ತಮಿಳುನಾಡಿನ ತಿರುನೆಲ್ವೆಲಿ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಅದಕ್ಕೆ ಅನುಮತಿಯಿಲ್ಲ. ನಿಮ್ಮ ಹಿಂದಿನ ನಾಯಕರನ್ನು ವೈಭವೀಕರಿಸಲು ನೀವು ಸಾರ್ವಜನಿಕರ ಹಣವನ್ನು ಏಕೆ ಬಳಸುತ್ತೀರಿ ಎಂದು ನ್ಯಾಯಮೂರ್ತಿಗಳಾದ ವಿಕ್ರಮನಾಥ ಮತ್ತು ಪ್ರಶಾಂತಕುಮಾರ ಮಿಶ್ರಾ ಅವರ ಪೀಠವು ಸಂಕ್ಷಿಪ್ತ ವಿಚಾರಣೆ ವೇಳೆ ಪ್ರಶ್ನಿಸಿತು.
ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪಿ.ವಿಲ್ಸನ್ ಅವರು, ಕಮಾನು ನಿರ್ಮಾಣವನ್ನು ಪ್ರಶ್ನಿಸಲಾಗಿಲ್ಲ, ಹೀಗಾಗಿ ಅದಕ್ಕೆ ಅವಕಾಶ ನೀಡಬಹುದೇ ಎನ್ನುವುದನ್ನು ನ್ಯಾಯಾಲಯವು ಸ್ಪಷ್ಟಪಡಿಸಬೇಕು. ಈಗಾಗಲೇ ಅದಕ್ಕಾಗಿ 30 ಲಕ್ಷ.ರೂ.ಗಳನ್ನು ವ್ಯಯಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಆದರೆ, ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ನ್ಯಾಯಾಲಯವು ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದ ರಾಜ್ಯದ ಅರ್ಜಿಯನ್ನು ವಜಾಗೊಳಿಸಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ
ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆಗಳ ಸ್ಥಾಪನೆಗೆ ಅನುಮತಿಯನ್ನು ನೀಡುವ ಆದೇಶವನ್ನು ಸರಕಾರವು ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಮದ್ರಾಸ್ ಹೈಕೋರ್ಟ್, ‘ಲೀಡರ್ಸ್ ಪಾರ್ಕ್’ ರಚನೆಯು ಈ ದೇಶದ ಯುವಜನರಿಗೆ ಹೆಚ್ಚು ಉಪಯುಕ್ತವಾಗುತ್ತದೆ. ಏಕೆಂದರೆ ಅವರು ನಾಯಕರ ಆಲೋಚನೆಗಳು ಮತ್ತು ಸಿದ್ಧಾಂತಗಳನ್ನು ತಿಳಿದುಕೊಳ್ಳಬಹುದು ಎಂದು ತನ್ನ ಆದೇಶದಲ್ಲಿ ತಿಳಿಸಿತ್ತು.
‘ಲೀಡರ್ಸ್ ಪಾರ್ಕ್’ರಚನೆಗೆ ದೃಢವಾದ ಪ್ರಯತ್ನಗಳನ್ನು ಮಾಡುವ ಬದಲು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆಗಳ ಸ್ಥಾಪನೆಗೆ ಅನುಮತಿ ನೀಡುವ ಆದೇಶಗಳನ್ನು ಸರ್ಕಾರವು ಹೊರಡಿಸುವಂತಿಲ್ಲ. ಇಂತಹ ಅನುಮತಿಗಳನ್ನು ನೀಡಿದರೆ ಭಾರೀ ಸಂಚಾರ ದಟ್ಟಣೆ ಮತ್ತು ಇತರ ಕಿರಿಕಿರಿಗಳಿಂದಾಗಿ ಸಾರ್ವಜನಿಕರು ತೊಂದರೆಯನ್ನು ಅನುಭವಿಸುವಂತಾಗುತ್ತದೆ ಎಂದು ಅದು ಹೇಳಿತ್ತು.
ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆಗಳನ್ನು ಸ್ಥಾಪಿಸಲು ಯಾವುದೇ ಅನುಮತಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿರುವಾಗ ರಾಜ್ಯ ಸರ್ಕಾರವು ಅಂತಹ ಅನುಮತಿಯನ್ನು ನೀಡುವ ಯಾವುದೇ ಆದೇಶಗಳನ್ನು ಹೊರಡಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿತ್ತು.