ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಉತ್ತರ ಪ್ರದೇಶದ ಶಾಸಕ ಅಬ್ಬಾಸ್ ಅನ್ಸಾರಿ ಅವರು ತಮ್ಮ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು ಅಲಹಾಬಾದ್ ಹೈಕೋರ್ಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
“ಈ ಬಗ್ಗೆ ನಾವು ಕಮೆಂಟ್ ಮಾಡಲು ಬಯಸುವುದಿಲ್ಲ. ಕೆಲವು ಹೈಕೋರ್ಟ್‌ಗಳಿಗೆ ಏನಾಗುತ್ತಿದೆ ಎಂಬ ಬಗ್ಗೆ ತಿಳಿದಿಲ್ಲ. ಕೆಲವು ಹೈಕೋರ್ಟ್‌ಗಳ ಪೈಕಿ ಅಲಹಾಬಾದ್ ಹೈಕೋರ್ಟ್ ಬಗ್ಗೆಯೂ ಚಿಂತಿಸಬೇಕಾಗಿದೆ” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಟೀಕಿಸಿದ್ದಾರೆ.
ಹೈಕೋರ್ಟ್‌ನಲ್ಲಿ ಪ್ರಕರಣಗಳ ಪಟ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಲ್ಲೇಖ ಮಾಡಿದ ಅವರು, “ದುರದೃಷ್ಟವಶಾತ್ ಪ್ರಕರಣಗಳ ಪಟ್ಟಿ ಸಲ್ಲಿಕೆ ಕುಸಿದಿದೆ. ಯಾವ ವಿಷಯವನ್ನು ಪಟ್ಟಿ ಮಾಡಲಾಗುತ್ತಿದೆ ಎಂದು ಯಾರಿಗೂ ತಿಳಿದಿಲ್ಲ. ಕಳೆದ ಶನಿವಾರ ನಾನು ಅಲಹಾಬಾದ್ ಹೈಕೋರ್ಟ್‌ಗೆ ಭೇಟಿ ನೀಡಿದಾಗ ಸಂಬಂಧಪಟ್ಟ ನ್ಯಾಯಾಧೀಶರು ಮತ್ತು ರಿಜಿಸ್ಟ್ರಾರ್ ಜತೆಗೆ ದೀರ್ಘ ಸಂವಹನ ನಡೆಸಿದ್ದೇನೆ” ಎಂದು ಹೇಳಿದರು.
ಹಿರಿಯ ವಕೀಲ ಕಪಿಲ್ ಸಿಬಲ್ ಅವರು, “ನಾನು ಕೂಡ ಈ ಬಗ್ಗೆ ಕಮೆಂಟ್ ಮಾಡಲು ಬಯಸುವುದಿಲ್ಲ. ಯಾಕೆಂದರೆ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ” ಎಂದು ಹೇಳಿದ್ದಾರೆ.
ನಂತರ ಹೊರಡಿಸಿದ ಆದೇಶದಲ್ಲಿ, ಅನ್ಸಾರಿ ಅವರ ಅರ್ಜಿಯನ್ನು ಹೈಕೋರ್ಟ್ ಆಲಿಸುವವರೆಗೆ ವಿವಾದಿತ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.
ಈ ವಿಷಯವನ್ನು ಆದಷ್ಟು ಬೇಗ ಹೈಕೋರ್ಟ್ ಮುಂದೆ ವಿಚಾರಣೆಗೆ ಒಳಪಡಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ತನ್ನ ಆದೇಶವನ್ನು ಅಲ್ಲಿನ ವಿಭಾಗೀಯ ಪೀಠದ ಗಮನಕ್ಕೆ ತರುವಂತೆಯೂ ನಿರ್ದೇಶಿಸಿದೆ.