ಕಾಂಗ್ರೆಸ್ ನಾಯಕರೊಬ್ಬರನ್ನು ಮಧ್ಯರಾತ್ರಿ ಕಳೆದರೂ ಸುಮಾರು 15 ಗಂಟೆಗಳ ಕಾಲ ನಿರಂತರ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಮಾನವೀಯ ವರ್ತನೆಯನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಅದರ ತನಿಖಾ ವಿಧಾನದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದೆ.
ಹೇಳಿಕೆ ನೀಡುವಂತೆ ಇ.ಡಿ ವ್ಯಕ್ತಿಯೊಬ್ಬರ ಮೇಲೆ ಅಕ್ಷರಶಃ ಒತ್ತಡವನ್ನು ಹೇರಿದ್ದು ಆಘಾತಕಾರಿಯಾಗಿದೆ ಎಂದು ಗುರುವಾರ ವಿಚಾರಣೆ ಸಂದರ್ಭದಲ್ಲಿ ಹೇಳಿದ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಎ.ಜಿ.ಮಸಿಹ್ ಅವರ ಪೀಠವು, ಕಾನೂನುಬಾಹಿರ ಗಣಿಗಾರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿಯಿಂದ ಹರಿಯಾಣದ ಮಾಜಿ ಕಾಂಗ್ರೆಸ್ ಶಾಸಕ ಸುರೇಂದ್ರ ಪನ್ವಾರ್ ಅವರ ಬಂಧನವನ್ನು ರದ್ದುಗೊಳಿಸಿದ್ದನ್ನು ಎತ್ತಿ ಹಿಡಿಯಿತು.
ಇ.ಡಿ ಜುಲೈನಲ್ಲಿ ಸುಮಾರು 15 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಮಧ್ಯರಾತ್ರಿ 1.40ಕ್ಕೆ ಪನ್ವಾರ್‌ರನ್ನು ಬಂಧಿಸಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪನ್ವಾರ್ ಅವರ ಬಂಧನವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಇ.ಡಿ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ಗೆಲುವನ್ನು ಮಾರ್ಕೆಟಿಂಗ್ ಮಾಡಿಕೊಳ್ಳಬೇಕೇ ಸರ್ಕಾರ?
ಇ.ಡಿ ಪರ ವಕೀಲ ರೆಹೆಬ್ ಹುಸೇನ್ ಅವರು, ಹೈಕೋರ್ಟ್ ಪನ್ವಾರ್‌ರನ್ನು 14 ಗಂಟೆ 40 ನಿಮಿಷಗಳ ಕಾಲ ನಿರಂತರವಾಗಿ ಪ್ರಶ್ನಿಸಲಾಗಿತ್ತು ಎಂದು ತನ್ನ ಆದೇಶದಲ್ಲಿ ತಪ್ಪಾಗಿ ದಾಖಲಿಸಿದೆ. ವಿಚಾರಣೆ ಸಂದರ್ಭದಲ್ಲಿ ಅವರಿಗೆ ಭೋಜನ ವಿರಾಮವನ್ನು ನೀಡಲಾಗಿತ್ತು ಎಂದು ಹೇಳಿದರು. ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ಜನರನ್ನು ನಸುಕಿನ ವೇಳೆಯಲ್ಲಿ ವಿಚಾರಣೆಗೆ ಒಳಪಡಿಸದಿರಲು ಇ.ಡಿ ಈಗಾಗಲೇ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಸುಪ್ರಿಂ ಕೋರ್ಟ್‌ಗೆ ಮನವರಿಕೆ ಮಾಡಿದರು.
ಇ.ಡಿ ವಾದವನ್ನು ತಿರಸ್ಕರಿಸಿದ ಪೀಠವು, ವ್ಯಕ್ತಿಗೆ ವಿರಾಮವನ್ನು ನೀಡದೆ ಇಷ್ಟೊಂದು ದೀರ್ಘ ಅವಧಿಗೆ ವಿಚಾರಣೆ ನಡೆಸುವ ಮೂಲಕ ಚಿತ್ರಹಿಂಸೆ ನೀಡಲು ಹೇಗೆ ಸಾಧ್ಯ ಎಂದು ತನಿಖಾ ಸಂಸ್ಥೆಯನ್ನು ಪ್ರಶ್ನಿಸಿತು. ಆದಾಗ್ಯೂ ಹೈಕೋರ್ಟ್ ಆದೇಶವು ಜಾಮೀನು ಮಂಜೂರು ಮಾಡುವ ವಿಷಯಕ್ಕೆ ಮಾತ್ರ ಸಂಬಂಧಿಸಿವೆಯೇ ಹೊರತು ಪ್ರಕರಣದ ಅರ್ಹತೆಗಲ್ಲ ಎಂದು ಅದು ಸ್ಪಷ್ಟಪಡಿಸಿತು.
ಜು.19ರಂದು ಬೆಳಿಗ್ಗೆ 11 ಗಂಟೆಗೆ ಇ.ಡಿ ಕಚೇರಿಯಲ್ಲಿ ಹಾಜರಾಗಿದ್ದ ಪನ್ವಾರ್‌ರನ್ನು ಜು.21ರ ಮಧ್ಯರಾತ್ರಿ 1.40 ಗಂಟೆಯವರಗೆ ನಿರಂತರವಾಗಿ ವಿಚಾರಣೆ ನಡೆಸಿದ್ದು ತನಿಖಾ ಸಂಸ್ಥೆಯ ಅಮಾನವೀಯ ನಡೆಯಾಗಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು. ಹಾಗೆಯೇ ಇ.ಡಿ ತನ್ನ ತನಿಖಾ ವಿಧಾನವನ್ನು ಬದಲಿಸಿಕೊಳ್ಳುವ ಅಗತ್ಯವಿದೆ ಎಂದು ನಿರ್ದೇಶನ ನೀಡಿತ್ತು.
