ಸರ್ಕಾರಿ ಅಧಿಕಾರಿಗಳು ಮಾಹಿತಿಯನ್ನು ಪೂರ್ವಭಾವಿಯಾಗಿ ಬಹಿರಂಗಪಡಿಸುವುದು ಸೇರಿದಂತೆ ಮಾಹಿತಿ ಹಕ್ಕು ಕಾಯ್ದೆ-2005ರ (ಆರ್‌ಟಿಐ) ಎಲ್ಲ ನಿಬಂಧನೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರಲು ಕೇಂದ್ರ ಮಾಹಿತಿ ಆಯೋಗ ಮತ್ತು ರಾಜ್ಯ ಮಾಹಿತಿ ಆಯೋಗಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಆರ್‌ಟಿಐನ ಎಲ್ಲ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಕೋರಿ ಕಿಶನ್ ಚಂದ್ ಜೈನ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಿದೆ. “ಸಾರ್ವಜನಿಕ ಹೊಣೆಗಾರಿಕೆಯು ‘ಕರ್ತವ್ಯ ಪಾಲಕರು’ ಮತ್ತು ‘ಹಕ್ಕುದಾರರ’ ನಡುವಿನ ಸಂಬಂಧವನ್ನು ನಿಯಂತ್ರಿಸುವ ನಿರ್ಣಾಯಕ ಲಕ್ಷಣವಾಗಿದೆ” ಎಂದು ಹೇಳಿದೆ.
“ಅಧಿಕಾರ ಮತ್ತು ಜವಬ್ದಾರಿಯು ಜೊತೆಜೊತೆಯಲ್ಲಿ ಸಾಗುತ್ತದೆ. ಆರ್‌ಟಿಐನ ಸೆಕ್ಷನ್ 3ರ ಅಡಿಯಲ್ಲಿ ಎಲ್ಲ ನಾಗರಿಕರು ‘ಮಾಹಿತಿ ಹಕ್ಕು’ ಹೊಂದಿದ್ದರೂ, ಕಾಯಿದೆಯ ಸೆಕ್ಷನ್ 4ರ ಅಡಿಯಲ್ಲಿ ಸರ್ಕಾರಿ ಅಧಿಕಾರಿಗಳ ಬಾಧ್ಯತೆಗಳ ರೂಪದಲ್ಲಿ ‘ಕರ್ತವ್ಯ’ವನ್ನು ಗುರುತಿಸಲಾಗಿದೆ” ಎಂದು ಸಿಜೆಐ ಚಂದ್ರಚೂಡ್ ಹೇಳಿದ್ದಾರೆ.
“ಕೇಂದ್ರ ಮಾಹಿತಿ ಆಯೋಗ ಮತ್ತು ರಾಜ್ಯ ಮಾಹಿತಿ ಆಯೋಗಗಳು ಕಾಯಿದೆಯ ಸೆಕ್ಷನ್ 4ರ ಆದೇಶದ ಅನುಷ್ಠಾನವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಹಾಗೆಯೇ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಕಾಲಕಾಲಕ್ಕೆ ಹೊರಡಿಸಿದ ಜ್ಞಾಪಕ ಪತ್ರಗಳಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಬೇಕು” ಎಂದು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರು ಹೇಳಿದ್ದಾರೆ.
ಆರ್‌ಟಿಐ ಕಾಯಿದೆಯ ಸೆಕ್ಷನ್ 4(1)(ಬಿ) ಸಾರ್ವಜನಿಕ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಬಹಿರಂಗಪಡಿಸಬೇಕಾದ ಮಾಹಿತಿಯ ಬಗ್ಗೆ ಹೇಳುತ್ತದೆ. ವಿಭಾಗ 4(2) ಮತ್ತು ವಿಭಾಗ 4(3) – ಮಾಹಿತಿಯ ಪ್ರಸರಣ ವಿಧಾನವನ್ನು ಸೂಚಿಸುತ್ತವೆ.