ಪಶ್ಚಿಮ ಬಂಗಾಳದ ಸರ್ಕಾರಿ ಅನುದಾನಿತ ಶಾಲೆಗಳಿಗೆ 25,753 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕವನ್ನು ಅಸಿಂಧುಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ತಂತ್ರಗಾರಿಕೆ, ಮರೆಮಾಚುವಿಕೆ ಹಾಗೂ ಹಣಕ್ಕಾಗಿ ಶಾಲಾ ಉದ್ಯೋಗ ನೀಡಲಾಗಿದೆ ಎಂಬುದನ್ನು ಉಲ್ಲೇಖಿಸಿರುವ ಕೋರ್ಟ್, ನೇಮಕಾತಿ ರದ್ದುಗೊಳಿಸಿ ಕಲ್ಕತ್ತ ಹೈಕೋರ್ಟ್, 2024ರ ಏಪ್ರಿಲ್ 22ರಂದು ನೀಡಿದ್ದ ತೀರ್ಪನ್ನು ಸುಪ್ರೀಂ ಎತ್ತಿ ಹಿಡಿದಿದೆ. ಸುಪ್ರೀಂ ತೀರ್ಪು ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಭಾರಿ ಮುಜುಗರವನ್ನುಂಟುಮಾಡಿದೆ.
ಆದಾಗ್ಯೂ, ವಜಾಗೊಳಿಸಲಾದ ಅಭ್ಯರ್ಥಿಗಳಲ್ಲಿ ಯಾವುದೇ ನಿರ್ದಿಷ್ಟ ಅಪರಾಧ ಎಸಗಿಲ್ಲ ಎಂಬುದು ಕಂಡುಬರುವ ಅಭ್ಯರ್ಥಿಗಳಿಗೆ ನ್ಯಾಯಾಲಯವು ಎರಡನೇ ಅವಕಾಶ ನೀಡಿದೆ; ಆರೋಪಗಳಲ್ಲಿ ಭಾಗಿಯಾಗಿಲ್ಲದ ಅಭ್ಯರ್ಥಿಗಳು ಸೂಕ್ತ ವಯಸ್ಸಿನ ಸಡಿಲಿಕೆಯೊಂದಿಗೆ ಮುಂದಿನ ಸುತ್ತಿನ ನೇಮಕಾತಿ ಪರೀಕ್ಷೆಗಳಲ್ಲಿ ಹಾಜರಾಗಬಹುದು. ನೇಮಕಗೊಂಡು ವಜಾಗೊಂಡಿರುವ ವಿಶೇಷಚೇತನ ಅಭ್ಯರ್ಥಿಗಳು ಕೂಡ ಈ ಪರೀಕ್ಷೆಗಳಲ್ಲಿ ಹಾಜರಾಗಬಹುದು ಎಂದು ಹೇಳಿದೆ.
ಸಾಮೂಹಿಕ ವಜಾಗೊಳಿಸುವಿಕೆಯನ್ನು ಸಮರ್ಥಿಸಿದ ಸುಪ್ರೀಂ ಕೋರ್ಟ್, “ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಇದು ಪ್ರಕ್ರಿಯೆಯನ್ನು ಕಳಂಕಿತಗೊಳಿಸಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತಂತ್ರಗಾರಿಕೆ, ವಂಚನೆಗಳು, ಮಾರೆಮಾಚುವಿಕೆ (ಅಪಾರದರ್ಶಕತೆ) ನಡೆದಿದೆ” ಎಂದು ಹೇಳಿದೆ.
ಅಂದಹಾಗೆ, 2016ರಲ್ಲಿ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗವು (WBSSC) ರಾಜ್ಯದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿನ 25,753 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆ ನಡೆಸಿತ್ತು. ಸುಮಾರು 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಹೆಚ್ಚಿನ ಅಭ್ಯರ್ಥಿಗಳ ‘ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್’ (ಒಎಂಆರ್) ಶೀಟ್‌ಗಳನ್ನು ತಪ್ಪಾಗಿ ಮೌಲ್ಯಮಾಪನ ಮಾಡಿ, ಉದ್ಯೋಗ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು.
ಹಣ ಪಡೆದು, ಮೌಲ್ಯಮಾಪನವನ್ನು ತಿರುಚಿ ಅಥವಾ ತಪ್ಪಾಗಿ ಮೌಲ್ಯಮಾಪನ ಮಾಡಿ ಹಲವರಿಗೆ ಉದ್ಯೋಗ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ನೇಮಕಾತಿ ಪ್ರಕ್ರಿಯೆಯನ್ನು ‘ಉದ್ಯೋಗಕ್ಕಾಗಿ ಹಣ ಹಗರಣ’ ಎಂದು ಕರೆಯಲಾಗಿತ್ತು.
ಆಪಾದಿತ ಹಗರಣದ ವಿಚಾರಣೆ ನಡೆಸಿದ್ದ ಕಲ್ಕತ್ತಾ ಹೈಕೋರ್ಟ್, ಕಳೆವ ವರ್ಷ (2024) ಏಪ್ರಿಲ್‌ನಲ್ಲಿ ನೇಮಕಾತಿಗಳನ್ನು ರದ್ದುಗೊಳಿಸಿತ್ತು. ”ಉತ್ತರ ಪತ್ರಿಕೆಗಳನ್ನು ಸೂಕ್ತವಾಗಿ ಮೌಲ್ಯಮಾಪನ ಮಾಡಲಾಗಿದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಆದ್ದರಿಂದ, ನೇಮಕಾತಿ ಪ್ರವೇಶ ಪರೀಕ್ಷೆಗಳ ಎಲ್ಲ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ರದ್ದುಗೊಳಿಸಲಾಗುತ್ತದೆ” ಎಂದು ಹೈಕೋರ್ಟ್ ಹೇಳಿತ್ತು. ನೇಮಕಾತಿಗಳನ್ನು ರದ್ದುಗೊಳಿಸಲು ಆದೇಶಿಸಿತ್ತು.
ಬಳಿಕ, ಪ್ರಕರಣದಲ್ಲಿ ಹಿರಿಯ ರಾಜ್ಯ ಸಚಿವರನ್ನು ಬಂಧಿಸಲಾಗಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ”ಕೆಲವರ ತಪ್ಪಿಗೆ ಹಲವರನ್ನು ಶಿಕ್ಷಿಸುವುದು ಅಮಾನವೀಯ. ಈ ರೀತಿ ವ್ಯಾಪಕ ವಜಾಗೊಳಿಸುವಿಕೆ ಶಾಲಾ ಶಿಕ್ಷಣ ವ್ಯವಸ್ಥೆಗೆ ಹಾನಿ ಉಂಟುಮಾಡುತ್ತವೆ” ಎಂದು ಸರ್ಕಾರ ತನ್ನ ಮೇಲ್ಮನವಿಯಲ್ಲಿ ವಾದಿಸಿತ್ತು.
ಪ್ರಕರಣವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ವಿಚಾರಣೆ ನಡೆಸಿದ್ದಾರೆ. ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದ್ದಾರೆ. ”ಪ್ರತಿ ಹಂತದಲ್ಲೂ ತಿರುಚುವಿಕೆ ವಂಚನೆ ಮತ್ತು ಮರೆಮಾಚುವಿಕೆ ನಡೆದಿರುವುದನ್ನು ನೋಡಿದರೆ, ಅದು ಪಾರದರ್ಶಕತೆ, ಪರಿಶೀಲನೆ ಮತ್ತು ದೃಢೀಕರಣ ಸಾಧ್ಯವೇ ಇಲ್ಲ ಎಂಬಂತಿದೆ. ಅಕ್ರಮಗಳಿಂದಾಗಿ ಸಂಪೂರ್ಣ ಆಯ್ಕೆ ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕವಾಗಿ ರಾಜಿ ಮಾಡಿಕೊಳ್ಳಲಾಗಿದೆ ಎಂಬುದು ನಮಗೆ ಮನವರಿಕೆಯಾಗಿದೆ” ಎಂದು ಕೋರ್ಟ್ ಹೇಳಿದೆ.
ಹೈಕೋರ್ಟ್ ತೀರ್ಪು ಮತ್ತು ಸಿಬಿಐ ವಿಚಾರಣೆಯನ್ನು ಉಲ್ಲೇಖಿಸಿಸಿರುವ ಸುಪ್ರೀಂ ಕೋರ್ಟ್, ನೇಮಕಾತಿ ಪ್ರಕ್ರಿಯೆಯಲ್ಲಿ 4 ರೀತಿಯ ಅಕ್ರಮಗಳು ನಡೆದಿವೆ ಎಂದು WBSSC ಕೂಡ ಒಪ್ಪಿಕೊಂಡಿದೆ ಎಂಬುದನ್ನು ಗಮನಿಸಿದೆ.
- ಫಲಿತಾಂಶದಲ್ಲಿ ಕೆಳಗಿನ ಶ್ರೇಣಿಯಲ್ಲಿದ್ದ ಅಭ್ಯರ್ಥಿಗಳು ಉನ್ನತ ಶ್ರೇಣಿಯ ಅಭ್ಯರ್ಥಿಗಳಿಗಿಂತ ಆದ್ಯತೆ ಪಡೆದಿದ್ದಾರೆ.
- ಶಾರ್ಟ್‌ಲಿಸ್ಟ್‌ನಲ್ಲಿ ಹೊರಗಿಡಲಾಗಿದ್ದ ಅಭ್ಯರ್ಥಿಗಳನ್ನು ಶಿಫಾರಸು ಮಾಡಿ ನೇಮಕ ಮಾಡಿಕೊಳ್ಳಲಾಗಿದೆ.
- WBSSC ಶಿಫಾರಸು ಮಾಡದಿದ್ದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.
- OMR ಅಂಕಗಳನ್ನು ತಿರುಚಲಾಗಿದೆ.
ಒಎಂಆರ್ ಶೀಟ್‌ಗಳ ನಾಶ ಮತ್ತು ಅಂಕ ತಿರುಚುವಿಕೆ
ಒಂದು ವರ್ಷ ಅವಧಿಯ ನಿಯಮವನ್ನು ಉಲ್ಲೇಖಿಸಿ ಸಹಾಯಕ-ಶಿಕ್ಷಕ ಅಭ್ಯರ್ಥಿಗಳ OMR ಉತ್ತರ ಪತ್ರಿಕೆಗಳನ್ನು ನಾಶ ಮಾಡಿರುವುದನ್ನು WBSSC ಸಮರ್ಥಿಸಿಕೊಂಡಿದೆ. ಆದರೂ, ನಿಯಮಗಳು ಒಳಗೊಂಡಿರದ ಗ್ರೂಪ್ C ಮತ್ತು D ಅಭ್ಯರ್ಥಿಗಳ OMR ಹಾಳೆಗಳನ್ನು ಕೂಡ ನಾಶ ಮಾಡಲಾಗಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.
”ಭೌತಿಕ OMR ಹಾಳೆಗಳ ನಾಶ ಮತ್ತು OMR ಹಾಳೆಗಳ ಸ್ಕ್ಯಾನ್ ಮಾಡಿದ ಪತ್ರಿಗಳನ್ನು ನಿರ್ವಹಿಸುವಲ್ಲಿ ಸೇವಾ ಆಯೋಗದ ವಿಫಲತೆಯನ್ನು ಕಲ್ಕತ್ತಾ ಹೈಕೋರ್ಟ್ ಸರಿಯಾಗಿ ಪರಿಗಣಿಸಿದೆ. ಆಯ್ಕೆ ಪ್ರಕ್ರಿಯೆಯಲ್ಲಿನ ಅಕ್ರಮಗಳು ಮತ್ತು ಲೋಪಗಳನ್ನು ಮುಚ್ಚಿಹಾಕುವ ಪ್ರಯತ್ನದ ಭಾಗವಾಗಿ ಒಎಂಆರ್ ಹಾಳೆಗಳನ್ನು ನಾಶ ಮಾಡಲಾಗಿದೆ” ಎಂದು ಕೋರ್ಟ್ ಹೇಳಿದೆ.
ಈ ವರದಿ ಓದಿದ್ದೀರಾ?: ಗಚ್ಚಿಬೌಲಿ ಅರಣ್ಯದಲ್ಲಿ ಐಟಿ ಪಾರ್ಕ್: ವಿದ್ಯಾರ್ಥಿಗಳ ಹೋರಾಟಕ್ಕೆ ಬಿಆರ್‌ಎಸ್ ಬೆಂಬಲ; ರಾಹುಲ್ ಗಾಂಧಿ ಮೌನ
ಪ್ರಕರಣದ ತನಿಖೆ ನಡೆಸಿರುವ ಸಿಬಿಐ ವರದಿಯು, ಒಎಂಆರ್ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮತ್ತು ಸೇವಾ ಮಂಡಳಿ ದಾಖಲಿಸಿದ ಅಂಕಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿದೆ. ನಿರ್ದಿಷ್ಟ ಅಭ್ಯರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡಲಾಗಿದೆ. ಅಂಕಗಳ ಡೇಟಾವನ್ನು ತಿರುಚಲಾಗಿದೆ ಎಂಬುದನ್ನು ತೋರಿಸಿದೆ.
ಕಳಂಕಿತ ಅಭ್ಯರ್ಥಿಗಳು ತಮ್ಮ ನೇಮಕಾತಿಯ ನಂತರ ಪಡೆದ ಯಾವುದೇ ಪಾವತಿಗಳನ್ನು (ವೇತನ) ಸರ್ಕಾರಕ್ಕೆ ಮರುಪಾವತಿಸುವಂತೆ ಸೂಚಿಸಿದ್ದ ಹೈಕೋರ್ಟ್ ಆದೇಶವನ್ನೂ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. “ಅವರ ನೇಮಕಾತಿಗಳು ವಂಚನೆಯಿಂದ ಆಗಿರುವುದರಿಂದ, ಅವರು ಪಡೆದ ಪಾವತಿಗಳೂ ವಂಚನೆಗೆ ಸಮನಾಗಿರುತ್ತವೆ. ಹೀಗಾಗಿ, ಹೈಕೋರ್ಟ್ ಸೂಚನೆಯನ್ನು ಬದಲಾಯಿಸಲು ನಮಗೆ ಯಾವುದೇ ಸಮರ್ಥ ಅಂಶ ಕಾಣುತ್ತಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕಳಂಕಿತರಲ್ಲದವರಿಗೆ ಪರಿಹಾರ
ಕಳಂಕಿತರೆಂದು ನಿರ್ದಿಷ್ಟವಾಗಿ ಕಂಡುಬಂದಿಲ್ಲದ ಅಭ್ಯರ್ಥಿಗಳನ್ನು ವಜಾಗೊಳಿಸಲಾಗಿದೆ. ಆದರೂ, ಸಾಮೂಹಿಕ ವಜಾಗೊಳಿಸುವಿಕೆಯಿಂದ ಖಾಲಿ ಆಗಿರುವ ಹುದ್ದೆಗಳನ್ನು ಭರ್ತಿ ಮಾಡಲು ಮುಂದಿನ ಸುತ್ತಿನ ನೇಮಕಾತಿಗಳಲ್ಲಿ ಸೂಕ್ತ ವಯಸ್ಸಿನ ಸಡಿಲಿಕೆಯೊಂದಿಗೆ ಅವರು ಭಾಗವಹಿಸಲು ಅರ್ಹರಾಗಿರುತ್ತಾರೆ ಎಂದು ಕೋರ್ಟ್ ಹೇಳಿದೆ.
”ಕಳಂಕಿತರಲ್ಲದ ಅಭ್ಯರ್ಥಿಗಳು ತಮ್ಮ ಹಿಂದಿನ ಇಲಾಖೆಗಳ (ಅಥವಾ ಸ್ವಾಯತ್ತ ಸಂಸ್ಥೆಗಳಿಗೆ) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಅರ್ಜಿಗಳನ್ನು ಆಯಾ ಸರ್ಕಾರಿ ಇಲಾಖೆಗಳು ಅಥವಾ ಸಂಸ್ಥೆಗಳು ಮೂರು ತಿಂಗಳೊಳಗೆ ಪ್ರಕ್ರಿಯೆಗೊಳಿಸಬೇಕು. ಅಭ್ಯರ್ಥಿಗಳು ತಮ್ಮ ಹುದ್ದೆಗಳನ್ನು ಪುನರಾರಂಭಿಸಲು ಅನುಮತಿಸಬೇಕು. ಅಲ್ಲದೆ, ಅವರ ಹಿರಿತನ ಮತ್ತು ಇತರ ಅರ್ಹತೆಗಳನ್ನು ಮಾನ್ಯ ಮಾಡಲಾಗುತ್ತದೆ. ಅವರು ಬಡ್ತಿಗಳಿಗೆ ಅರ್ಹರಾಗಿರುತ್ತಾರೆ” ಎಂದು ತೀರ್ಪು ಹೇಳಿದೆ.