ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ದೈಹಿಕ ಹಾಗೂ ಮಾನಸಿಕ ಸದೃಢತೆಯೊಂದಿಗೆ ಪರಿಪೂರ್ಣ ವ್ಯಕ್ತಿತ್ವ ವಿಕಸನ ಹೊಂದಲು ಸಾಧ್ಯ ಎಂದು ಪ್ರಾಂಶುಪಾಲರಾದ ಡಾ. ಕಸ್ತೂರೆವ್ವ ದಳವಾಯಿ ಹೇಳಿದರು.
ಭಾರತೀಯ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ಚಂದ್ ಅವರ ಜನ್ಮದಿನದ ಅಂಗವಾಗಿ ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೀಡಾ ವಿಭಾಗದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಹಾಕಿಯಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಉತ್ತುಂಗಕ್ಕೆ ಕೊಂಡೊಯ್ದ ಧ್ಯಾನ್ಚಂದ್ ಅವರ ಶಿಸ್ತು, ದೇಶಪ್ರೇಮ ಹಾಗೂ ಸಮರ್ಪಣಾ ಮನೋಭಾವ ಯುವಪೀಳಿಗೆಗೆ ಸದಾ ಪ್ರೇರಣಾದಾಯಕ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆಗಳು ಒತ್ತಡ ನಿವಾರಣೆಗೆ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಅತ್ಯುತ್ತಮ ಮಾಧ್ಯಮವಾಗಿವೆ. ಮೊಬೈಲ್ ಸಹವಾಸ ಕಡಿಮೆ ಮಾಡಿ ದೈಹಿಕ ಶ್ರಮತೆಗೆ ಮುಂದಾಗಬೇಕು” ಎಂದು ಸಲಹೆ ನೀಡಿದರು.
ಕಾಲೇಜಿನ ಕ್ರೀಡಾ ವಿಭಾಗದ ಮುಖ್ಯಸ್ಥ ವಿವೇಕಾನಂದ ಹಿರೇಮಠ ಮಾತನಾಡಿ, “ಮೇಜರ್ ಧ್ಯಾನ್ಚಂದ್ ಅವರ ಕ್ರೀಡಾ ಸಾಧನೆ ದೇಶಕ್ಕೆ ಹೆಮ್ಮೆ ತಂದಿದೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಕ್ರೀಡಾ ಮನೋಭಾವವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಕಾಲೇಜು ಮಟ್ಟದಲ್ಲಿ ಲಭ್ಯವಿರುವ ಕ್ರೀಡಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ವಿಶ್ವವಿದ್ಯಾಲಯ ಹಾಗೂ ಇತರೆ ಮಟ್ಟದಲ್ಲಿ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತರಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಎಸ್ಐಆರ್ ಪ್ರಕ್ರಿಯೆ ʼಅವೈಜ್ಞಾನಿಕʼ ಮತ್ತು ʼಪ್ರಜಾಪ್ರಭುತ್ವ ವಿರೋಧಿʼಯಾಗಿ ನಡೆದಿದೆ: ಪ್ರಕಾಶ್ ರಾಜ್
ಕಾರ್ಯಕ್ರಮದ ಆರಂಭದಲ್ಲಿ ಮೇಜರ್ ಧ್ಯಾನ್ಚಂದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಐಕ್ಯೂಎಸಿ ಸಂಚಾಲಕರಾದ ಜಯಶ್ರೀ ಮುತಗಾರ, ಪ್ರಾಧ್ಯಾಪಕರಾದ ಎಸ್ ಎಸ್ ಸೂಡಿ, ಸುನಂದಾ ಮುಂಜಿ, ಅನಿಲಕುಮಾರ, ಶಿವಪ್ಪ ಕುರಬರ, ವಿರೂಪಾಕ್ಷ ಆರ್, ಅಯ್ಯಪ್ಪ, ಎನ್ ಎಸ್ ಹೊನ್ನೂರ, ವಿ ಸಿ ಇಲ್ಲೂರ, ಪಿ ವೈ ಶಾಸ್ತ್ರಿ, ಕೆ ಎನ್ ಕಟ್ಟಿಮನಿ, ವಿವೇಕಾನಂದ ಹಿರೇಮಠ, ಶರಣಪ್ಪ ಚಿಕ್ಕೆನಕೊಪ್ಪ, ಶಂಕರಗೌಡ ಪಾಟೀಲ, ಎಂ ಎಫ್ ತಹಶೀಲ್ದಾರ್, ಎಸ್ ಆರ್ ನದಾಫ್ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.




