- ತಮಿಳುನಾಡಿನ ಆಟಗಾರರಿಗೆ ಸಿಎಸ್‌ಕೆ ತಂಡದಲ್ಲಿ ಅವಕಾಶವಿಲ್ಲ
- ಸ್ಥಳೀಯರಿಗೆ ಅವಕಾಶ ಸಿಗದ ಬಗ್ಗೆ ವಿಧಾನಸಭೆಯಲ್ಲಿ ಆಕ್ರೋಶ
ಸ್ಥಳೀಯ ಆಟಗಾರರಿಗೆ ಅವಕಾಶ ನೀಡದ ಐಪಿಎಲ್ ಫ್ರಾಂಚೈಸಿ ಸಿಎಸ್‌ಕೆ (ಚೆನ್ನೈ ಸೂಪರ್ ಕಿಂಗ್ಸ್) ತಂಡವನ್ನು ನಿಷೇಧಿಸುವಂತೆ ತಮಿಳುನಾಡು ವಿಧಾನಸಭೆಯಲ್ಲಿ ಒತ್ತಾಯಿಸಲಾಗಿದೆ.
ಧರ್ಮಪುರಿ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷದ ಶಾಸಕ ಎಸ್‌ಪಿ ವೆಂಕಟೇಶ್ವರನ್ ಅವರು ವಿಧಾನಸಭಾ ಅಧಿವೇಶನದ ವೇಳೆ ವಿಷಯ ಪ್ರಸ್ತಾಪಿಸಿದ್ದು, ಸಿಎಸ್‌ಕೆ ತಂಡವು ಇಲ್ಲಿನ ಆಟಗಾರರಿಗೆ ಅವಕಾಶ ನೀಡದೇ ಇರುವುದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಚೆನ್ನೈ ತಂಡವನ್ನು ನಿಷೇಧಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ ಕ್ರೀಡಾ ಮತ್ತು ಯುವಜನ ಕಲ್ಯಾಣ ಇಲಾಖೆಯ ಅನುದಾನದ ಬೇಡಿಕೆಗಳ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವೇಳೆ ಶಾಸಕ ಎಸ್‌ಪಿ ವೆಂಕಟೇಶ್ವರನ್, “ತಮಿಳರ ಭಾವನೆಗಳಿಗೆ ಫ್ರಾಂಚೈಸಿ ಬೆಲೆ ಕೊಟ್ಟಿಲ್ಲ. ನಮ್ಮ ರಾಜ್ಯದ ರಾಜಧಾನಿಯ ತಂಡವೇ ನಮ್ಮವರನ್ನು ನಿರ್ಲಕ್ಷ್ಯಿಸಿದೆ. ಈ ಕುರಿತು ಜನಸಾಮಾನ್ಯರಲ್ಲಿ ಆಕ್ರೋಶವಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಐಪಿಎಲ್ 2023 | ಪೂರನ್, ಸ್ಟೊಯಿನಿಸ್ ಸ್ಫೋಟಕ ಆಟಕ್ಕೆ ಶರಣಾದ ಆರ್‌ಸಿಬಿ; ಲಖನೌಗೆ ಮೂರನೇ ಗೆಲುವು
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ವೆಂಕಟೇಶ್ವರನ್, “ವಿಧಾನಸಭೆಯಲ್ಲಿ ನಾನು ತಮಿಳುನಾಡಿನ ಜನರ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ಫ್ರಾಂಚೈಸಿಯು ಚೆನ್ನೈ ಅನ್ನು ಅದರ ತಂಡದ ಹೆಸರಿನ ಭಾಗವಾಗಿ ಇಟ್ಟುಕೊಂಡು, ತಮಿಳುನಾಡನ್ನು ಪ್ರತಿನಿಧಿಸುತ್ತೇವೆ ಎಂಬಂತೆ ಬಿಂಬಿಸಿ ಲಾಭ ಗಳಿಸುತ್ತಿದ್ದಾರೆ. ಆದರೆ ಆ ತಂಡವು ನಮ್ಮ ರಾಜ್ಯದ ಪ್ರತಿಭಾವಂತ ಸ್ಥಳೀಯ ಆಟಗಾರರಿಗೆ ಅವಕಾಶಗಳನ್ನು ನೀಡುವುದಿಲ್ಲ. ನಮ್ಮ ರಾಜ್ಯದ ಹೆಚ್ಚಿನ ಯುವಕರು ಸಿಎಸ್‌ಕೆ ತಂಡದ ಭಾಗವಾಗಬೇಕೆಂದು ನಾನು ಬಯಸುತ್ತೇನೆ” ಎಂದು ಶಾಸಕರು ಹೇಳಿದ್ದಾರೆ.
ಬುಧವಾರ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್ 16ನೇ ಆವೃತ್ತಿಯ 17ನೇ ಪಂದ್ಯದಲ್ಲಿ ಆತಿಥೇಯ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಸವಾಲನ್ನು ಎದುರಿಸಲಿದೆ.
ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಚೆನ್ನೈ
ಐಪಿಎಲ್ 16ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಕ್ಕೆ ಶರಣಾಗಿದ್ದ ಸಿಎಸ್‌ಕೆ, ನಂತರದ ಎರಡು ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ನಗೆ ಬೀರಿದೆ.
ಚೆನ್ನ ಮತ್ತೊಂದೆಡೆ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿದ್ದು, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿಕಟ ಪೈಪೋಟಿ ನೀಡಿ ಸೋಲು ಕಂಡಿತ್ತು.
ಸಂಭಾವ್ಯ ತಂಡ
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ/ವಿಕೆಟ್ ಕೀಪರ್), ಮಿಷೆಲ್ ಸ್ಯಾಂಟ್ನರ್, ರಾಜವರ್ಧನ್ ಹಂಗರ್ಗೇಕರ್, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ಧ್ರುವ್ ಜುರೆಲ್ / ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಜೇಸನ್ ಹೋಲ್ಡರ್, ಆರ್ ಅಶ್ವಿನ್, ಎಂ ಅಶ್ವಿನ್, ಟ್ರೆಂಟ್ ಬೌಲ್ಟ್, ಯಜ್ವೇಂದ್ರ ಚಹಾಲ್