ ಸಾಮರ್ಥ್ಯವು ರಾಜ್ಯಗಳಿಗೆ ಇಲ್ಲ. ಉಪ ವರ್ಗೀಕರಣ ಮಾಡಲು ರಾಜ್ಯಗಳಿಗೆ ಅವಕಾಶ ನೀಡುವುದು ‘ಅಧಿಕಾರದ ರಾಜಕೀಯ’ಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಕರಣಗಳ ಹಿನ್ನೆಲೆ
2000ನೇ ಇಸವಿಯಲ್ಲಿ ಆಂಧ್ರಪ್ರದೇಶ ಸರ್ಕಾರವು ‘ಪರಿಶಿಷ್ಟ ಜಾತಿಗಳ (ಮೀಸಲಾತಿ ತರ್ಕಬದ್ಧಗೊಳಿಸುವಿಕೆ) ಕಾಯಿದೆ-2000’ವನ್ನು ಜಾರಿಗೆ ತಂದಿತ್ತು. ಆಂಧ್ರದಲ್ಲಿ ನ್ಯಾಯಮೂರ್ತಿ ರಾಮಚಂದ್ರರಾಜು ನೇತೃತ್ವದ ಸಮಿತಿಯು ಮೀಸಲಾತಿಯ ಪ್ರಯೋಜನಗಳನ್ನು ಪಡೆಯಲು ವಿಫಲವಾದ ಪರಿಶಿಷ್ಟ ಜಾತಿಯ ಕೆಲ ಸಮುದಾಯಗಳನ್ನು ಗುರುತಿಸಿ, ಅವರಿಗೆ ಕೋಟಾ ನೀಡುವಂತೆ ಶಿಫಾರಸು ಮಾಡಿತ್ತು. ಸಮಿತಿಯ ಶಿಫಾರಸಿನ ಮೇರೆಗೆ, ಆಂಧ್ರ ಸರ್ಕಾರವು ಅಧ್ಯಕ್ಷೀಯ ಪಟ್ಟಿಯಲ್ಲಿ ಪಟ್ಟಿ ಮಾಡಲಾದ 57 ಜಾತಿಗಳನ್ನು ಹಿಂದುಳಿದಿವೆ ಎಂಬ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ವಿಂಗಡಿಸಿ, ಪ್ರತಿಯೊಂದು ಗುಂಪುಗಳಿಗೆ ಮೀಸಲಾತಿಯಲ್ಲಿ ಪ್ರತ್ಯೇಕ ಕೋಟಾಗಳನ್ನು ನಿಗದಿಪಡಿಸಿ ಕಾನೂನನ್ನು ಅಂಗೀಕರಿಸಿತ್ತು.
ಈ ಕಾಯ್ದೆಯನ್ನು ಪ್ರಶ್ನಿಸಿ 2004ರಲ್ಲಿ ಇ.ವಿ ಚಿನ್ನಯ್ಯ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆ ಪ್ರಕರಣದಲ್ಲಿ 5-ನ್ಯಾಯಾಧೀಶರ ಸಂವಿಧಾನ ಪೀಠವು ಪರಿಶಿಷ್ಟ ಜಾತಿಗಳು (SCs) ಮತ್ತು ಪರಿಶಿಷ್ಟ ಪಂಗಡಗಳ (STs) ಸದಸ್ಯರು ಏಕರೂಪದ ವರ್ಗಗಳಾಗಿರುತ್ತಾರೆ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುತ್ತದೆ ಎಂದು ಹೇಳಿತ್ತು.
2020ರಲ್ಲಿ, ನ್ಯಾಯಮೂರ್ತಿ ಅರುಣ್ ಮಿಶ್ರಾ (ಈಗ ನಿವೃತ್ತ) ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಇ.ವಿ ಚಿನ್ನಯ್ಯ v/s ಆಂಧ್ರಪ್ರದೇಶದ ಸರ್ಕಾರ ಪ್ರಕರಣದ ತೀರ್ಪನ್ನು ವಿಸ್ತೃತ ಪೀಠದಿಂದ ಮರುಪರಿಶೀಲಿಸಬೇಕೆಂದು ತೀರ್ಪು ನೀಡಿತ್ತು. ಮೀಸಲಾತಿಯ ಪ್ರಯೋಜನವು ಅಗತ್ಯವಿರುವ ಬಡವರಿಗೆ ದಕ್ಕುತ್ತಿಲ್ಲ ಎಂದು ಹೇಳಿತ್ತು.
ಅಲ್ಲದೆ, ಪಂಜಾಬ್‌ನ ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳ (ಸೇವೆಗಳಲ್ಲಿ ಮೀಸಲಾತಿ) ಕಾಯಿದೆ-2006ರ ಸೆಕ್ಷನ್ 4 (5)ನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 2010ರಲ್ಲಿ ರದ್ದುಗೊಳಿಸಿತ್ತು. ಹೈಕೋರ್ಟ್‌ನ ಈ ತೀರ್ಪನ್ನು ಪ್ರಶ್ನಿಸಿ ಪಂಜಾಬ್ ಸರ್ಕಾರ ಕೂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಎರಡು ಪ್ರಕರಣಗಳು ಸೇರಿದಂತೆ ಒಟ್ಟು 23 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದು, ಒಳಮೀಸಲಾತಿಯನ್ನು ಅನುಮತಿಸಿ ತೀರ್ಪು ನೀಡಿದೆ.