ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದ ಸಮಯದಲ್ಲಿ ಕಂತೆ-ಕಂತೆಗಳಲ್ಲಿ ಕ್ಯೋಟ್ಯಂತರ ರೂಪಾಯಿ ಹಣ ಪತ್ತೆಯಾಗಿತ್ತು. ಈ ಬೆನ್ನಲ್ಲೇ, ನ್ಯಾಯಮೂರ್ತಿ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ವರ್ಗಾವಣೆ ಮಾಡಿತ್ತು. ಇದೀಗ, ವರ್ಮಾ ಅವರ ಮನೆಯಲ್ಲಿ ಪತ್ತೆಯಾಗಿದ್ದ ಮತ್ತು ಅರೆಬರೆ ಸುಟ್ಟು ಹೋಗಿರುವ ಕಂತೆ-ಕಂತೆ ನೋಟುಗಳ ವಿಡಿಯೋವನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ. ಆ ವಿಡಿಯೋವನ್ನು ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು.
ಮಾರ್ಚ್ 14ರಂದು ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತ್ತು. ಆ ಸಮಯದಲ್ಲಿ ವರ್ಮಾ ಅವರು ಮನೆಯಲ್ಲಿರಲಿಲ್ಲ. ಬೆಂಕಿ ನಂದಿಸಲು ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿಗೆ ಅವರ ನಿವಾಸಕ್ಕೆ ಧಾವಿಸಿದ್ದರು. ಬೆಂಕಿ ನಂದಿಸಿದ ಬಳಿಕ ಪರಿಶೀಲನೆ ನಡೆಸುವಾಗ ಕೊಠಡಿಯೊಂದರಲ್ಲಿ ಕೋಟ್ಯಂತರ ರೂಪಾಯಿ ನಗದು ಹಣ ಪತ್ತೆಯಾಗಿತ್ತು. ಆ ಹಣದ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗಿದ್ದವು.
ವರ್ಮಾ ಅವರ ಮನೆಯಲ್ಲಿ ಹಣ ಪತ್ತೆಯಾಗಿರುವ ಬಗ್ಗೆ ಪೊಲೀಸ್ ಆಯುಕ್ತ ಅರೋರಾ ಅವರು ಸಿಜೆಐ ಸಂಜೀವ್ ಖನ್ನಾ ಅವರಿಗೆ ಮಾಹಿತಿ ಒದಗಿಸಿದ್ದರು. ಬಳಿಕ, ಸುಪ್ರೀಂ ಕೋರ್ಟ್ ಕೊಲಿಜಿಯಂ ಸಭೆ ನಡೆಸಿ, ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಇತ್ತೀಚೆಗೆ, ಪೊಲೀಸ್ ಆಯುಕ್ತ ಅರೋರಾ ಅವರು ಸಿಜೆಐ ಸಂಜೀವ್ ಖನ್ನಾ ಮತ್ತು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ ಉಪಾಧ್ಯಾಯ ಅವರಿಗೆ ವಿಡಿಯೋ ದಾಖಲೆಗಳನ್ನು ಸಲ್ಲಿಸಿದ್ದರು. ಇದೀಗ, ಸುಪ್ರೀಂ ಕೋರ್ಟ್ ವಿಡಿಯೋ ಬಿಡುಗಡೆ ಮಾಡಿದೆ. ಅಲ್ಲದೆ, ತನಿಖೆಗಾಗಿ ಮೂವರು ಸದಸ್ಯರಿರುವ ಸಮಿತಿ ರಚಿಸಿದ್ದಾರೆ.
#WATCH | The Supreme Court released the inquiry report filed by Delhi High Court Chief Justice Devendra Kumar Upadhyaya into the controversy relating to High Court Justice Yashwant Varma. In his report, the Delhi High Court Chief Justice said that he is of the prima facie opinion… pic.twitter.com/1xgMh8xWNW
— ANI (@ANI) March 22, 2025
ಸಮಿತಿಯಲ್ಲಿ ಪಂಜಾಬ್-ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಜಿ.ಎಸ್ ಸಂಧವಾಲಿಯಾ ಹಾಗೂ ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶೆ ಅನು ಶಿವರಾಮನ್ ಅವರಿದ್ದಾರೆ.ಪ್ರಕರಣದ ಬಗ್ಗೆ ತನಿಖೆ ನಡೆಯಲಿದೆ.
ತನಿಖೆ ವೇಳೆ ಮುಖ್ಯವಾಗಿ ಮೂರು ಪ್ರಶ್ನೆಗಳಿಗೆ ವರ್ಮಾ ಅವರಿಂದ ಸ್ಪಷ್ಟನೆ ಪಡೆಯುವಂತೆ ತನಿಖಾ ಸಮಿತಿಗೆ ಸಿಜೆಐ ಸೂಚಿಸಿದ್ದಾರೆ. 1. ಅವರ ಮನೆಯ ಕೊಠಡಿಯಲ್ಲಿ ಪತ್ತೆಯಾದ ಹಣಕ್ಕೆ ಹೇಗೆ ಲೆಕ್ಕ ನೀಡುತ್ತಾರೆ? 2. ಕೊಠಡಿಯಲ್ಲಿ ಪತ್ತೆಯಾದ ನಗದಿನ ಮೂಲ ಯಾವುದು? 3. ಮಾರ್ಚ್ 15ರಂದು ಕೊಠಡಿಯಿಂದ ಸುಟ್ಟ ನೋಟುಗಳನ್ನು ತೆಗೆದವರು ಯಾರು? ಈ ಪ್ರಶ್ನೆಗಳಿಗೆ ಸಮಿತಿಯು ಉತ್ತರ ಪಡೆಯಲಿದೆ.
ಜೊತೆಗೆ, ಕಳೆದ ಆರು ತಿಂಗಳಲ್ಲಿ ಹೈಕೋರ್ಟ್ ರಿಜಿಸ್ಟ್ರಿಯಲ್ಲಿ ಸೇವೆ ಸಲ್ಲಿಸಿರುವ, ನ್ಯಾಯಮೂರ್ತಿ ವರ್ಮಾ ಅವರ ನಿವಾಸಕ್ಕೆ ನಿಯೋಜನೆಗೊಂಡಿದ್ದ ಭದ್ರತಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿವರವನ್ನು ಕಲೆ ಹಾಕಿ, ಸಲ್ಲಿಸಬೇಕು. ಕಳೆದ ಆರು ತಿಂಗಳಲ್ಲಿ ನ್ಯಾಯಮೂರ್ತಿ ವರ್ಮಾ ಅವರ ದೂರವಾಣಿ ಕರೆಗಳ ದಾಖಲೆಗಳನ್ನೂ ಸೇವಾ ಪೂರೈಕೆದಾರರಿಂದ ಪಡೆಯಬೇಕು ಎಂದು ಸಿಜೆಐ ಸೂಚಿಸಿದ್ದಾರೆ.
ವಿಡಿಯೋಗಳು ಹೊರಬಂದಿರುವ ಹೊರತಾಗಿಯೂ, ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ. ನನ್ನ ವಿರುದ್ಧ ಪಿತೂರಿ ನಡೆದಿದೆ ಎಂಬ ಸಂದೇಹವಿದೆ ಎಂದು ನ್ಯಾಯಮೂರ್ತಿ ವರ್ಮಾ ಪ್ರತಿಪಾದಿಸಿದ್ದಾರೆ.
ಈ ವರದಿ ಓದಿದ್ದೀರಾ?: ಮಹಾಡ್ ಸತ್ಯಾಗ್ರಹ | ಚವದಾರ್ ನೀರು ಮುಟ್ಟಿ, ಮನುಸ್ಮೃತಿ ಸುಟ್ಟ ಮೊದಲ ದಲಿತ ಬಂಡಾಯ
“ನಾನು ಅಥವಾ ನನ್ನ ಕುಟುಂಬದ ಯಾವುದೇ ಸದಸ್ಯರು ಸ್ಟೋರ್‌ರೂಂನಲ್ಲಿ ಯಾವುದೇ ನಗದನ್ನು ಇಟ್ಟಿರಲಿಲ್ಲ. ಆಪಾದಿತ ನಗದು ನಮಗೆ ಸೇರಿದ್ದು ಎಂಬ ಆರೋಪವು ಸರಿಯಲ್ಲ. ಅದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಆ ಕೊಠಡಿಯನ್ನು ನಾವು ಲಾಕ್ ಕೂಡ ಮಾಡಿರಲಿಲ್ಲ. ತೆರೆದ ಕೊಠಡಿಯಲ್ಲಿ ಯಾರಾದರೂ ಹಣ ಸಂಗ್ರಹಿಸಿ ಇಡುತ್ತಾರೆಯೇ” ಎಂದು ಹೇಳಿದ್ದಾರೆ.
“ಘಟನೆ ನಡೆದ ದಿನ ನಾನು ಮತ್ತು ನನ್ನ ಪತ್ನಿ ಮಧ್ಯಪ್ರದೇಶದಲ್ಲಿದ್ದೆವು. ನನ್ನ ಮಗಳು ಮತ್ತು ವಯಸ್ಸಾದ ತಾಯಿ ಮಾತ್ರ ಮನೆಯಲ್ಲಿದ್ದರು. ಮಧ್ಯರಾತ್ರಿಯಲ್ಲಿ ಬೆಂಕಿ ಕಾಣಿಸಿಕೊಂಡಾಗ, ಮಗಳು ಮತ್ತು ಖಾಸಗಿ ಕಾರ್ಯದರ್ಶಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಬೆಂಕಿ ನಂದಿಸುವವಾಗ ನಮ್ಮ ಮನೆಯ ಸದಸ್ಯರನ್ನು ದೂರ ಇರುವಂತೆ ಸಿಬ್ಬಂದಿಗಳು ಸೂಚಿಸಿದ್ದರು. ಬೆಂಕಿ ನಂದಿಸಿದ ಬಳಿಕ, ಸ್ಥಳಕ್ಕೆ ಮರಳಿದಾಗ ಅಲ್ಲಿ ಯಾವುದೇ ನಗದು ಇದ್ದುದ್ದನ್ನು ನಮ್ಮ ಕುಟುಂಬದವರು ನೋಡಿಲ್ಲ” ಎಂದು ಅವರು ಹೇಳಿದ್ದಾರೆ.
“ನನ್ನ ವಿರುದ್ಧದ ಆರೋಪವು ನನ್ನ ಮಾನಹಾನಿ ಮಾಡುವ ಉದ್ದೇಶದಂತೆ ಕಾಣುತ್ತಿದೆ. ಮಾಧ್ಯಮಗಳು ಕೆಲವು ವಿಚಾರಣೆಗಳನ್ನು ಅರಿತುಕೊಂಡು ವರದಿ ಮಾಡಬೇಕು. ಆರೋಪಗಳು ನನ್ನ ಪ್ರತಿಷ್ಠೆಗೆ ತೀವ್ರ ಧಕ್ಕೆ ತಂದಿವೆ. ನನ್ನನ್ನು ಕಳಂಕಿತನನ್ನಾಗಿ ಮಾಡಿದೆ. ಇದು ಸರಿಪಡಿಸಲಾಗದಷ್ಟು ಹಾನಿ ಉಂಟುಮಾಡಿದೆ” ಎಂದಿದ್ದಾರೆ.