ಮೊಬೈಲ್ ಫೋನ್ ಕದ್ದಿದ್ಧಾನೆಂಬ ಅನುಮಾನದ ಮೇಲೆ ಯುವಕನನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.
ಸಿದ್ದಾರ್ಥ್ ಎಂಬುವವರ ಮೇಲೆ ಸೋನು ಕುಮಾರ್ ಮತ್ತು ಸ್ನೇಹಿತರು ಹಲ್ಲೆ ಮಾಡಿದ್ದಾರೆ. ಸೋನು ಕುಮಾರ್ ಅವರ ಮನೆಯಲ್ಲಿದ್ದ ಮೊಬೈಲ್‌ಅನ್ನು ಸಿದ್ಧಾರ್ಥ್ ಕದ್ದಿದ್ದಾರೆಂಬ ಅನುಮಾನದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿದ್ಧರ್ಥ್ ಅವರನ್ನು ಮರಕ್ಕೆ ಕಟ್ಟಿ, ಆರೋಪಿಗಳು ದೊಣ್ಣೆಗಳಿಂದ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಗ್ರಾಮಸ್ಥರು ಸಿದ್ದಾರ್ಥ್‌ನನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸೋನು ಮತ್ತು ಗುಲಾಬ್‌ನನ್ನು ಬಂಧಿಸಿದ್ದಾರೆ.
ಕಳೆದ ತಿಂಗಳು, ಬಿಹಾರ ರಾಜಧಾನಿ ಪಾಟ್ನಾದಲ್ಲಿ ಟ್ರಾನ್ಸ್‌ಫಾರ್ಮರ್ ರಿಪೇರಿ ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾರೆಂಬ ಶಂಕೆಯ ಮೇಲೆ ಇಬ್ಬರು ಯುವಕರನ್ನು ಜನರ ಗುಂಪು ಹೊಡೆದು ಕೊಂದಿತ್ತು.