ಚುನಾವಣಾ ಸಮಯದಲ್ಲಿ ಮತದಾರರನ್ನು ಓಲೈಸಲು ಪಕ್ಷಗಳು ಹಲವು ಯೋಜನೆಗಳನ್ನು ಮುಂದಿಟ್ಟು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಅವನ್ನು ಜಾರಿಗೊಳಿಸುವುದಾಗಿ ಹೇಳುವುದುಂಟು. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂತಹ ಉಚಿತ, ಕಲ್ಯಾಣ ಯೋಜನೆಗಳು ಜಾರಿಯಲ್ಲಿವೆ. ಕರ್ನಾಟಕದ್ದೇ ಉದಾಹರಣೆಯಾಗಿ ನೋಡುವುದಾದರೆ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು, ಕರ್ನಾಟಕದ ಜನರ ಬದುಕಿಗೆ ನೆರವಾಗಿವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಹಣದುಬ್ಬರ, ಬೆಲೆ ಏರಿಕೆ ಸೇರಿದಂತೆ ಸಮಸ್ಯೆಗಳ ಕೂಪಕ್ಕೆ ಸಿಲುಕುತ್ತಿರುವ ಜನರ ಬದುಕಿಗೆ ಗ್ಯಾರಂಟಿ ಸ್ಕ್ರೀಮ್‌ಗಳು ಸ್ವಲ್ಪ ಉಸಿರಾಡುವಂತೆ ಮಾಡಿವೆ. ಆದರೆ, ಅಧಿಕಾರದ ಉನ್ನತ ಸ್ಥಾನದಲ್ಲಿರುವವರು ಇಂತಹ ಯೋಜನೆಗಳನ್ನು ಫ್ರೀಬೀಸ್‌ಗಳು, ಬಿಟ್ಟಿ ಯೋಜನೆಗಳು, ಇಂತಹ ಯೋಜನೆಗಳಿಂದಲೇ ಜನ ಸೋಮಾರಿಗಳಾಗುತ್ತಿದ್ದಾರೆ ಎಂದು ಉಡಾಫೆಯಾಗಿ ಮಾತಾಡುವುದು ನಡೆಯುತ್ತಲೇ ಇದೆ. ಈಗ, ಸುಪ್ರೀಂ ಕೋರ್ಟ್ ಕೂಡ ಉಚಿತ ಯೋಜನೆಗಳ ಬಗ್ಗೆ ಮಾತಾಡಿರುವುದು ದುರದೃಷ್ಟಕರ.
ಚುನಾವಣೆಗೂ ಮುನ್ನ ಉಚಿತ ಯೋಜನೆಗಳನ್ನು ಘೋಷಿಸುವ ರಾಜಕೀಯ ಪಕ್ಷಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, “ಜನರು ಉಚಿತ ಪಡಿತರ ಮತ್ತು ಹಣವನ್ನು ಪಡೆಯುತ್ತಿರುವುದರಿಂದ ಕೆಲಸ ಮಾಡಲು ಸಿದ್ಧರಿಲ್ಲ” ಎಂದು ಹೇಳಿದೆ. ಈ ಮೂಲಕ ಉಚಿತ ಭರವಸೆಗಳ ಬಗ್ಗೆ ನ್ಯಾಯಾಲಯ ಕೂಡ ಅಸಮಾಧಾನ ವ್ಯಕ್ತಪಡಿಸಿದೆ.
ನಗರ ಪ್ರದೇಶಗಳಲ್ಲಿ ಮನೆ ಇಲ್ಲದವರಿಗೆ ಸೂರಿನ ಹಕ್ಕು ಒದಗಿಸುವ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಕ್ರೈಸ್ಟ್ ಅವರ ಪೀಠ, “ಲಾಡ್ಲಿ ಬೆಹೆನ್ ತರದ ಉಚಿತ ಯೋಜನೆಗಳ ಕಾರಣಕ್ಕೆ ಜನ ಕೆಲಸ ಮಾಡಲು ಮನಸ್ಸು ಮಾಡುತ್ತಿಲ್ಲ. ಜನರನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಅವರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಮಾಡುವುದು ಹೆಚ್ಚು ಉತ್ತಮ” ಎಂದಿದೆ.
ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್, “ಕೆಲಸ ಇದೆ ಎಂದಾದರೆ ಕೆಲಸ ಮಾಡಲು ಮನಸ್ಸು ಇಲ್ಲದವರ ಸಂಖ್ಯೆ ಈ ದೇಶದಲ್ಲಿ ಬಹಳ ಕಡಿಮೆ” ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, “ಜನರ ಬಗ್ಗೆ ನಿಮ್ಮ ಕಾಳಜಿಗೆ ನಾವು ಕೃತಜ್ಞರಾಗಿರುತ್ತೇವೆ. ಆದರೆ, ಉಚಿತ ಪಡಿತರ ಮತ್ತು ಹಣವನ್ನು ನೀಡಿದರೆ ಅವರು ಯಾವುದೇ ಕೆಲಸಗಳನ್ನು ಮಾಡಲ್ಲ. ಅದರ ಬದಲು ಈ ಜನರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವುದು ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಅವರಿಗೆ ಅವಕಾಶ ನೀಡುವುದು ಉತ್ತಮವಲ್ಲವೇ?” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ವರದಿ ಓದಿದ್ದೀರಾ?: ರಮಾಬಾಯಿ ಅವರಿಗೆ ಅಂಬೇಡ್ಕರ್ ಬರೆದ ಪ್ರೇಮ ಪತ್ರ
ಅಭಿಜಿತ್ ಬ್ಯಾನರ್ಜಿ ಸೇರಿದಂತೆ ದೊಡ್ಡ ದೊಡ್ಡ ಆರ್ಥಿಕ ತಜ್ಞರು ಕಲ್ಯಾಣ ಯೋಜನೆಗಳಿಂದಾಗಿ ಉತ್ಪಾದನೆ ಹೆಚ್ಚಲು ಮತ್ತು ಜನರು ಸಕ್ರಿಯವಾಗಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎನ್ನುತ್ತಾರೆ. ಇಂತಹ ಯೋಜನೆಗಳನ್ನು ಬೆಂಬಲಿಸುತ್ತಾರೆ. ಆದರೆ, ಅಧಿಕಾರದಲ್ಲಿರುವವರು ಇಂತಹ ಯೋಜನೆಗಳನ್ನು ಹೀಗಳೆಯುತ್ತಲೇ ಬಂದಿದ್ದಾರೆ.
ಸುಪ್ರೀಂ ಕೋರ್ಟ್ ಮಾತ್ರವಲ್ಲ, ಉದ್ಯೋಗದಾತರು ಜನರ ಶ್ರಮವನ್ನು ಹೀಗಳೆದು ಮಾತಾಡುತ್ತಲೇ ಬಂದಿದ್ದಾರೆ. ಈ ಹಿಂದೆ, ಉದ್ಯೋಗಿಗಳು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು. ಎಷ್ಟು ಹೊತ್ತು ಮನೆಯಲ್ಲಿ ಪತಿ ಪತ್ನಿಯ ಮುಖ ನೋಡಿಕೊಂಡು ಕೂತಿರ್ತೀರಾ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ L&T ಅಧ್ಯಕ್ಷ ಎಸ್. ಎನ್ ಸುಬ್ರಹ್ಮಣ್ಯನ್, “ಪ್ರಸ್ತುತ ದೇಶದಲ್ಲಿ ಕಾರ್ಮಿಕರು ಕೆಲಸ ಮಾಡಲು ಇಚ್ಛಿಸುತ್ತಿಲ್ಲ. ಕಲ್ಯಾಣ ಯೋಜನೆಗಳಿಂದಾಗಿ ಕಾರ್ಮಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಗೊಳ್ಳಲು ಹಿಂಜರಿಯುತ್ತಿದ್ದಾರೆ” ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ.
ಕಲ್ಯಾಣ ಯೋಜನೆಗಳನ್ನು ಬಿಟ್ಟಿ ಯೋಜನೆಗಳು ಎನ್ನುವ ಇಂತಹ ಮನಸ್ಥಿತಿಗಳಿಗೆ ಜನರ ಬದುಕು ಅರ್ಥವಾಗಲು ಹೇಗೆ ಸಾಧ್ಯ? ತಾವು ದುಡಿದು ಸರ್ಕಾರಕ್ಕೆ ಕಟ್ಟುವ ತೆರಿಗೆ ಹಣ ಮತ್ತೆ ತಮಗೆ ಸಿಗುವುದನ್ನೇ ತಪ್ಪೆಂದು ನೋಡುವವರಿಗೆ ಜನರೇ ಉತ್ತರಿಸಬೇಕಿದೆ.