ದೇಶಾದ್ಯಂತ ಎಲ್ಲಾ ನ್ಯಾಯಾಲಯ ಆವರಣಗಳು ಮತ್ತು ನ್ಯಾಯಮಂಡಳಿಗಳಲ್ಲಿ ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಇರುವಂತೆ ಅಲ್ಪಸಂಖ್ಯಾತರು, ವಿಶೇಷ ಚೇತನರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಬೇಕು ಎಂದು ಬುಧವಾರ ಸುಪ್ರೀಂ ಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ಈ ಆದೇಶವನ್ನು ನೀಡಿದೆ. “ಶೌಚಾಲಯಗಳು ಕೇವಲ ಅನುಕೂಲತೆಯ ವಿಷಯವಲ್ಲ, ಬದಲಾಗಿ ಮಾನವ ಹಕ್ಕುಗಳ ಒಂದು ಅಂಶವಾಗಿರುವ ಮೂಲಭೂತ ಅವಶ್ಯಕತೆಯಾಗಿದೆ” ಎಂದು ಪೀಠ ಹೇಳಿದೆ.
ಇದನ್ನು ಓದಿದ್ದೀರಾ? ಅಲಹಾಬಾದ್ ಹೈಕೋರ್ಟ್‌ನ ಕಾರ್ಯನಿರ್ವಹಣೆ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ
ಎಲ್ಲಾ ಕೋರ್ಟ್, ಮೊದಲಾದ ನ್ಯಾಯಾಂಗ ವೇದಿಕೆಯಲ್ಲಿ ಎಲ್ಲರಿಗೂ ಸಾರ್ವಜನಿಕ ಶೌಚಾಲಯಗಳು ನಿರ್ಮಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ರಾಜೀವ್ ಕಲಿತಾ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ.
“ಸರಿಯಾದ ನೈರ್ಮಲ್ಯ ಇರುವ ಶೌಚಾಲಯವನ್ನು ಉಪಯೋಗಿಸುವುದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಗುರುತಿಸಲಾಗಿದೆ. ಇದು ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುತ್ತದೆ. ಆರೋಗ್ಯಕರ ವಾತಾವರಣಕ್ಕಾಗಿ ಮತ್ತು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಲು ರಂತರವಾಗಿ ಶ್ರಮಿಸುವುದು ಸಂವಿಧಾನದ ಭಾಗ IVರ ಅಡಿಯಲ್ಲಿ ಪ್ರತಿಯೊಂದು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಕರ್ತವ್ಯವಾಗಿದೆ” ಎಂದು ಸುಪ್ರೀಂ ಕೋರ್ಟ್ ಪೀಠ ತಿಳಿಸಿದೆ.
“ಮಹಿಳೆಯರು, ಪುರುಷರು, ವಿಶೇಷ ಚೇತನರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಕೋರ್ಟ್ ಆವರಣದಲ್ಲಿ ಪ್ರತ್ಯೇಕವಾದ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸುವುದು ಆಯಾ ಸರ್ಕಾರ ಅಥವಾ ಸ್ಥಳೀಯ ಆಡಳಿತದ ಜವಾಬ್ದಾರಿ. ಹಾಗೆಯೇ ಶೌಚಾಲಯಗಳ ನೈರ್ಮಲ್ಯ ಕಾಪಾಡುವುದು ಕೂಡಾ ಅತ್ಯಗತ್ಯ” ಎಂದು ರಿಟ್ ಅರ್ಜಿ ವಿಚಾರಣೆ ನಡೆಸಿದ ಪೀಠ ಅಭಿಪ್ರಾಯಿಸಿದೆ.
ಆದರೆ ನಮ್ಮನ್ನು ಕೂಡಾ ಮಹಿಳೆಯರಾಗಿ ಪರಿಗಣಿಸಬೇಕು, ನಮಗೂ ಮಹಿಳೆಯರ ಶೌಚಾಲಯವನ್ನೇ ಬಳಸಲು ಅವಕಾಶ ನೀಡಬೇಕು, ನಾವು ಕೂಡಾ ಮಹಿಳೆಯರು ಎಂಬುದು ಲಿಂಗತ್ವ ಅಲ್ಪಸಂಖ್ಯಾತರ ವಾದವಾಗಿದೆ.
