ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ, “ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು. ಇಲ್ಲಿ ಯಾರೂ ವಿವಿಐಪಿ ಅಲ್ಲ,” ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಹೇಳಿಕೆ ನೀಡಿದೆ. ಹಾಗೆಯೇ ರಾಹುಲ್ ಗಾಂಧಿ ಪ್ರಕರಣದಲ್ಲಿ ರಿಜಿಸ್ಟ್ರಿಯಿಂದ ವಿವಿಐಪಿ ಆತಿಥ್ಯ ಆರೋಪವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಭಾರತ ಮತ್ತು ಚೀನಾ ಸೇನೆಗಳ ನಡುವೆ ನಡೆದ ಗಲ್ವಾನ್ ಸಂಘರ್ಷ ಹಾಗೂ ಭಾರತೀಯ ಯೋಧರ ಕುರಿತು ರಾಹುಲ್ ಗಾಂಧಿ ಅವರು 2022ರ ‘ಭಾರತ್ ಜೋಡೋ ಯಾತ್ರೆ’ ಸಂದರ್ಭದಲ್ಲಿ ನೀಡಿರುವ ಹೇಳಿಕೆಯನ್ನು ಪ್ರಶ್ನಿಸಿ, ಗಡಿ ರಸ್ತೆಗಳ ಸಂಸ್ಥೆಯ (BRO) ಮಾಜಿ ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಅವರು ಲಕ್ನೋ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಈ ಹಿಂದೆ ನ್ಯಾಯಾಲಯವು ವಿಚಾರಣೆಗೆ ಮಧ್ಯಂತರ ತಡೆ ನೀಡಿತ್ತು.
ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣ | ಪೂರ್ಣೇಶ್ ಮೋದಿಗೆ ಸುಪ್ರೀಂ ಕೋರ್ಟ್ ನೋಟಿಸ್
ಬುಧವಾರ ಈ ಪ್ರಕರಣದ ಕುರಿತು ದೂರುದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೌರವ್ ಭಾಟಿಯಾ, “ರಾಹುಲ್ ಗಾಂಧಿಯವರಿಗೆ ಮಧ್ಯಂತರ ತಡೆ ಸಿಕ್ಕ ನಂತರ ಕಳೆದ ಐದು ತಿಂಗಳಿನಿಂದ ಈ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿಲ್ಲ. ರಾಹುಲ್ ಗಾಂಧಿ ವಿವಿಐಪಿ ಎಂಬ ಕಾರಣಕ್ಕೆ ನ್ಯಾಯಾಲಯದ ರಿಜಿಸ್ಟ್ರಿ ಪ್ರಕರಣವನ್ನು ಮುಂದೂಡುತ್ತಿದೆ,” ಎಂದು ಆರೋಪಿಸಿದರು. ಅಲ್ಲದೆ, ಪ್ರಕರಣದ ಶೀಘ್ರ ವಿಚಾರಣೆಗೆ ಆಕ್ಷೇಪ ವ್ಯಕ್ತಪಡಿಸಿ ಪ್ರತ್ಯೇಕವಾಗಿ ಪಟ್ಟಿ ಮಾಡುವಂತೆ ಕೋರಿದರು.
ಈ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠವು, “ನ್ಯಾಯಾಲಯದ ಮುಂದೆ ಪ್ರತಿಯೊಬ್ಬರೂ ಸಮಾನರು, ಯಾವುದೇ ವ್ಯತ್ಯಾಸವಿಲ್ಲ” ಎಂದು ಸ್ಪಷ್ಟಪಡಿಸಿದೆ. “ನ್ಯಾಯಾಲಯದ ನಿಗದಿತ ಪ್ರಕ್ರಿಯೆಯನ್ನು ಅನುಸರಿಸಿ. ಪ್ರಕರಣದ ಶೀಘ್ರ ವಿಚಾರಣೆ ಬಯಸುವುದಾದರೆ, ಅದಕ್ಕಾಗಿ ಸೂಕ್ತವಾದ ಅರ್ಜಿಯನ್ನು ಸಲ್ಲಿಸಿ, ಪ್ರಕ್ರಿಯೆ ಪ್ರಕಾರವೇ ಅದನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುವುದು” ಎಂದು ಪೀಠವು ದೂರುದಾರರ ಪರ ವಕೀಲರಿಗೆ ಸೂಚಿಸಿದೆ.





