ಹೊರ ದೆಹಲಿಯ ಪ್ರಹ್ಲಾದ್ಪುರ ಬಾಂಗರ್ ಗ್ರಾಮದಲ್ಲಿ 22 ವರ್ಷದ ಮಹಿಳೆಯೊಬ್ಬಳು ತಮ್ಮ ಮನೆಯ ಶೌಚಾಲಯದಲ್ಲಿ ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಘಟನೆಯ ನಂತರ ಆಕೆಯ ಪತಿ ಹಾಗೂ ಸಣ್ಣ ಮಗು ನಾಪತ್ತೆಯಾಗಿದ್ದು, ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
ಮೃತರನ್ನು ಸಬೀಲಾ ಖಾತೂನ್ (22) ಎಂದು ಗುರುತಿಸಲಾಗಿದೆ. ಇವರು ಮೊಹಮ್ಮದ್ ಲಾಲ್ಬಾಬು ಎಂಬುವವರನ್ನು ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ಪ್ರಹ್ಲಾದ್ಪುರ ಬಾಂಗರ್ನಲ್ಲಿ ವಾಸಿಸುತ್ತಿದ್ದರು.
ಇದನ್ನೂ ಓದಿ: ಉತ್ತರ ಕನ್ನಡ | ಶಿರೂರು ದುರಂತ : ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಶವ ಪತ್ತೆ
ಆಗಸ್ಟ್ 29ರಂದು ಶಹಬಾದ್ ಡೈರಿ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ತಲುಪಿದೆ. ಮೃತ ಸಬೀಲಾ ಅವರ ಸಹೋದರ ಮೊಹಮ್ಮದ್ ಗುಲಾಬ್ ಅವರು ಸಹೋದರಿಯ ಮನೆಗೆ ತೆರಳಿದಾಗ, ಆಕೆ ಶೌಚಾಲಯದಲ್ಲಿ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಆದರೆ, ಮನೆಯಲ್ಲಿ ಪತಿ ಹಾಗೂ ಮಗು ಇರಲಿಲ್ಲ.
ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಶಹಬಾದ್ ಡೈರಿ ಠಾಣೆ ಪೊಲೀಸರು, ನಾಪತ್ತೆಯಾಗಿರುವ ಪತಿ ಮೊಹಮ್ಮದ್ ಲಾಲ್ಬಾಬು ಅವರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.




