ಸರ್ಕಾರಿ ಶಾಲೆಗಳಿಗೆ ಹೊರಗಿನವರು, ಪತ್ರಕರ್ತರು, ಯೂಟ್ಯೂಬರ್‌ಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠವು, ಸಂವಿಧಾನದ 32ನೇ ವಿಧಿಯಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ತಾವು ಸಿದ್ಧರಿಲ್ಲ ಎಂದು ತಿಳಿಸಿದೆ.
ಏನಿದು ವಿವಾದ?
ರಾಜಸ್ಥಾನ ಸರ್ಕಾರ ಆಗಸ್ಟ್ 16ರಂದು ಹೊರಡಿಸಿದ ಸುತ್ತೋಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಹೊರಗಿನವರು ಪ್ರವೇಶಿಸಲು ಶಾಲಾ ಮುಖ್ಯಸ್ಥರಿಂದ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿತ್ತು. ಶಾಲೆಯೊಳಗೆ ಫೋಟೊ, ವಿಡಿಯೊ, ಸಂದರ್ಶನ, ಆಡಿಯೊ ರೆಕಾರ್ಡಿಂಗ್ ಹಾಗೂ ಲೈವ್‌ಸ್ಟ್ರೀಮಿಂಗ್ ಮಾಡಲು ಕೂಡ ಲಿಖಿತ ಅನುಮತಿ ಅಗತ್ಯ ಎಂದು ಸೂಚಿಸಿತ್ತು.
ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯ ಮೂಲ ಶಿಕ್ಷಣಾಧಿಕಾರಿಯೂ ಆಗಸ್ಟ್ 19ರಂದು ಇದೇ ರೀತಿಯ ಆದೇಶ ಹೊರಡಿಸಿದ್ದರು. ಸರ್ಕಾರಿ ಶಾಲೆಗಳಿಗೆ ಹೊರಗಿನವರು, ಯೂಟ್ಯೂಬರ್‌ಗಳು ಮತ್ತು ಸಾಮಾಜಿಕ ಮಾಧ್ಯಮದೊಂದಿಗೆ ಸಂಪರ್ಕ ಹೊಂದಿರುವವರು ಅನುಮತಿಯಿಲ್ಲದೆ ಪ್ರವೇಶಿಸುವುದು ಅಥವಾ ಫೋಟೊ-ವಿಡಿಯೊ ಚಿತ್ರೀಕರಿಸುವುದನ್ನು ನಿರ್ಬಂಧಿಸಲಾಗಿತ್ತು. ಅಜಂಗಢ, ಬಲಿಯಾ, ಬಸ್ತಿ, ಬಲರಾಮ್‌ಪುರ್, ಶಾಮ್ಲಿ ಮತ್ತು ಆಗ್ರಾ ಸೇರಿದಂತೆ ಇತರ ಜಿಲ್ಲೆಗಳಲ್ಲೂ ಇದೇ ರೀತಿಯ ಸೂಚನೆಗಳನ್ನು ನೀಡಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
CJP ಅಭಿಯಾನದ ಬೆನ್ನಲ್ಲೇ ನಿರ್ಬಂಧ
ಈ ನಿರ್ಬಂಧಗಳು ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ನಡೆಸುತ್ತಿರುವ ‘ಸ್ಕೂಲ್ ಠೀಕ್ ಕರೋ’ ಅಭಿಯಾನದ ಹಿನ್ನೆಲೆಯಲ್ಲಿ ಮಹತ್ವ ಪಡೆದಿವೆ. ಸರ್ಕಾರಿ ಶಾಲೆಗಳ ಮೂಲಸೌಕರ್ಯದ ಕೊರತೆಗಳನ್ನು ದಾಖಲಿಸಿ ಸಾರ್ವಜನಿಕರ ಗಮನಕ್ಕೆ ತರುವುದು ಈ ಅಭಿಯಾನದ ಉದ್ದೇಶವಾಗಿದೆ.
CJP ಸ್ವಯಂಸೇವಕರು ವಿವಿಧ ರಾಜ್ಯಗಳ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಶಾಲಾ ಕಟ್ಟಡಗಳ ಸ್ಥಿತಿ, ತರಗತಿ ಕೊಠಡಿಗಳು, ಶೌಚಾಲಯ, ಕುಡಿಯುವ ನೀರು, ವಿದ್ಯುತ್, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಮೂಲಸೌಕರ್ಯಗಳ ಕುರಿತು ಫೋಟೊ ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ಹೊರಗಿನವರ ಪ್ರವೇಶ ಹಾಗೂ ಚಿತ್ರೀಕರಣಕ್ಕೆ ನಿರ್ಬಂಧ ವಿಧಿಸಿರುವುದು ಸಾರ್ವಜನಿಕ ಹಿತದ ದಾಖಲೀಕರಣಕ್ಕೆ ಅಡ್ಡಿಯಾಗುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು.
ಈ ನಿರ್ಬಂಧಗಳು ಸಂವಿಧಾನದ 14ನೇ ವಿಧಿಯ ಸಮಾನತೆಯ ಹಕ್ಕು, 19(1)(a)ರ ಅಭಿವ್ಯಕ್ತಿ ಸ್ವಾತಂತ್ರ್ಯ, 19(1)(g) ಹಾಗೂ 21ನೇ ವಿಧಿಯ ಹಕ್ಕುಗಳಿಗೆ ವಿರುದ್ಧವಾಗಿವೆ ಎಂದು ಅರ್ಜಿದಾರರಾದ ಪ್ರಿಯಾ ಮಿಶ್ರಾ ವಾದಿಸಿದ್ದರು.
ಮಕ್ಕಳ ಗೌಪ್ಯತೆ, ಘನತೆ ಮತ್ತು ಸುರಕ್ಷತೆಯನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂಬುದನ್ನು ಒಪ್ಪಿಕೊಂಡಿರುವ ಅರ್ಜಿದಾರರು, ಮಕ್ಕಳ ಮುಖ ಅಥವಾ ಗುರುತನ್ನು ದಾಖಲಿಸುವುದಕ್ಕೂ ಶಾಲೆಯ ಭೌತಿಕ ಸ್ಥಿತಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ದಾಖಲಿಸುವುದಕ್ಕೂ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶೈಕ್ಷಣಿಕ ವ್ಯವಸ್ಥೆ, ನೇಮಕಾತಿ ಪರೀಕ್ಷೆಯಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯ: ಸಚಿವ ಮಧು ಬಂಗಾರಪ್ಪ
ತರಗತಿ ಕೊಠಡಿಗಳು, ಶಾಲಾ ಕಟ್ಟಡಗಳು, ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಮತ್ತು ಮಧ್ಯಾಹ್ನದ ಬಿಸಿಯೂಟದಂತಹ ಮೂಲಸೌಕರ್ಯಗಳ ಸ್ಥಿತಿಯನ್ನು ದಾಖಲಿಸುವುದನ್ನು ಮಕ್ಕಳ ಸುರಕ್ಷತೆಯ ಹೆಸರಿನಲ್ಲಿ ಸಂಪೂರ್ಣವಾಗಿ ನಿರ್ಬಂಧಿಸಬಾರದು ಎಂಬುದು ಅರ್ಜಿಯ ವಾದವಾಗಿತ್ತು. ಸಾರ್ವಜನಿಕ ಹಿತದ ದಾಖಲೀಕರಣಕ್ಕೆ ಯಾವುದೇ ನಿಯಂತ್ರಣ ಹೇರಬೇಕಾದರೂ ಅದು ಸಮಂಜಸತೆ, ಅಗತ್ಯತೆ ಮತ್ತು ಪ್ರಮಾಣಬದ್ಧತೆ ಎಂಬ ಮಾನದಂಡಗಳನ್ನು ಪೂರೈಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಆದರೆ, ಸುಪ್ರೀಂ ಕೋರ್ಟ್ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿರುವುದರಿಂದ ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಜಾರಿಗೊಳಿಸಿರುವ ಈ ಪ್ರವೇಶ ಹಾಗೂ ಚಿತ್ರೀಕರಣ ನಿರ್ಬಂಧಗಳ ವಿರುದ್ಧದ ಸವಾಲಿಗೆ ಈ ಹಂತದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ದೊರಕಿಲ್ಲ.





