ಉತ್ತರ ಪ್ರದೇಶದ ಕಾವಡ್ ಯಾತ್ರೆಯ ಮಾರ್ಗದುದ್ದಕ್ಕೂ ಅಂಗಡಿಗಳ ಮಾಲೀಕರ ಮತ್ತು ನೌಕರರ ಹೆಸರನ್ನು ಪ್ರದರ್ಶಿಸಲು ಸೂಚಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಸುಪ್ರೀಂ ಕೋರ್ಟ್ ಸೋಮವಾರ ಮಧ್ಯಂತರ ಆದೇಶವನ್ನು ಹೊರಡಿಸಿದ್ದು, “ಮಾಲೀಕರು ತಮ್ಮ ಅಂಗಡಿಯಲ್ಲಿ ಯಾವ ರೀತಿಯ ಆಹಾರ ಲಭ್ಯವಿದೆ ಎಂಬುವುದನ್ನು ಮಾತ್ರ ಪ್ರದರ್ಶಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಅಸೋಸಿಯೇಷನ್ ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಎಂಬ ಎನ್‌ಜಿಒ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು ನಡೆಸಿದ್ದು ‘ನಾಮಫಲಕ ಆದೇಶ’ ಹೊರಡಿಸಿದ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ವಿಚಾರಣೆಯ ಸಂದರ್ಭದಲ್ಲಿ, ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದು, “ಯಾವುದೇ ಕಾನೂನಿನ ಅಧಿಕಾರವಿಲ್ಲದೆ ಆದೇಶವನ್ನು ಹೊರಡಿಸಲಾಗಿದೆ” ಎಂದು ಹೇಳಿದ್ದು, ನಾಮಫಲಕ ಪ್ರದರ್ಶಿಸುವ ಆದೇಶವನ್ನು ‘ಕಣ್ಣಿಗೆ ಮಣ್ಣೆರಚುವ’ ಆದೇಶ ಎಂದು ಕರೆದಿದ್ದಾರೆ.
ಇದನ್ನು ಓದಿದ್ದೀರಾ? ಕಾವಡ್ ಯಾತ್ರೆ ವಿವಾದ | ಸುಪ್ರೀಂ ಕೋರ್ಟ್ ಕದ ತಟ್ಟಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ
“ಇದು ಕಾವಡ್ ಯಾತ್ರೆ ನೆಪದಲ್ಲಿ ಕಣ್ಣಿಗೆ ಮಣ್ಣೆರಚುವ ಆದೇಶವಾಗಿದೆ. ಯಾವ ಅಂಗಡಿ ಮಾಲೀಕರು ತಮ್ಮ ಮತ್ತು ತಮ್ಮ ನೌಕರರ ಹೆಸರನ್ನು ಪ್ರದರ್ಶಿಸುವುದಿಲ್ಲವೊ ಅವರಿಗೆ ದಂಡವನ್ನು ವಿಧಿಸಲಾಗುತ್ತದೆ. ನಾವು ಸಾವಿರಾರು ಕಿಲೋಮೀಟರ್‌ಗಳಿಗೆ ಅನ್ವಯವಾಗುವ ಆದೇಶದ ಬಗ್ಗೆ ಮಾತನಾಡುತ್ತಿದ್ದೇವೆ. ಈ ಅಂಗಡಿಗಳಲ್ಲಿ ಹೆಚ್ಚಿನವು ಟೀ ಅಂಗಡಿಗಳು ಮತ್ತು ಕೆಲವು ಹಣ್ಣಿನ ಅಂಗಡಿಗಳಾಗಿವೆ. ಇದು ಆರ್ಥಿಕ ಸಾವು” ಎಂದು ಹೇಳಿದರು.
“ಈ ವಿಷಯವು ಹೆಚ್ಚು ಮುಖ್ಯವಾಗಿದೆ. ಜನರು ಹೋಟೆಲ್‌ಗಳಲ್ಲಿರುವ ಮೆನುವನ್ನು ನೋಡಿಕೊಂಡು ಆ ಹೋಟೆಲ್, ರೆಸ್ಟೋರೆಂಟ್‌ಗೆ ಭೇಟಿ ನೀಡುತ್ತಾರೆಯೇ ಹೊರತು ಅಲ್ಲಿ ಯಾರೆಲ್ಲ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನೋಡಿಕೊಂಡು ಭೇಟಿ ನೀಡುವುದಿಲ್ಲ. ಜನರ ಗುರುತನ್ನು ಬಹಿರಂಗಪಡಿಸುವುದೇ ಈ ಆದೇಶದ ಹಿಂದಿರುವ ಉದ್ದೇಶವಾಗಿದೆ. ಇದು ನಾವು ಸಂವಿಧಾನದಲ್ಲಿ ಕಲ್ಪಿಸಿದ ಗಣರಾಜ್ಯವಲ್ಲ” ಎಂದು ವಾದಿಸಿದ್ದಾರೆ.
“ಯಾತ್ರೆಗಳು ದಶಕಗಳಿಂದ ನಡೆಯುತ್ತಿದ್ದು, ಎಲ್ಲಾ ಧರ್ಮದ ಜನರು ತಮ್ಮ ಯಾತ್ರೆಯಲ್ಲಿ ಕನ್ವರಿ ಯಾರಿಗೆ ಸಹಾಯ ಮಾಡುತ್ತಿದ್ದಾರೆ. ಈ ಆದೇಶ ಇದು ಗುರುತಿನ ಸೇರ್ಪಡೆಗೆ ಸಂಬಂಧಿಸಿದೆ. ಕಾನೂನಿನ ಯಾವುದೇ ಅಧಿಕಾರವಿಲ್ಲದೆ ಆದೇಶವನ್ನು ಹೊರಡಿಸಲಾಗಿದೆ. ರೆಸ್ಟೋರೆಂಟ್‌ಗೆ ನೀಡುವ ಹೆಸರಿಗೂ ಅಲ್ಲಿರುವ ಆಹಾರ ಖಾದ್ಯ ಅಥವಾ ವಸ್ತುಗಳಿಗೂ ಏನೂ ಸಂಬಂಧ, ಈ ಸಂಬಂಧದ ಹಿಂದಿನ ತಾರ್ಕಿಕತೆ ಏನು” ಎಂದು ಪ್ರಶ್ನಿಸಿದರು.
ಈ ಕಾವಡ್ ಯಾತ್ರೆ ನಡೆಯುವ ಮಾರ್ಗದಲ್ಲಿರುವ ಎಲ್ಲಾ ಅಂಗಡಿಗಳ ಮಾಲೀಕರ ಹೆಸರನ್ನು ಪ್ರದರ್ಶಿಸಲು ಮುಜಫರ್‌ನಗರ ಪೊಲೀಸರು ಆದೇಶ ನೀಡಿದ ಕೆಲವು ದಿನಗಳ ನಂತರ, ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ರಾಜ್ಯಾದ್ಯಂತ ಈ ವಿವಾದಾತ್ಮಕ ಆದೇಶವನ್ನು ವಿಸ್ತರಿಸಿದೆ. ಈ ಆದೇಶಕ್ಕೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳ ಈ ಆದೇಶದ ವಿರುದ್ಧವಾಗಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
Supreme Court stays governments’ directive asking eateries on Kanwariya Yatra route to put owners’ names and issues notices to Uttar Pradesh, Uttarakhand and Madhya Pradesh governments on petitions challenging their directive asking eateries on Kanwariya Yatra route to put… pic.twitter.com/6GQKwY8OK4
— ANI (@ANI) July 22, 2024