ನರೇಂದ್ರ ಮೋದಿ ಮೂರನೇ ಸರ್ಕಾರದಲ್ಲಿ ರಾಜ್ಯ ಖಾತೆಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವು ಗಂಟೆಗಳ ನಂತರ ಮಲಯಾಳಂ ನಟ ಹಾಗೂ ಕೇರಳದ ಬಿಜೆಪಿ ಸಂಸದ ಸುರೇಶ್ ಗೋಪಿ ತಮಗೆ ಮಂತ್ರಿ ಸ್ಥಾನ ಬೇಡವೆನ್ನುತ್ತಿದ್ದಾರೆ. ನನ್ನನ್ನು ಮಂತ್ರಿ ಸ್ಥಾನದಿಂದ ಮುಕ್ತಗೊಳಿಸಿ, ತ್ರಿಶೂರು ಸಂಸದನಾಗಿ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಮಲಯಾಳಂ ಸಿನಿಮಾ ನಟನ ವೃತ್ತಿಯಿಂದ ರಾಜಕೀಯಕ್ಕೆ ಸೇರ್ಪಡೆಗೊಂಡಿದ್ದ ಸುರೇಶ್ ಗೋಪಿ ತಾವು ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಬೇಕಿರುವುದು ಕೂಡ ಕೇಂದ್ರ ಮಂತ್ರಿ ಸ್ಥಾನದಿಂದ ಬಿಡುಗಡೆಗೆ ಅನುಮತಿ ಕೇಳುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುಬಾರಿ ಚುನಾವಣೆಗಳು, ಸಾಮಾನ್ಯರ ಸ್ಪರ್ಧೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ
ಪ್ರಮಾಣವಚನ ಸ್ವೀಕರಿಸಿದ ಕೆಲವು ಗಂಟೆಗಳ ನಂತರ ದೆಹಲಿಯಲ್ಲಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಸುರೇಶ್ ಗೋಪಿ, “ನನ್ನ ಉದ್ದೇಶ ಸಂಸದನಾಗಿ ಕಾರ್ಯನಿರ್ವಹಿಸಬೇಕಿದೆ.ನಾನು ಏನನ್ನು ಕೇಳುವುದಿಲ್ಲ. ನನಗೆ ಈ ಹುದ್ದೆ ಅಗತ್ಯವಿಲ್ಲ ಎಂದು ಹೇಳಿದ್ದೆ. ನನ್ನನ್ನು ಶೀಘ್ರದಲ್ಲೇ ಹುದ್ದೆಯಿಂದೆ ಬಂಧಮುಕ್ತಗೊಳಿಸಲಾಗುತ್ತದೆ. ನನಗೆ ತ್ರಿಶೂರು ಮತದಾರರಿಂದ ಯಾವುದೇ ಸಮಸ್ಯೆಯಿಲ್ಲ. ನಾನು ಸಂಸದನಾಗಿ ಅವರಿಗಾಗಿ ಉತ್ತಮವಾಗಿ ಕೆಲಸ ಮಾಡುತ್ತೇನೆಂದು ಅವರಿಗೆ ಗೊತ್ತಿದೆ. ನಾನು ಒಪ್ಪಿಕೊಂಡಿರುವ ಸಿನಿಮಾಗಳನ್ನು ಕಡ್ಡಾಯವಾಗಿ ಮುಗಿಸಬೇಕಿದೆ” ಎಂದು ತಿಳಿಸಿದ್ದಾರೆ.
ಕೇರಳದಿಂದ ಸುರೇಶ್ ಗೋಪಿ ಜೊತೆಗೆ ಜಾರ್ಜ್ ಕುರಿಯನ್ ಕೂಡ ಕೇಂದ್ರ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಎಡ ಪಂಥೀಯ ಭದ್ರಕೋಟೆಯಾದ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಸುರೇಶ್ ಗೋಪಿ ಅವರು ಸಿಪಿಐನ ವಿ ಎಸ್ ಸುನಿಲ್ ಕುಮಾರ್ ಅವರನ್ನು 74 ಸಾವಿರಗಳ ಮತಗಳ ಅಂತರದಿಂದ ಸೋಲಿಸಿದ್ದರು.
ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತ್ರಿಶೂರಿಗೆ ಒಂದು ಕೇಂದ್ರ ಸಚಿವ ಸ್ಥಾನ, ಅದು ಮೋದಿ ಗ್ಯಾರಂಟಿ ಎಂದು ಪ್ರಚಾರ ನಡೆಸಲಾಗಿತ್ತು.
