ಕೊಯಮತ್ತೂರಿನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರು ನಡೆಸುತ್ತಿರುವ ಇಶಾ ಫೌಂಡೇಶನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ತಮಿಳುನಾಡು ಪೊಲೀಸರಿಗೆ ಸುಪ್ರೀಂ ಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
ತನ್ನ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳ ವಿವರಗಳನ್ನು ಸಂಗ್ರಹಿಸುವಂತೆ ಕೊಯಮತ್ತೂರು ಪೊಲೀಸರಿಗೆ ನಿರ್ದೇಶನ ನೀಡಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇಶಾ ಫೌಂಡೇಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮುಂದೆ ಯಾವುದೇ ಕ್ರಮ ಕೈಗೊಳ್ಳದಂತೆ ತಮಿಳುನಾಡು ಪೊಲೀಸರಿಗೆ ಸೂಚಿಸಿದೆ.
ಅಲ್ಲದೆ ಇಶಾ ಫೌಂಡೇಶನ್‌ನಲ್ಲಿರುವ ತಮ್ಮ ಇಬ್ಬರು ಪುತ್ರಿಯರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಡಾ ಎಸ್ ಕಾಮರಾಜ್ ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ತನಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್‌ಗೆ ಸೂಚಿಸಿದೆ.
ಮದ್ರಾಸ್ ಹೈಕೋರ್ಟ್ ನೀಡಿದ ನಿರ್ದೇಶನಗಳನ್ನು ಅನುಸರಿಸಿ ತಮಿಳುನಾಡು ಪೊಲೀಸರು ಇಶಾ ಫೌಂಡೇಶನ್ ಮೇಲೆ ದಾಳಿ ನಡೆಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತಲ್ಲಿ ಅಭಿವೃದ್ಧಿ, ಮಾಧ್ಯಮಗಳಲ್ಲಿ ಬ್ರ್ಯಾಂಡ್ ಬೆಂಗಳೂರು
ಇಶಾ ಫೌಂಡೇಶನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಹೈಕೋರ್ಟ್ ಆದೇಶಕ್ಕೆ ತಡೆ ಕೋರಿದರು ಮತ್ತು ಸುಮಾರು 500 ಪೊಲೀಸ್ ಅಧಿಕಾರಿಗಳು ಪ್ರತಿಷ್ಠಾನದ ಆಶ್ರಮದ ಮೇಲೆ ದಾಳಿ ನಡೆಸಿದ್ದಾರೆ ಮತ್ತು ಪ್ರತಿ ಮೂಲೆಮೂಲೆಯಲ್ಲೂ ಶೋಧ ನಡೆಸುತ್ತಿದ್ದಾರೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ, ಇಶಾ ಫೌಂಡೇಶನ್‌ನಲ್ಲಿ ತಮ್ಮ ಇಬ್ಬರು ಪುತ್ರಿಯರು ಅಕ್ರಮ ಬಂಧನದಲ್ಲಿದ್ದಾರೆ ಎಂದು ಆರೋಪಿಸಿ ಅವರ ತಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಆ ಇಬ್ಬರು ಮಹಿಳೆಯರಿಂದ ವಿವರಗಳನ್ನು ಪಡೆಯಲು ಪ್ರಯತ್ನಿಸಿತು.
