ಬಿಹಾರ ಸರ್ಕಾರವು ಹಿಂದುಳಿದ ವರ್ಗ ಹಾಗೂ ಎಸ್ಸಿ, ಎಸ್ಟಿ ಸಮುದಾಯದವರಿಗೆ ನೀಡಿದ್ದ ಶೇ 65 ರಷ್ಟು ಮೀಸಲಾತಿಯ ಆದೇಶವನ್ನು ರದ್ದುಗೊಳಿಸಿದ್ದ ಪಾಟ್ನಾ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಬಿಹಾರ ಸರ್ಕಾರ ಶೇ.50 ರಷ್ಟಿದ್ದ ಮೀಸಲಾತಿ ಮಿತಿಯನ್ನು ಶೇ. 65ಕ್ಕೆ ಹೆಚ್ಚಿಸಿದ್ದ ಆದೇಶವನ್ನು ಪಾಟ್ನಾ ಹೈಕೋರ್ಟ್ ರದ್ದುಗೊಳಿಸಿತ್ತು. ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ಬಿಹಾರ ಸರ್ಕಾರ ಸುಪ್ರಿಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಬಿಹಾರ ವಿಧಾನಸಭೆಯು 2023ರಲ್ಲಿ ಅಂಗೀಕರಿಸಿದ್ದ ಮಸೂದೆಯನ್ನು ಪಾಟ್ನಾ ಹೈಕೋರ್ಟ್‌ನ ವಿಭಾಗೀಯ ಪೀಠ ಜೂನ್ 20ರಂದು ರದ್ದುಗೊಳಿಸಿತ್ತು. ರಾಜ್ಯ ಸರ್ಕಾರದ ನಿರ್ಧಾರವು ಸಂವಿಧಾನದ ವಿಧಿ 14,15 ಹಾಗೂ 16 ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು.
ಬಿಹಾರ ಸರ್ಕಾರ ಮಂಡಿಸಿದ್ದ ಮಸೂದೆಯನ್ವಯ ಪರಿಶಿಷ್ಟ ಜಾತಿ ಸಮುದಾಯ ಶೇ.20, ಒಬಿಸಿ ಮತ್ತು ಅತೀ ಹಿಂದುಳಿದ ಸಮುದಾಯ ಶೇ.43 ಮೀಸಲಾತಿ, ಎಸ್ಟಿ ಸಮುದಾಯ ಶೇ.2 ಮೀಸಲಾತಿಗೆ ಅರ್ಹರಾಗಿದ್ದರು. ಈ ಹೆಚ್ಚಳದಿಂದ ಒಬಿಸಿ ಮತ್ತು ಅತೀ ಹಿಂದುಳಿದ ಅಭ್ಯರ್ಥಿಗಳು(ಇಬಿಸಿ) ಶೇ.30 ಮೀಸಲಾತಿ ಹೆಚ್ಚಿಗೆ ಪಡೆಯಲಿದ್ದಾರೆ ಎಂದು ತಿಳಿಸಲಾಗಿತ್ತು.
ಈ ಮೊದಲು ಇಬಿಸಿ ಶೇ.18, ಒಬಿಸಿ ಶೇ.12, ಎಸ್ಸಿ ಶೇ.16 ಹಾಗೂ ಎಸ್ಟಿ ಸಮುದಾಯ ಶೇ.1 ಮೀಸಲಾತಿ ಪಡೆಯುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದೆಲ್ಲ ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುವ ಷಡ್ಯಂತ್ರವೇ?
ರಾಜ್ಯದ ಮಸೂದೆಯಲ್ಲಿ ಈ ಹಿಂದೆ ಹಿಂದುಳಿದ ಮಹಿಳೆಯರಿಗೆ ಕಲ್ಪಿಸಲಾಗಿದ್ದ ಶೇ.3 ಮೀಸಲಾತಿಯನ್ನು ರದ್ದುಪಡಿಸಲಾಗಿತ್ತು. ಹಾಗೆಯೇ ಕೇಂದ್ರ ಸರ್ಕಾರ ಆರ್ಥಿಕ ದುರ್ಬಲ ವರ್ಗಗಳಿಗೆ ನೀಡಿದ್ದ ಶೇ.10 ಮೀಸಲಾತಿಯನ್ನು ಹೊರತುಪಡಿಸಲಾಗಿತ್ತು.
ಬಿಹಾರ ರಾಜ್ಯಾದ್ಯಂತ ನಡೆಸಿದ ಜಾತಿ ಸಮೀಕ್ಷೆಯ ಸಂಪೂರ್ಣ ವರದಿಯನ್ನು ಸರ್ಕಾರ ಮಂಡಿಸಿದ ಕೆಲವೇ ಗಂಟೆಗಳ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಸೂದೆಯನ್ನು ಪ್ರಸ್ತಾಪಿಸಿದ್ದರು. ಬಿಹಾರದ 13.1 ಕೋಟಿ ಜನರಲ್ಲಿ ಶೇ. 36 ಜನರು ಇಬಿಸಿ ಮತ್ತು ಶೇ. 27.1 ಮಂದಿ ಒಬಿಸಿ ಸಮುದಾಯಕ್ಕೆ ಸೇರಿದ್ದಾರೆ ಎಂದು ವರದಿ ಹೇಳಿತ್ತು.
ಉಳಿದವರಲ್ಲಿ ಶೇ.19.7ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜನಸಂಖ್ಯೆ ಶೇ.1.7 ರಷ್ಟಿದೆ. ಸಾಮಾನ್ಯ ವರ್ಗದ ಜನಸಂಖ್ಯೆ 15.5 ಪ್ರತಿಶತವನ್ನು ಹೊಂದಿದೆ ಎಂದು ವರದಿ ಹೇಳಿತ್ತು.
ಇದರರ್ಥ ಬಿಹಾರದ ಶೇಕಡ 60 ಕ್ಕಿಂತ ಹೆಚ್ಚು ಜನರು ಒಬಿಸಿ ಅಥವಾ ಇಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸರ್ಕಾರದ ವರದಿಯಲ್ಲಿ ಶೇ.42 ಎಸ್ಸಿ ಮತ್ತು ಎಸ್ಟಿ ಸಮುದಾಯ ಬಡತನ ರೇಖೆಗಿಂತ ಕೆಳಗಿದ್ದಾರೆ. ಈ ಸಮುದಾಯದ ಶೇ. 34 ಮಂದಿಯ ಮಾಸಿಕ ಆದಾಯ 6 ಸಾವಿರ ರೂ.ಕ್ಕಿಂತ ಕಡಿಮೆಯಿದೆ.
