ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ವಿಪಕ್ಷ ನಾಯಕ ಹಾಗೂ ಬಿಜೆಪಿ ಶಾಸಕ ಸುವೆಂದು ಅಧಿಕಾರಿ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಬೇಷರತ್ ಕ್ಷಮೆಯಾಚಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಬಂಗಾಳ ಕಾಂಗ್ರೆಸ್ ಕಾರ್ಯದರ್ಶಿ ಸುಮನ್ ರಾಯ್ ಚೌಧರಿ ಹಾಗೂ ಪಕ್ಷದ ವಕ್ತಾರರಾದ ಅಭಿಷೇಕ್ ಬ್ಯಾನರ್ಜಿ ರಾಯ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ನಾನು ಕಳೆದ ನಾಲ್ಕು ದಿನಗಳಿಂದ ಸತತವಾಗಿ ರಾಹುಲ್ ಗಾಂಧಿ ಬಗ್ಗೆ ಕೇಳುತ್ತಿದ್ದೇನೆ. ಯಾರಿವನು? ಈತ ಕೆಲವು ದಿನಗಳ ಹಿಂದೆ ಬೆಳಿಗ್ಗೆ ಟೀ ಮಾಡಲು ಕಲ್ಲಿದ್ದಲುಗಳನ್ನು ಒಲೆಯ ಮೇಲೆ ಇಡುವುದಾಗಿ ಹೇಳಿದ್ದ. ಟೀ ಮಾಡಲು ಕಲ್ಲಿದ್ದಲುಗಳನ್ನು ಒಲೆಯ ಮೇಲೆ ಇಡುವುದು ನನ್ನ ಜ್ಞಾನ ಅಥವಾ ತಿಳುವಳಿಕೆಯನ್ನು ಮೀರಿದ್ದು” ಎಂದು ಸುವಿಂದು ಅಧಿಕಾರಿ ಹಾಸ್ಯ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂವರು ಮಾನಗೆಟ್ಟ ನಾಯಕರು ಮತ್ತು ರಾಮ ರಾಜಕಾರಣ
ಸುವಿಂದು ಅಧಿಕಾರಿ ಹೇಳಿಕೆಯ ವಿರುದ್ಧ ಟಿಎಂಸಿ ವಕ್ತಾರರಾದ ಕುನಾಲ್ ಘೋಷ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಎಂತಹ ಭಾಷೆ? ಖಂಡಿತಾ ಅನಾಗರಿಕ ಹಾಗೂ ಕೆಟ್ಟ ಸಂಸ್ಕೃತಿಯಾಗಿದೆ. ರಾಹುಲ್ ಗಾಂಧಿ ಅವಮಾನಿಸಲು ಎಂತಹ ಭಾಷೆ ಬಳಸಿದ್ದಾರೆ ಎಂದು ಕುನಾಲ್ ಟ್ವೀಟ್ ಮಾಡಿದ್ದಾರೆ.
ಇಂಡಿಯಾ ಒಕ್ಕೂಟದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಂಗಾಳದ ವಿಪಕ್ಷದ ನಾಯಕ ಇಂತಹ ಅವಹೇಳನಕಾರಿ ಭಾಷೆ ಬಳಸಿರುವುದು ತುಂಬಾ ದುರದೃಷ್ಟಕರ ಎಂದು ಬಂಗಾಳ ಕಾಂಗ್ರೆಸ್ ಕಾರ್ಯದರ್ಶಿ ಸುಮನ್ ರಾಯ್ ಚೌಧರಿ ಹೇಳಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿರುವುದಕ್ಕೆ 24 ಗಂಟೆಯೊಳಗಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಚೌಧರಿ ತಿಳಿಸಿದ್ದಾರೆ.