ರೈಲ್ವೇ ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಎದುರಾಗುತ್ತಿರುವ ತಾಂತ್ರಿಕ ದೋಷಗಳನ್ನು ಗುರುತಿಸಲು ಮತ್ತು ಸರಿಪಡಿಸಲು ‘ಐಆರ್‌ಸಿಟಿಸಿ ತತ್ಕಾಲ್ ಬುಕಿಂಗ್ ವ್ಯವಸ್ಥೆ’ಯ ಸಂಪೂರ್ಣ ಲೆಕ್ಕಪರಿಶೋಧನೆ ನಡೆಸಲುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಅರ್ಜಿ ಆಲಿಸಲು ನಿರಾಕರಿಸಿದೆ.
ರೈಲು ಪ್ರಯಾಣಕ್ಕೆ ಒಂದು ದಿನ ಮೊದಲು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಅವಕಾಶವಿದೆ. ಈ ವರ್ಗದ ಅಡಿಯಲ್ಲಿ ಸೀಮಿತ ಸಂಖ್ಯೆಯ ಸೀಟುಗಳನ್ನು ನೀಡಲಾಗುತ್ತದೆ. ಆದಾಗ್ಯೂ, ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷವೂ ಸೇರಿದಂತೆ ನಾನಾ ಸಮಸ್ಯೆಗಳು ಎದುರಾಗುತ್ತಿವೆ ಎಂಬ ಅಭಿಪ್ರಾಯವಿದೆ. ಹೀಗಾಗಿ, ಅರ್ಜಿದಾರರು ಐಆರ್‌ಸಿಟಿಸಿಯಲ್ಲಿನ ತತ್ಕಾಲ್ ಬುಕಿಂಗ್ ವ್ಯವಸ್ಥೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ಕೇಂದ್ರ ಸರ್ಕಾರ ನಡೆಸಬೇಕು ಮತ್ತು ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ವಾದಿಸಿ, ಅರ್ಜಿ ಸಲ್ಲಿಸಿದ್ದರು.
ಆದರೆ, ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅರ್ಜಿಯನ್ನು ತರಿಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ಪೀಠವು, ‘ಸಮಸ್ಯೆಯ ಕುರಿತು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು’ ಎಂದು ಅರ್ಜಿದಾರರಿಗೆ ಸೂಚನೆ ನೀಡಿದೆ.
“ಹೈಕೋರ್ಟ್‌ಗೆ ಹೋಗಿ. ನೀವು ಒಂದು ಅಂಶವನ್ನು ಎತ್ತಿದ್ದೀರಿ. ತತ್ಕಾಲ್ ಬುಕಿಂಗ್ ವ್ಯವಸ್ಥೆಯಲ್ಲಿ ಕೆಲವು ಸಮಸ್ಯೆಗಳಿವೆ ಎಂದು ನೀವು ಹೇಳುತ್ತಿದ್ದೀರಿ. ರ್ಜಿಯ ಅರ್ಹತೆಯ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.ದಯವಿಟ್ಟು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ” ಎಂದು ಹೇಳಿದ್ದಾರೆ.
ಅನಧಿಕೃತ ಏಜೆಂಟ್‌ಗಳು, ಸ್ವಯಂಚಾಲಿತ ಬಾಟ್‌ಗಳು ಮತ್ತು ಅಕ್ರಮ ಸಾಫ್ಟ್‌ವೇರ್ ಕಾರ್ಯಕ್ರಮಗಳ ಮೂಲಕ ತತ್ಕಾಲ್ ಬುಕಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆಯಾಗುತ್ತಿದೆ. ಇದನ್ನು ತಡೆಯಲು ಬಲವಾದ ಸೈಬರ್-ಭದ್ರತಾ ಕ್ರಮಗಳನ್ನು ಜಾರಿಗೆ ತರಲು ಭಾರತೀಯ ರೈಲ್ವೇ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದರು.