ರಾಷ್ಟ್ರಪತಿಗೆ ಸುಪ್ರೀಂ ಗಡುವು: ಕಾರ್ಯಾಂಗದ ಮೇಲೆ ನ್ಯಾಯಾಂಗ ಅತಿಕ್ರಮಣವೇ?

Date:

Advertisements
 ಸಂವಿಧಾನದ 142ನೇ ವಿಧಿಯನ್ನು ಬಳಸಿ ಸುಪ್ರೀಂ ಕೋರ್ಟ್‌, ತಮಿಳುನಾಡು ಸರ್ಕಾರದ 10 ಮಸೂದೆಗಳನ್ನು ರಾಜ್ಯಪಾಲರ ಅಂಕಿತ ಇಲ್ಲದೆಯೇ ಕಾನೂನಾಗಿ ಅಂಗೀಕರಿಸಿತು. ಅದರಲ್ಲಿ, 2020ರಿಂದ ಬಾಕಿ ಉಳಿದಿದ್ದ ಒಂದು ಮಸೂದೆಯೂ ಸೇರಿದೆ. ಇದೇ ವೇಳೆ, ಮಸೂದೆ ವಿಲೇವಾರಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಗಡುವು ನಿಗದಿ ಮಾಡಿದೆ 

ಮಸೂದೆಗಳ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಸುಪ್ರೀಂ ಕೋರ್ಟ್‌ ಸಮಯ ನಿಗದಿ ಮಾಡಿ ಆದೇಶಿಸಿದೆ. ಮಸೂದೆಗಳನ್ನು ಸ್ವೀಕರಿಸಿದ ದಿನಾಂಕದಿಂದ ಮೂರು ತಿಂಗಳುಗಳ ಒಳಗೆ ಅವುಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕಬೇಕು. ಅಂತೆಯೇ, ಒಂದು ತಿಂಗಳ ಒಳಗೆ ರಾಜ್ಯಪಾಲರು ಸಹಿ ಹಾಕಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದೇ ಮೊದಲ ಬಾರಿಗೆ, ರಾಷ್ಟ್ರಪತಿಗಳಿಗೆ ಗಡುವು ನಿಗದಿ ಮಾಡಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಕಾರ್ಯಾಂಗದ ಮೇಲೆ ನ್ಯಾಯಾಂಗದ ಅತಿಕ್ರಮಣವೆಂದು ಬಣ್ಣಿಸಿದ್ದಾರೆ. ಅವರಲ್ಲಿ, ಉಪ ರಾಷ್ಟ್ರಪತಿ ಜಗದೀಪ್ ಧನಕರ್‌ ಕೂಡ ಒಬ್ಬರು.

”ನ್ಯಾಯಾಧೀಶರು ‘ಸೂಪರ್ ಪಾರ್ಲಿಮೆಂಟ್‌’ ಆಗಿ ಕಾರ್ಯನಿರ್ವಹಿಸಲು ಯತ್ನಿಸುತ್ತಿದ್ದಾರೆ. ಇಂತಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಭಾರತದ ಪ್ರಜಾಪ್ರಭುತ್ವದ ಉದ್ದೇಶವಲ್ಲ. ನೀವು (ನ್ಯಾಯಾಧೀಶರು) ಭಾರತದ ರಾಷ್ಟ್ರಪತಿಗೆ ನಿರ್ದೇಶಿಸುವ ಪರಿಸ್ಥಿತಿಯನ್ನು ನಾವು ನೋಡಲು ಸಾಧ್ಯವಿಲ್ಲ” ಎಂದಿದ್ದಾರೆ ಧನಕರ್.

ಇತ್ತೀಚೆಗೆ, ತಮಿಳುನಾಡು ಸರ್ಕಾರವು ತನ್ನ ಮಸೂದೆಗಳ ವಿಚಾರದಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ನಿರ್ಧಾರಗಳನ್ನು ತೆಗೆದುಕೊಳ್ಳದೆ, ಅಂಕಿತ ಹಾಕದೆ ವಿಳಂಬ ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ತಮಿಳು ಸರ್ಕಾರದ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್‌, ಸಂವಿಧಾನದ 142ನೇ ವಿಧಿಯನ್ನು ಬಳಸಿ, ತಮಿಳು ಸರ್ಕಾರದ 10 ಮಸೂದೆಗಳನ್ನು ರಾಜ್ಯಪಾಲರ ಅಂಕಿತ ಇಲ್ಲದೆಯೇ ಕಾನೂನಾಗಿ ಅಂಗೀಕರಿಸಿತು. ಅದರಲ್ಲಿ, 2020ರಿಂದ ಬಾಕಿ ಉಳಿದಿದ್ದ ಒಂದು ಮಸೂದೆಯೂ ಸೇರಿದೆ. ಇದೇ ವೇಳೆ, ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಯಾವುದೇ ಮಸೂದೆಯನ್ನು ತಾವು ಸ್ವೀಕರಿಸಿದ 3 ತಿಂಗಳ ಒಳಗಾಗಿ ವಿಲೇವಾರಿ ಮಾಡಬೇಕು ಎಂದು ಗಡುವು ನಿಗದಿ ಮಾಡಿ, ತೀರ್ಪು ನೀಡಿತು.

Advertisements

ಐತಿಹಾಸಿಕವಾಗಿ, ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಅಥವಾ ರಾಜ್ಯಪಾಲರ ಅಂಕಿತ ಇಲ್ಲದೆ ಮಸೂದೆಯು ಕಾನೂನಾಗಿ ಅಂಗೀಕಾರಗೊಂಡಿದೆ. ಅದಕ್ಕಾಗಿ, ಸಂವಿಧಾನದ 142ನೇ ವಿಧಿಯಲ್ಲಿ ತನಗೆ ನೀಡಲಾಗಿರುವ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ಬಳಸಿಕೊಂಡಿತು. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರು ಈ ಹೆಗ್ಗುರುತಾದ ತೀರ್ಪು ನೀಡಿದ ಪೀಠದ ಭಾಗವಾಗಿದ್ದರು.

ಈ ತೀರ್ಪು ಮಸೂದೆ ವಿಲೇವಾರಿಯಲ್ಲಿ ನಿಗದಿತ ಗಡುವನ್ನು ಮೀರಿ ವಿಳಂಬವಾದರೆ, ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತದೆ. ಅವರು ವಿಳಂಬದ ಕುರಿತು ನ್ಯಾಯಾಲಯಗಳಿಗೆ ಉತ್ತರಿಸಬೇಕಾಗುತ್ತದೆ. ಜೊತೆಗೆ, ದೀರ್ಘಕಾಲದ ವಿಳಂಬದ ಸಮಯದಲ್ಲಿ ರಾಜ್ಯ ಸರ್ಕಾರಗಳು ನ್ಯಾಯಕ್ಕಾಗಿ ನ್ಯಾಯಾಲಯಗಳ ಮೊರೆ ಹೋಗಲು ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ, ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಕ್ರಮಗಳನ್ನು ನ್ಯಾಯಾಂಗದ ಪರಿಶೀಲನೆಗೆ ತೆರೆಯುತ್ತದೆ.

ಸುಪ್ರೀಂ ತೀರ್ಪನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರು ಐತಿಹಾಸಿಕ ತೀರ್ಪು ಎಂದು ಬಣ್ಣಿಸಿದ್ದಾರೆ. ಶ್ಲಾಘಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಈ ಶ್ಲಾಘನೆಯು ಹಲವಾರು ವಿಚಾರಗಳನ್ನು ಪ್ರತಿಧ್ವನಿಸುತ್ತದೆ. ಬಹುತೇಕ ರಾಜ್ಯಪಾಲರು ಕೇಂದ್ರ ಸರ್ಕಾರದ ಆಣತಿಯಲ್ಲಿ ಕೆಲಸ ಮಾಡುತ್ತಿದ್ದು, ಎನ್‌ಡಿಎ/ಬಿಜೆಪಿಯೇತರ ಸರ್ಕಾರಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸರ್ಕಾರಗಳನ್ನು ಸತಾಯಿಸುತ್ತಿದ್ದಾರೆ ಎಂಬ ಆರೋಪಗಳಿವೆ.

ರಾಜ್ಯಗಳ ರಾಜ್ಯಪಾಲರಾಗಲೀ, ರಾಷ್ಟ್ರಪತಿಯವರೇ ಆಗಲಿ – ಯಾವುದೇ ಮಸೂದೆಯು ತಮ್ಮ ಎದುರು ಬಂದಾಗ, ಅವುಗಳನ್ನು ಪರಿಶೀಲಿಸಿ, ತಿದ್ದುಪಡಿಗಳಿದ್ದರೆ ಸೂಚಿಸುವ, ಇಲ್ಲದಿದ್ದರೆ ಅಂಕಿತ ಹಾಕುವುದು ಅವರ ಆದ್ಯ ಜವಾಬ್ದಾರಿ. ಒಂದು ವೇಳೆ, ಸರ್ಕಾರಗಳು ಅವರ ತಿದ್ದುಪಡಿ, ಸಲಹೆಗಳಿಗೆ ಮನ್ನಣೆ ಕೊಡದಿದ್ದರೆ, ವಿಟೋ ಅಧಿಕಾರವನ್ನು ಚಲಾಯಿಸಲು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಅಧಿಕಾರವಿದೆ. ಆದರೆ, ಪ್ರಸ್ತುತ ಸಂದರ್ಭದಲ್ಲಿ, ರಾಜ್ಯಪಾಲರು ಸಲಹೆ ಸೂಚನೆಗಳನ್ನೂ ಕೊಡದೆ, ವಿಟೋ ಅಧಿಕಾರದಡಿ ತಿರಸ್ಕಾರವನ್ನೂ ಮಾಡದೆ ತಮ್ಮ ಕಚೇರಿಯಲ್ಲಿ ಹಲವು ತಿಂಗಳುಗಳ ಕಾಲ ಇರಿಸಿಕೊಳ್ಳುತ್ತಿದ್ದಾರೆ. ಪರಿಣಾಮವಾಗಿ, ಸದನದಲ್ಲಿ ಅಂಗೀಕಾರವಾದ ಮಸೂದೆಗಳು ರಾಜ್ಯಪಾಲರ ಕಚೇರಿಯಲ್ಲಿ ಕೊಳೆಯುತ್ತಿವೆ. ಕಾನೂನು/ಕಾಯ್ದೆಗಳು ಜಾರಿಯಾಗದಂತಾಗುತ್ತಿವೆ.

ಇದೇ ಕಾರಣದಿಂದಾಗಿ, ಮಸೂದೆಗಳನ್ನು ವಿಲೇವಾರಿ ಮಾಡಲು ರಾಜ್ಯಪಾಲರಿಗೆ 1 ತಿಂಗಳು ಮತ್ತು ರಾಷ್ಟ್ರಪತಿಗಳಿಗೆ 3 ತಿಂಗಳ ಗಡುವನ್ನು ಸುಪ್ರೀಂ ಕೋರ್ಟ್‌ ನಿಗದಿ ಮಾಡಿದೆ. ಅದನ್ನು ತಮಿಳುನಾಡು ಸರ್ಕಾರ ಐತಿಹಾಸಿಕ ತೀರ್ಪು ಎನ್ನುತ್ತಿದೆ.

ಜೊತೆಗೆ, ಕೆಲವು ಮಸೂದೆಗಳು ಜನವಿರೋಧಿಯಾಗಿದ್ದರೆ ಅಂತಹ ಮಸೂದೆಗಳಿಗೆ ರಾಜ್ಯಪಾಲರು/ರಾಷ್ಟ್ರಪತಿಗಳು ಅಂಕಿತ ಹಾಕಿ, ಕಾಯ್ದೆಯಾಗಿ ಜಾರಿಗೊಳಿಸಿದರೂ, ಅವುಗಳನ್ನು ರದ್ದುಗೊಳಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇದೆ. ರಾಷ್ಟ್ರಪತಿಗಳೇ ಅಂಕಿತ ಹಾಕಿದ ಕಾಯ್ದೆಗಳನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸುವಾಗ, ಮಸೂದೆಗಳ ವಿಲೇವಾರಿಗೆ ಸಮಯ ನಿಗದಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬ ಅಭಿಪ್ರಾಯಗಳೂ ಇವೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪು ನ್ಯಾಯಾಂಗದ ಕ್ರಿಯಾಶೀಲತೆಯನ್ನು ಪ್ರತಿಬಿಂಬಿಸುತ್ತದೆಯೇ ಅಥವಾ ನ್ಯಾಯಾಂಗ ಅತಿಕ್ರಮಣವನ್ನು ಪ್ರತಿಬಿಂಬಿಸುತ್ತದೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಹಲವರು ಇದನ್ನು ನ್ಯಾಯಾಂಗ ಕ್ರಿಯಾಶೀಲತೆ ಎಂದಿದ್ದಾರೆ. ಕಾನೂನನ್ನು ವ್ಯಾಖ್ಯಾನಿಸುವಲ್ಲಿ ಮತ್ತು ರೂಪಿಸುವಲ್ಲಿ ಸಕ್ರಿಯ ಪಾತ್ರ ವಹಿಸುವ ಮೂಲಕ ನಾಗರಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ನ್ಯಾಯಾಂಗವು ವಹಿಸುವ ಪೂರ್ವಭಾವಿ ಪಾತ್ರವನ್ನು ಇದು ಸೂಚಿಸುತ್ತದೆ ಎಂದಿದ್ದಾರೆ.

ಈ ವರದಿ ಓದಿದ್ದೀರಾ?: Encounter | ಬಲಾಢ್ಯರು- ಪ್ರಭಾವಿಗಳ ಒಂದೇ ಒಂದು ಎನ್‌ಕೌಂಟರ್ ಆಗಿದ್ದರೆ ತೋರಿಸಿ…

ಆದಾಗ್ಯೂ, ನ್ಯಾಯಾಲಯದ ತೀರ್ಪು ಮಸೂದೆಗಳನ್ನು ಅಂಗೀಕರಿಸುವಲ್ಲಿ ಕಾರ್ಯಾಂಗದ ಪಾತ್ರವನ್ನು ಮೊಟಕುಗೊಳಿಸುತ್ತದೆ. ಇದು ನ್ಯಾಯಾಂಗ ಅತಿಕ್ರಮಣವಾಗಿದೆ ಎಂದು ಹಲವರು ಬಣ್ಣಿಸಿದ್ದಾರೆ.

ರಾಜ್ಯಸಭೆಯ ಅಧ್ಯಕ್ಷರೂ ಆಗಿರುವ, ರಾಜಸ್ಥಾನ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಅಭ್ಯಾಸ ಮಾಡಿರುವ ಹಿರಿಯ ವಕೀಲರೂ ಆಗಿರುವ ಉಪ ರಾಷ್ಟ್ರಪತಿ ಧನಕರ್ ಈಗ ಪರ-ವಿರೋಧ ಚರ್ಚೆಗೆ ಸೇರಿಕೊಂಡಿದ್ದಾರೆ. ಮಸೂದೆಗಳ ವಿಲೇವಾರಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಸುಪ್ರೀಂ ಕೋರ್ಟ್‌ ಗಡುವು ನಗದಿ ಮಾಡಿರುವುದನ್ನು ಧನಕರ್ ವಿರೋಧಿಸುತ್ತಿದ್ದಾರೆ. ರಾಷ್ಟ್ರಪತಿಗಳಿಗೆ ಗಡುವು ಕೊಡಲು ಸುಪ್ರೀಂ ಕೋರ್ಟ್‌ಗೆ ಸಾಧ್ಯವಿಲ್ಲ ಎಂದಿದ್ದಾರೆ.

”ಸಂವಿಧಾನದ 142ನೇ ವಿಧಿಯನ್ನು ಪ್ರಜಾಪ್ರಭುತ್ವ ಶಕ್ತಿಗಳ ವಿರುದ್ಧ ಪರಮಾಣು ಕ್ಷಿಪಣಿಯಾಗಿ ಸುಪ್ರೀಂ ಕೋರ್ಟ್‌ ಬಳಸಿಕೊಳ್ಳುತ್ತಿದೆ. ಈ ವಿಧಿಯು ನ್ಯಾಯಾಂಗಕ್ಕೆ 24*7 ಹೇಗೆ ಲಭ್ಯವಿರುತ್ತದೆ. ಹಿಂದೆ ವಿರಳವಾಗಿ ಬಳಸಲಾಗಿದ್ದ ಈ ವಿಧಿಯನ್ನು ಇತ್ತೀಚಿನ ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ಆಗ್ಗಾಗ್ಗೆ ನಿಯಮಿತವಾಗಿ ಬಳಸುತ್ತಿದೆ. 2024ರಲ್ಲಿ, ಈ ನಿಬಂಧನೆಯನ್ನು ಮೂರು ಬಾರಿ ಬಳಸಿದೆ” ಎಂದು ಧನಕರ್ ಹೇಳಿದ್ದಾರೆ.

ಧನಕರ್‌ ಅವರ ಹಾದಿಯಲ್ಲಿಯೇ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಕೂಡ ಸುಪ್ರೀಂ ಕೋರ್ಟ್‌ ತೀರ್ಪನ್ನು ವಿರೋಧಿಸಿದ್ದಾರೆ. ”ರಾಜ್ಯ ಶಾಸಕಾಂಗವು ಅಂಗೀಕರಿಸಿದ ಮಸೂದೆಗಳ ಮೇಲೆ ಕಾರ್ಯಾಂಗವು ಒಂದು ಸಮಯದ ಮಿತಿಯಲ್ಲಿ ಕೆಲಸ ಮಾಡಲು ನಿರ್ದೇಶಿಸಲು ಸಂವಿಧಾನದಲ್ಲಿ ಸೂಚಿಸಲಾಗಿಲ್ಲ. ಈ ತೀರ್ಪು ರಾಷ್ಟ್ರಪತಿಗಳ ‘ಸಂಪೂರ್ಣ ವೀಟೋ’ ಅಧಿಕಾರವನ್ನು ದುರ್ಬಲಗೊಳಿಸುತ್ತದೆ” ಎಂದಿದ್ದಾರೆ.

ಮಾಜಿ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವರು ಸುಪ್ರೀಂ ತೀರ್ಪನ್ನು ಬಲವಾಗಿ ಬೆಂಬಲಿಸಿದ್ದಾರೆ. ”ಸುಪ್ರೀಂ ಕೋರ್ಟ್, ರಾಷ್ಟ್ರಪತಿ ಹಾಗೂ ರಾಜ್ಯಪಾಲರನ್ನು ಸಮಾನವಾದ ಪೀಠಗಳಲ್ಲಿ ಇರುವುದು, ಸಂಪೂರ್ಣವಾಗಿ ಸರಿಯಾಗಿದೆ” ಎಂದು ಹೇಳಿದ್ದಾರೆ.

”ರಾಜ್ಯಪಾಲರು ಅತಿಯಾದ ವಿಳಂಬ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಈ ತೀರ್ಪು ವಿಶಿಷ್ಟವಾಗಿದೆ. ಇದು ರಾಜ್ಯಪಾಲರು ಕಾರ್ಯನಿರ್ವಹಿಸಲು ಕೇವಲ ಸೂಚನೆಯನ್ನು ನೀಡುವುದಿಲ್ಲ. ಬದಲಾಗಿ, ಸಮಯವನ್ನು ನಿಗದಿಪಡಿಸುತ್ತದೆ” ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರ್ಯ ಶ್ಲಾಘಿಸಿದ್ದಾರೆ.

ಪರ-ವಿರೋಧ ಚರ್ಚೆಗಳ ನಡುವೆ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ಈ ತೀರ್ಪನ್ನು ಮರುಪರಿಶೀಲಿಸುವಂತೆ ಗೃಹ ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ಪರಿಶೀಲನಾ ಅರ್ಜಿ ಸಲ್ಲಿಸಲಿದೆ ಎಂದು ಹೇಳಲಾಗುತ್ತಿದೆ. ತೀರ್ಪು ಮರುಪರಿಶೀಲನೆ ಆಗುವುದೇ ಅಥವಾ ಹೀಗೆಯೇ ಮುಂದುವರೆಯುವುದೇ ಕೆಲವೇ ದಿನಗಳಲ್ಲಿ ಉತ್ತರ ದೊರೆಯಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X