ಭಾರತದಲ್ಲಿ ಹಿಂದೂ ಧರ್ಮದ ರಕ್ಷಣೆಗೆ ಮಾರ್ಗಸೂಚಿ ರಚಿಸಬೇಕೆಂದು ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾ. ಸಂಜಯ್ ಕಿಶನ್ ಕೌಲ್, ನ್ಯಾ. ಸುಧಾಂಶು ಧುಲಿಯಾ ಮತ್ತು ನ್ಯಾ. ಅಹ್ಸನುದ್ದಿನ್ ಅಮಾನುಲ್ಲಾ ಅವರನ್ನು ಒಳಗೊಂಡ ತ್ರಿಸದಸ್ಯ ನೇತೃತ್ವದ ಪೀಠವು ಇಂತಹ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಹಿಂದೂ ಧರ್ಮದ ರಕ್ಷಣೆಗಾಗಿ ಮಾರ್ಗಸೂಚಿಗಳನ್ನು ರಚಿಸಲು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ನಿರ್ದೇಶನವನ್ನು ಕೋರಿದ ಅರ್ಜಿಯ ಮನವಿಯನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಲಿಲ್ಲ.
“ಭಾರತದಲ್ಲಿ ಇಸ್ಲಾಂ ಧರ್ಮವನ್ನು ರಕ್ಷಿಸಿ ಎಂದು ಕಲವರು ಕೇಳುತ್ತಾರೆ, ಮತ್ತೊಬ್ಬರು ಭಾರತದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಉಳಿಸಿ ಎಂದು ಮನವಿ ಸಲ್ಲಿಸುತ್ತಾರೆ. ಇದು ನ್ಯಾಯಾಲಯದ ಕೆಲಸವಲ್ಲ. ಸರ್ಕಾರ ಇದನ್ನು ಮಾಡಬೇಕಿದೆ” ಎಂದು ಅರ್ಜಿದಾರರನ್ನು ಪೀಠವು ತರಾಟೆಗೆ ತೆಗೆದುಕೊಂಡಿತು.
ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯುತ್ತಿದ್ದು, ಅವರ ಪ್ರಕರಣದಲ್ಲಿ ವಾದ ಮಂಡಿಸಲು ಖುದ್ದು ಹಾಜರಾಗಿದ್ದರು.
ಈ ಸುದ್ದಿ ಓದಿದ್ದೀರಾ? ಅದಾನಿ ಕುರಿತ ವರದಿ: ಗುಜರಾತ್ ಪೊಲೀಸರಿಂದ ಸಮನ್ಸ್ ಪಡೆದ ಪತ್ರಕರ್ತರಿಗೆ ಸುಪ್ರೀಂನಿಂದ ಮಧ್ಯಂತರ ರಕ್ಷಣೆ
“ಅರ್ಜಿದಾರರು ತನಗೆ ಬೇಕಾದುದನ್ನು ಇತರರು ಮಾಡಬೇಕೆಂದು ಹೇಳಲು ಸಾಧ್ಯವಿಲ್ಲ. ನೀವು ಇದನ್ನು ಪ್ರಚಾರ ಮಾಡಬಹುದು. ಯಾರೂ ನಿಮ್ಮನ್ನು ತಡೆಯುವುದಿಲ್ಲ. ಆದರೆ ಎಲ್ಲರೂ ಅದನ್ನು ಮಾಡಬೇಕು ಎಂದು ನೀವು ಹೇಳಲು ಸಾಧ್ಯವಿಲ್ಲ” ಎಂದು ಅರ್ಜಿಯನ್ನು ವಜಾಗೊಳಿಸುವಾಗ ಸುಪ್ರೀಂ ಕೋರ್ಟ್ ಹೇಳಿದೆ.
ಫೆಬ್ರವರಿ 27ರಂದು ಸುಪ್ರೀಂ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿತ್ತು. ಹಿಂದಿನ ವಜಾ ಆದೇಶವನ್ನು ವಾಪಸ್ ಪಡೆದುಕೊಳ್ಳುವಂತೆ ಕೋರಿ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ಪರಿಶೀಲಿಸುವ ಸಂದರ್ಭದಲ್ಲಿ ನ್ಯಾಯಪೀಠ, ಮತ್ತೆ ಅದನ್ನು ತಳ್ಳಿಹಾಕಿತು. ಅರ್ಜಿ ವಜಾ ಆದೇಶ ಹಿಂಪಡೆಯಲು ನಿರಾಕರಿಸಿದ ಕೋರ್ಟ್, ವಿಚಾರಣೆಗೆ ಅರ್ಹವಾಗಿಲ್ಲ ಎಂದು ಹೇಳಿ ಅದನ್ನು ವಜಾಗೊಳಿಸಿತು.
“ಹಿಂದೂ ಧರ್ಮ ಅಪಾಯದಲ್ಲಿದೆ ಎಂಬ ಸಾಮಾನ್ಯ ಗ್ರಹಿಕೆಗಳ ಆಧಾರದಲ್ಲಿ ಸಂಪೂರ್ಣ ತಪ್ಪು ಅಭಿಪ್ರಾಯದೊಂದಿಗೆ ಈ ಅರ್ಜಿ ಸಲ್ಲಿಸಲಾಗಿದೆ ಮತ್ತು ನ್ಯಾಯಾಲಯದಿಂದ ರಕ್ಷಣೆಯನ್ನು ಕೋರಲಾಗಿದೆ. ಅರ್ಜಿದಾರರು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾರೆ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಿಂತ ಪ್ರಚಾರ ಹಿತಾಸಕ್ತಿ ಅರ್ಜಿ ಎಂಬ ವರ್ಗಕ್ಕೆ ಸೂಕ್ತವಾಗಿ ಸಲ್ಲುತ್ತದೆ. ಹಾಗಾಗಿ ಅದನ್ನು ವಜಾಗೊಳಿಸಲಾಗಿದೆ” ಎಂದು ಇದೇ ಪೀಠ ಫೆಬ್ರವರಿಯಲ್ಲಿ ಹೇಳಿತ್ತು.